ರೈತ ವಿರೋಧಿ ಧೋರಣೆಗಳಿಂದ ಹಳ್ಳಿಗಳು ಖಾಲಿ ಖಾಲಿ: ಮಲ್ಲಿಕಾರ್ಜುನ ಬಳ್ಳಾರಿ

| Published : Dec 24 2024, 12:46 AM IST / Updated: Dec 24 2024, 12:47 AM IST

ಸಾರಾಂಶ

ರೈತರು ರಾಷ್ಟ್ರದ ಆತ್ಮವಿದ್ದಂತೆ. ಇಲ್ಲಿನ ಜನರ ಉದ್ಯೋಗ ಮತ್ತು ಜೀವನ ಕೃಷಿ ಅವಲಂಬಿತವಾಗಿದೆ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.

ಬ್ಯಾಡಗಿ: ಸರ್ಕಾರದ ರೈತ ವಿರೋಧಿ ಧೋರಣೆಗಳಿಂದ ಕೃಷಿ ಧರ್ಮಕ್ಕೆ ಪೆಟ್ಟು ಬೀಳುತ್ತಿದೆ. ಆತ್ಮಹತ್ಯೆ ಮಾಡಿಕೊಂಡ ರೈತನ ಶವಕ್ಕೆ ಬೆಲೆ ನಿರ್ಧರಿಸುವುದರ ಬದಲು ಸಾವಿನ ನಿಖರ ಕಾರಣಕ್ಕೆ ಪರಿಹಾರ ಕಂಡುಕೊಳ್ಳದಿದ್ದರೇ ದೇಶದಲ್ಲಿ ಕೃಷಿ ಉಳಿಯಲು ಸಾಧ್ಯವಿಲ್ಲ. ವಿಷಯದ ಗಂಭೀರತೆ ಅರ್ಥೈಸಿಕೊಳ್ಳದಿದ್ದರೇ ನಮ್ಮನ್ನಾಳುವ ಸರ್ಕಾರಗಳು ಅಳಬೇಕಾಗುತ್ತದೆ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಸಿದರು.ಸೋಮವಾರ ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಮಾಜಿ ಪ್ರಧಾನಿ ದಿವಂಗತ ಚೌಧರಿ ಚರಣಸಿಂಗ್ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈತರು ರಾಷ್ಟ್ರದ ಆತ್ಮವಿದ್ದಂತೆ. ಇಲ್ಲಿನ ಜನರ ಉದ್ಯೋಗ ಮತ್ತು ಜೀವನ ಕೃಷಿ ಅವಲಂಬಿತವಾಗಿದೆ. ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ನಮ್ಮಿದಿದೆ. ಹೀಗಿದ್ದರೂ ನಮ್ಮನ್ನಾಳುತ್ತಿರುವ ಸರ್ಕಾರಗಳಿಗೆ ರೈತರ ಪ್ರಾಮುಖ್ಯತೆ ಅರ್ಥವಾಗುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ಹಳ್ಳಿಗಳು ಖಾಲಿ

ಕೃಷಿಕ ಸಮಾಜದ ಸದಸ್ಯ ಗಂಗಣ್ಣ ಎಲಿ ಮಾತನಾಡಿ, ಭಾರತದ ಆರ್ಥಿಕತೆಗೆ ರೈತರು ಶೇ. 27ರಷ್ಟು ಕೊಡುಗೆ ನೀಡುತ್ತಿದ್ದೇವೆ. ಹೀಗಿದ್ದರೂ ರೈತ ಕೃಷಿಯಿಂದ ಬರುವ ಲಾಭದಲ್ಲಿ ತನ್ನ ಕುಟುಂಬಗಳ ನಿರ್ವಹಣೆ ಸೇರಿದಂತೆ ಹಣ ಸಂಪಾದಿಸಲು ಹೆಣಗಾಡಬೇಕಾಗಿದೆ. ತುತ್ತಿನ ಚೀಲ ತುಂಬಿಸಿಕೊಳ್ಳಲು ಕೃಷಿಕರ ಮಕ್ಕಳು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇದರಿಂದ ಸದ್ದಿಲ್ಲದಂತೆ ಹಳ್ಳಿಗಳು ಖಾಲಿಯಾಗುತ್ತಿವೆ ಎಂದರು.

ಅನ್ನ ಹಾಕಿದ ಕುಟುಂಬಕ್ಕೇ ಕುತ್ತು

ಕೃಷಿಕ ಸಮಾಜದ ಸದಸ್ಯ ಶಂಕರಗೌಡ್ರ ಪಾಟೀಲ ಮಾತನಾಡಿ, ನಮ್ಮೆಲ್ಲರ ಮೂಲ ಕಸುಬು ಕೃಷಿ. ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೂ ದಿನವಿಡೀ ಶ್ರಮ ಹಾಕಿದರೂ ಕೃಷಿ ಲಾಭದಾಯಕವಾಗುತ್ತಿಲ್ಲ. ಆಹಾರ ಕ್ಷಾಮ ಎದುರಿಸಲು ಅಕ್ಕಿ, ಗೋಧಿ, ರಾಗಿ ಹಣ್ಣು ತರಕಾರಿ ಏನೆಲ್ಲಾ ಬೆಳೆದರೂ ನಮ್ಮ ಕುಟುಂಬಗಳನ್ನೇ ನಾವು ಸ್ವತಃ ನಿರ್ವಹಣೆ ಮಾಡಿಕೊಳ್ಳಲು ಸಾಧ್ಯವಾಗದಿರುವುದು ವಿಪರ್ಯಾಸದ ಸಂಗತಿ ಎಂದರು.

ಹವಾಮಾನ ವೈಪರೀತ್ಯ

ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ತಾಪಂ ಇಒ ಕೆ.ಎಂ. ಮಲ್ಲಿಕಾರ್ಜುನ ಮಾತನಾಡಿ, ಭಾರತೀಯ ಜನಸಂಖ್ಯೆಯ ಬಹುಪಾಲು ಜನರಿಗೆ ಜೀವನೋಪಾಯದ ಮೂಲವೇ ಕೃಷಿ. ಆದರೆ, ಮಾರುಕಟ್ಟೆ ಕೊರತೆ, ಹವಾಮಾನ ವೈಪರೀತ್ಯ, ನಕಲಿ ಬೀಜ, ಅನಿರೀಕ್ಷಿತ ದರಗಳಲ್ಲಿ ಕುಸಿತ ಇನ್ನಿತರ ಸವಾಲುಗಳು ರೈತರನ್ನು ಸಂಕಷ್ಕಕ್ಕೆ ಸಿಲುಕಿಸುತ್ತಿವೆ. ಕನಿಷ್ಟ ಊಟ ಮಾಡುವ ವೇಳೆ ಪ್ರತಿಯೊಬ್ಬರು ರೈತ ಕುಟುಂಬಕ್ಕೆ ಧನ್ಯವಾದ ಹೇಳದಿದ್ದರೇ ನಮ್ಮಷ್ಟಕ್ಕೆ ನಾವೇ ಆತ್ಮವಂಚನೆಗೆ ಮಾಡಿಕೊಂಡಂತಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ರೈತರನ್ನು ಸನ್ಮಾನಿಸಲಾಯಿತು. ಈ ವೇಳೆ ತಹಸೀಲ್ದಾರ್ ಫಿರೋಜ್ ಶಾ ಸೋಮನಕಟ್ಟಿ, ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ, ಹಿರಿಯ ತೋಟಗಾರಿಕೆ ನಿರ್ದೇಶಕ ಅಶೋಕ ಕುರುಬರ, ಕೃಷಿಕ ಸಮಾಜದ ಬಸವರಾಜ ಸಂಕಣ್ಣನವರ, ಮಲ್ಲನಗೌಡ ಭದ್ರಗೌಡ್ರ, ರಮೇಶ ಮೋಟೆಬೆನ್ನೂರ, ಷಣ್ಮುಖಪ್ಪ ತೋಟದ, ಮಹದೇವಪ್ಪ ಪುಟ್ಟನಗೌಡ್ರ, ನಿಂಗನಗೌಡ ಪಾಟೀಲ, ಕಲ್ಲಪ್ಪ ತಳಮನಿ, ಮಹಲಿಂಗಪ್ಪ ಪುಟ್ಟಪ್ಪನವರ, ಬಸವರಾಜ ರೊಡ್ಡನವರ, ನಾಗರಾಜ ಕುರುವತ್ತಿ, ಶಿವಪ್ಪ ಪೋಟೇರ, ರಾಮಪ್ಪ ಓಲೇಕಾರ, ಮಂಜುನಾಥ ಬೆಳಕಿನಕೊಂಡ ಇನ್ನಿತರರಿದ್ದರು.