ಶೃಂಗೇರಿ ಕೆರೆ ಪಂಚಾಯಿತಿ ಹೊರಣೆ ಗ್ರಾಮಸ್ಥರ ಬವಣೆ। ಮರದ ದಿಮ್ಮಿ, ಕಾಲು ಸಂಕವೇ ನಿತ್ಯ ಸಂಚಾರಕ್ಕೆ ದಾರಿ

ನೆಮ್ಮಾರ್ ಅಬೂಬಕರ್

ಕನ್ನಡಪ್ರಭ ವಾರ್ತೆ, ಶೃಂಗೇರಿ

ಸ್ವಾತಂತ್ರ್ಯ ಬಂದು ಸುಮಾರು 75 ವರ್ಷಗಳೇ ಕಳೆದಿವೆ. ಅನೇಕ ಸರ್ಕಾರಗಳು ಬಂದು ಹೋಗಿವೆ. ಆಡಳಿತ, ಜನಪ್ರತಿನಿದಿಗಳು ಬದಲಾಗುತ್ತಲೇ ಇದ್ದಾರೆ. ಆದರೆ ಇಲ್ಲಿಯ ಗ್ರಾಮಸ್ಥರಿಗೆ ಓಡಾಡಲು ಸರಿಯಾದ ರಸ್ತೆಯಿಲ್ಲ. ಸೇತುವೆಯಿಲ್ಲ. ವಿದ್ಯುತ್ ಇಲ್ಲ. ಆಧುನಿಕ ಪ್ರಪಂಚದಲ್ಲಿಯೂ ಮೂಲ ಸೌಕರ್ಯಗಳಿಂದ ವಂಚಿತರಾಗಿ ನಾಗರಿಕ ವ್ಯವಸ್ಥೆ ಯಿಂದ ದೂರವಾದ ಬದುಕು ಇವರದು. ಪ್ರತೀ ವರ್ಷ ಗ್ರಾಮಸ್ಥರೇ ಮರದ ದಿಮ್ಮಿ, ಅಡಕೆ ದಬ್ಬೆ, ಮರದ ಸಾಮಗ್ರಿ, ಬೀಳುಗಳನ್ನು ಬಳಸಿ ಕಾಲು ಸಂಕ ನಿರ್ಮಿಸಿಕೊಂಡು ಅದರಲ್ಲೆ ಓಡಾಡಬೇಕಾದ ದಯನೀಯ ಸ್ಥಿತಿ ಗ್ರಾಮಸ್ಥರದು.

ತಾಲೂಕಿನ ಕೆರೆಪಂಚಾಯಿತಿ ಹೊರಣೆ ಗ್ರಾಮಸ್ಥರ ಜ್ವಲಂತ ಸಮಸ್ಯೆ..ಶೃಂಗೇರಿಯಿಂದ ಸುಮಾರು 25-30 ಕಿ.ಮೀ. ದೂರದ ಈ ಪ್ರದೇಶದಲ್ಲಿ ಗಿರಿಜನ ಕುಟುಂಬಗಳೇ ಹೆಚ್ಚಾಗಿದ್ದು ಈ ಪ್ರದೇಶದಿಂದ ಗ್ರಾಮಸ್ಥರು ಅಗತ್ಯ ಕೆಲಸ ಕಾರ್ಯಗಳಿಗೆ ಹೋಗಲು ಹಳ್ಳ ದಾಟಿ 6 ಕಿ.ಮೀ. ದೂರದ ಮಾತೋಳ್ಳಿ ಮೂಲಕ ಅಲ್ಲಿಂದ 10 ಕಿ.ಮೀ. ಸಾಗಿ ನೆಮ್ಮಾರಿಗೆ ಬರಬೇಕು. ಈ ಕಾಲು ಸಂಕದ ಮೂಲಕವೇ ಶಾಲಾ ಕಾಲೇಜು ವಿದ್ಯಾರ್ಥಿಗಳು, ಗ್ರಾಮಸ್ಥರು ಶಾಲೆ, ಕಾಲೇಜು,ಆಸ್ಪತ್ರೆ,ಪಡಿತರ ಕೇಂದ್ರಗಳಿಗೆ, ಬ್ಯಾಂಕ್,ಕೃಷಿ ಚಟುವಟಿಕೆಗಳಿಗೆ ದಿನನಿತ್ಯ ಓಡಾಡುತ್ತಾರೆ.


ಮಳೆ ಗಾಲದಲ್ಲಿ ಹಳ್ಳದ ನೀರು ಉಕ್ಕಿ ಹರಿದು ಕಾಲುಸಂಕ ಕೊಚ್ಚಿಕೊಂಡು ಹೋಗುತ್ತದೆ. ಹಾಗಾಗಿ ಪ್ರತೀ ವರ್ಷ ಕಾಲು ಸಂಕ ನಿರ್ಮಿಸಬೇಕು. ಕಾಲು ಸಂಕ ಮುಳುಗಿ ಮಳೆಗಾಲದ 6 ತಿಂಗಳು ಹೊರ ಜಗತ್ತಿನ ಸಂಪರ್ಕ ಕಡಿತ. ಮೊಬೈಲ್,ದೂರವಾಣಿ, ವಿದ್ಯುತ್ ಮೂಲ ಸೌಕರ್ಯಗಳಿಲ್ಲದ ಅನಿವಾರ್ಯ ಪರಿಸ್ಥಿತಿ.

ಮಳೆಗಾಲದಲ್ಲಿ ಕೃಷಿ ಚಟುವಟಿಕೆಗಳಿಗೆ ತೆರಳುತ್ತಿದ್ದ ಗ್ರಾಮಸ್ಥ ಶೇಷಪ್ಪ ಕಾಲುಸಂಕದಿಂದ ಆಯತಪ್ಪಿ ಬಿದ್ದು ಗಾಯಗೊಂಡು 6 ತಿಂಗಳು ಚೇತರಿಸಿಕೊಳ್ಳುವಂತಾಯಿತು. ಕಳೆದೆರೆಡು ವರ್ಷಗಳ ಹಿಂದೆ ತೀರ್ಥಹಳ್ಳಿ ಬಳಿ ಕಾಲು ಸಂಕದಲ್ಲಿ ಜಾರಿಬಿದ್ದ ಶಾಲಾ ಬಾಲಕಿ ಕೊಚ್ಚಿಹೋದ ಘಟನೆ ನಮ್ಮ ಕಣ್ಣುಮುಂದೆ ಇದೆ. ದುರ್ಘಟನೆಗಳು ಸಂಭವಿಸಿದಾಗ ಮಾತ್ರ ಪರಿಹಾರ, ಸೇತುವೆ ಭರವಸೆ ನೀಡುತ್ತಾರೆ. ಆದರೆ ಇಲ್ಲಿನವರಿಗೆ ಕಾಲು ಸಂಕವೇ ಗತಿ.

ಒಂದು ಕಡೆ ಸಂಪರ್ಕ ವ್ಯವಸ್ಥೆಯ ಅವ್ಯವಸ್ಥೆ ಇದ್ದರೆ ಮತ್ತೊಂದೆಡೆ ಈ ಗ್ರಾಮಸ್ಥರಿಗೆ ವಿದ್ಯುತ್ ಸಂಪರ್ಕವೇ ಇಲ್ಲ. ಮಕ್ಕಳಿಗೆ ಓದಲು ಚಿಮಣಿ ಬುಡ್ಡಿಗಳನ್ನು ಇಂದಿಗೂ ಬಳಸುತ್ತಾರೆ. ತುರ್ತು ಆರೋಗ್ಯದ ಸಮಸ್ಯೆಯಾದರೆ ದೂರವಾಣಿ, ಮೊಬೈಲ್ ಸೇವೆಯಿಲ್ಲ. ವಾಹನ ಬರಲು ದಾರಿಯಿಲ್ಲ. ಗ್ರಾಮಸ್ಥರು ಕಳೆದ ಹಲವು ವರ್ಷಗಳಿಂದ ತಮ್ಮ ಸಮಸ್ಯೆ ಮುಂದಿಟ್ಟುಕೊಂಡು ಸೇತುವೆ, ವಿದ್ಯುತ್, ರಸ್ತೆ ಮೂಲ ಸೌಕರ್ಯಗಳಿಗಾಗಿ ಸಂಬಂಧ ಪಟ್ಟ ಅಧಿಕಾರಿ, ಸರ್ಕಾರಕ್ಕೆ ಮನವಿ ನೀಡುತ್ತಲೇ ಇದ್ದಾರೆ.

ಗ್ರಾಮಸಭೆ, ಜನಸಂಪರ್ಕ ಸಭೆ, ಜನಸ್ಪಂದನ ಸಭೆ ಹೀಗೆ ಯಾವುದೇ ಅಹವಾಲು, ಮನವಿಗಳಿಗೆ ಬೆಲೆಯೇ ಇಲ್ಲದಂತಾಗಿದೆ. ನಕ್ಸಲ್ ಪೀಡಿತ ಪ್ರದೇಶ ಅಭಿವೃದ್ಧಿ ಪ್ಯಾಕೇಜ್ ಯೋಜನೆಯಡಿ ಗಿರಿಜನ ಅಭಿವೃದ್ಧಿಯಡಿ ಗ್ರಾಮಸ್ಥರಿಗೆ ಯಾವುದೇ ಅಭಿವೃದ್ದಿ ಪ್ರಯೋಜನ ವಾಗಿಲ್ಲ.ಎಲ್ಲದರಿಂದಲೂ ವಂಚಿತರಾಗಿ ದೂರ ಉಳಿದಿದ್ದಾರೆ. ಸಂಬಂದಪಟ್ಟ ಇಲಾಖೆ ತುರ್ತಾಗಿ ಇಲ್ಲಿ ತೂಗುಸೇತುವೆ ನಿರ್ಮಿಸಿಕೊಡಬೇಕು ಎಂಬುದು ಎಲ್ಲರ ಆಶಯ.

-- ಕೋಟ್---

ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿ

ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ನಮಗೆ ಓಡಾಡಲು ಸರಿಯಾದ ರಸ್ತೆಯಿಲ್ಲ. ಸೇತುವೆಯಿಲ್ಲ. ವಿದ್ಯುತ್ ಸೌಲಭ್ಯವಿಲ್ಲ. ನಾವು ಅನೇಕ ಮನವಿ ಮಾಡಿದರೂ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ. ಜೀವ ಭಯದಿಂದ ಕಾಲು ಸಂಕದ ಮೇಲೆ ನಡೆದಾಡಬೇಕು. ಹೆಂಗಸರು, ಶಾಲಾ ಮಕ್ಕಳು ಕೂಡ ಇದರ ಮೇಲೆ ಓಡಾಡುವುದು ಅನಿವಾರ್ಯ.ತುರ್ತಾಗಿ ನಮಗೆ ಸೇತುವೆ ನಿರ್ಮಿಸಿಕೊಡಿ

-ಸತೀಶ್ ಗ್ರಾಮಸ್ಥ.

--

ಅಗತ್ಯ ಮೂಲ ಸೌಕರ್ಯ ಕಲ್ಪಿಸಿ

ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ತಪ್ಪದೆ ಬರುವವರು ಕೇವಲ ಭರವಸೆ ನೀಡುತ್ತಾರೆ. ನಮ್ಮ ಮನವಿಗಳಿಗೆ ಬೆಲೆಯಿಲ್ಲ. ನಾನು ಕಾಲುಸಂಕದಿಂದ ಕೆಳಗೆ ಬಿದ್ದು ಬದುಕಿ ಬಂದೆ. ಯಾರಾದರು ಹೆಂಗಸರು, ಮಕ್ಕಳು ಬಿದ್ದರೆ ಗತಿಯೇನು. ಹಾಗಾದರೆ ನಮ್ಮ ಜೀವಕ್ಕೆ ಬೆಲೆ ಇಲ್ಲವೇ. ಇನ್ನಾದರೂ ಮಾನವೀಯತೆಯಿಂದ ನಮ್ಮ ಸಮಸ್ಯೆಗೆ ಸ್ಪಂದಿಸಿ.ಜೀವ ಇರುವಾಗ ಸ್ಪಂದಿಸಿ, ಜೀವ ಹೋದ ಮೇಲೆ ಪರಿಹಾರ ನೀಡಿ ಪ್ರಯೋಜನವೇನು

- ಶೇಷಪ್ಪ ಗ್ರಾಮಸ್ಥ

17 ಶ್ರೀ ಚಿತ್ರ 1-

ಶೃಂಗೇರಿ ಕೆರೆ ಪಂಚಾಯಿತಿ ಹೊರಣೆಯಲ್ಲಿ ಗ್ರಾಮಸ್ಥರೆ ನಿರ್ಮಿಸಿಕೊಂಡಿರುವ ಕಾಲು ಸಂಕ

17 ಶ್ರೀ ಚಿತ್ರ 2-

ಶೇಷಪ್ಪ

17 ಶ್ಪೀ ಚಿತ್ರ 3-

ಸತೀಶ್