ಯಳಗೋಡು ಗ್ರಾಪಂ ವ್ಯಾಪ್ತಿಯ ಹಳ್ಳಿಗಳು ಕ್ಷಯಮುಕ್ತ

| Published : May 18 2025, 11:46 PM IST

ಸಾರಾಂಶ

ಕ್ಷಯಮುಕ್ತವಾದ ಯಳಗೋಳು ಗ್ರಾಮ ಪಂಚಾಯಿತಿಗೆ ಮಹಾತ್ಮ ಗಾಂಧಿ ಪ್ರತಿಮೆ ಹಾಗೂ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ತಾಲೂಕಿನ ಯಳಗೋಡು ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳು ಈಗ ಕ್ಷಯ ಮುಕ್ತವಾಗಿವೆ. ಅದಕ್ಕೆ ಗ್ರಾಮ ಪಂಚಾಯಿತಿ ಕಾಳಜಿ ಮತ್ತು ಬದ್ಧತೆಯಿಂದ ಕೆಲಸ ಮಾಡಿದ್ದು ಕಾರಣವಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸಿ.ಒ.ಸುಧಾ ಹೇಳಿದರು.

ಯಳಗೋಡು ಗ್ರಾಮ ಪಂಚಾಯಿತಿಯಲ್ಲಿ ಏರ್ಪಡಿಸಲಾಗಿದ್ದ ಕ್ಷಯಮುಕ್ತ ಭಾರತ ಅಭಿನಂದನಾ ಕಾರ್ಯಕ್ರಮದಲ್ಲಿ ಯಳಗೋಡು ಗ್ರಾಮ ಪಂಚಾಯಿತಿಗೆ ಮಹಾತ್ಮಗಾಂಧಿ ಕಂಚಿನ ಪ್ರತಿಮೆ ಮತ್ತು ಅಭಿನಂದನ ಪತ್ರ ವಿತರಿಸಿ ಅವರು ಮಾತನಾಡಿದರು.

ಯಳಗೋಡು ಗ್ರಾಪಂ ಕ್ಷಯ ಮುಕ್ತ ಆಗಲು ಈ ಗ್ರಾಮದಲ್ಲಿ 1 ಸಾವಿರ ಜನಸಂಖ್ಯೆಗೆ ವರ್ಷಕ್ಕೆ 30 ಜನರು ಕ್ಷಯ ಸಂಶಯಾಸ್ಪದ ರೋಗಿಗಳು ಆಗಿರುತ್ತಾರೆ. ಅವರನ್ನು ಕಫ ಪರೀಕ್ಷೆಗೆ ಒಳಪಡಿಸಿದಾಗ ಶೇ.1ಕ್ಕಿಂತ ಕಡಿಮೆ ಕ್ಷಯ ರೋಗಿಗಳನ್ನು ಎಲ್ಲರ ಸಹಕಾರದಿಂದ ಕಂಡು ಹಿಡಿದಿದ್ದಾರೆ. ಹಾಗಾಗಿ ಯಳಗೋಡು ಗ್ರಾಮ ಪಂಚಾಯಿತಿಯು ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ಎಂದು ಘೋಷಿಸಿರುತ್ತಾರೆ ಎಂದು ಹೇಳಿದರು.

ದೇಶದಲ್ಲಿ ಶೇ.40 ಜನರಿಗೆ ಕ್ಷಯದ ಸೋಂಕು ತಗಲಿರುತ್ತದೆ. ಆದರೆ ಅವರೆಲ್ಲ ಕ್ಷಯ ರೋಗಿಗಳಲ್ಲ. ಕ್ಷಯ ರೋಗದ ಲಕ್ಷಣಗಳು ಕಂಡು ಬಂದರೆ ಆಗ ಮಾತ್ರ ಕ್ಷಯರೋಗಿ ಎಂದು ಗುರುತಿಸಿ, ಅಂತಹವರಿಗೆ 6 ತಿಂಗಳು ಉಚಿತ ಚಿಕಿತ್ಸೆ ನೀಡಿದರೆ ರೋಗವು ಗುಣಮುಖವಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ತಂಬಾಕು ಸೇವನೆ, ಸಿಗರೇಟ್‌, ಮದ್ಯಪಾನ, ಗುಟುಕ ಸೇವಿಸುವ ಜನರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದು, ಅಂತಹವರಿಗೆ ಈ ರೋಗವು ಬೇಗನೆ ಹರಡುತ್ತದೆ ಮತ್ತು ಮಧುಮೇಹ ಕಾಯಿಲೆ ಇರುವವರೆಗೂ ಹಾಗೂ ಅಪೌಷ್ಟಿಕ ಕೊರತೆಯಿಂದ ಕೂಡ ಬಳಲುತ್ತಿರುವವರು ಬೇಗನೆ ಈ ಕ್ಷಯ ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಈ ಮೇಲಿನ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ಹಿಂಜರಿಯದೆ ಕಫ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ತಿಳಿಸಿದರು.

ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಅನಿತಾ ನಾಗರಾಜ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಪ್ರಹ್ಲಾದ್, ಗ್ರಾಪಂ ಸದಸ್ಯರಾದ ಬಸವರಾಜ್, ರೆಹಮತ್ ಉಲ್ಲಾ, ಮಹಾಂತೇಶ್, ದಂಡೆಪ್ಪ, ವೆಂಕಟೇಶ್, ತಿಪ್ಪೇಸ್ವಾಮಿ ಮತ್ತು ವೈದ್ಯಾಧಿಕಾರಿ ಅಶ್ವಿನಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ, ಸಮುದಾಯ ಆರೋಗ್ಯ ಅಧಿಕಾರಿ ಶಾಲಿನಿ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ಜ್ಯೋತಿ, ವಿಜಯ್ ಕುಮಾರಿ, ಸುನಿತಾ, ಆರೋಗ್ಯ ನಿರೀಕ್ಷಣಾಧಿಕಾರಿ ಕುಚೇಲ. ಫಾರ್ಮಸಿ ಅಧಿಕಾರಿ ರಾಮರೆಡ್ಡಿ ಹಾಗೂ ಆಶಾ ಕಾರ್ಯಕರ್ತರು, ಗ್ರಾಮದ ಮುಖಂಡರು ಇದ್ದರು.