ವಿನಯ್‌ ಆತ್ಮಹತ್ಯೆ: ಕುಶಾಲನಗರದಲ್ಲಿ ಬಿಜೆಪಿಯಿಂದ ರಸ್ತೆತಡೆ

| Published : Apr 05 2025, 12:51 AM IST

ಸಾರಾಂಶ

ಕೊಡಗು-ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಮಾಜಿ ಶಾಸಕ ಕೆ.ಜಿ. ಬೋಪಯ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿನಯ್ ಸಾವಿಗೆ ನೇರವಾಗಿ ಕಾರಣಕರ್ತರಾದ ತನ್ನೀರ ಮೈನಾ ಮತ್ತು ಜಿಲ್ಲೆಯ ಇಬ್ಬರು ಶಾಸಕರ ಮೇಲೆ ದೂರು ದಾಖಲಿಸಿಕೊಂಡು ತಕ್ಷಣ ಬಂಧಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಬೆಂಗಳೂರಿನಲ್ಲಿ ನಡೆದ ಕೊಡಗು ಮೂಲದ ಯುವಕನ ಆತ್ಮಹತ್ಯೆಗೆ ಸಂಬಂಧಿಸಿದಂತೆ ಕುಶಾಲನಗರದಲ್ಲಿ ಬಿಜೆಪಿ ವತಿಯಿಂದ ರಸ್ತೆ ತಡೆ ಪ್ರತಿಭಟನೆ ನಡೆಯಿತು.ಕೊಡಗು-ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಮಾಜಿ ಶಾಸಕ ಕೆ.ಜಿ. ಬೋಪಯ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿನಯ್ ಸಾವಿಗೆ ನೇರವಾಗಿ ಕಾರಣಕರ್ತರಾದ ತನ್ನೀರ ಮೈನಾ ಮತ್ತು ಜಿಲ್ಲೆಯ ಇಬ್ಬರು ಶಾಸಕರ ಮೇಲೆ ದೂರು ದಾಖಲಿಸಿಕೊಂಡು ತಕ್ಷಣ ಬಂಧಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಇಬ್ಬರು ಶಾಸಕರ ಮೂಲಕ ಅರಾಜಕತೆ ಸೃಷ್ಟಿಯಾಗುತ್ತಿದೆ. ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುವ ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನಗಳ ಸಂಖ್ಯೆ ಏರುತ್ತಿದೆ. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಹತ್ತಿಕ್ಕುವ ಪ್ರಕರಣಗಳು ನಡೆಯುತ್ತಿವೆ ಎಂದರು.ಸಾರ್ವಜನಿಕ ಕೆಲಸಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಬಂದ ಸಂದರ್ಭ ಪೊಲೀಸರನ್ನು ಬಳಸಿಕೊಂಡು ಬಿಜೆಪಿ ಕಾರ್ಯಕರ್ತರ ಮನೋಸ್ಥೈರ್ಯ ಕುಂದಿಸಲಾಗುತ್ತಿದೆ ಎಂದು ಆರೋಪಿಸಿದರು.ಡೆತ್ ನೋಟ್‌ನಲ್ಲಿ ವಿರಾಜಪೇಟೆ ಶಾಸಕ ಪೊನ್ನಣ್ಣ, ಮಡಿಕೇರಿ ಶಾಸಕ ಮಂತರ್ ಗೌಡ, ತನ್ನಿರಾ ಮೈನಾ ಸೇರಿದಂತೆ ಹಲವರ ಹೆಸರುಗಳನ್ನು ಉಲ್ಲೇಖ ಮಾಡಲಾಗಿದ್ದು, ಅವರುಗಳ ಮೇಲೆ ದೂರು ದಾಖಲಿಸಿಕೊಂಡು ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶಾಸಕರ ಖಾಸಗಿ ಕಾರ್ಯದರ್ಶಿಗಳಂತೆ ಕಾರ್ಯನಿರ್ವಹಿಸುತ್ತಿದ್ದು, ಅವರ ಮೇಲೆ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳಬೇಕಾಗಿದೆ. ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಗಳು ಶಾಸಕರ ಕೈಗೊಂಬೆಯಂತೆ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಆರೋಪಿಸಿದರು. ಡೆತ್ ನೋಟ್‌ನಲ್ಲಿ ಬರೆದಿರುವ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳುವ ತನಕ ಅಂತ್ಯಕ್ರಿಯೆ ಮಾಡದಂತೆ ಪ್ರತಾಪ್ ಸಿಂಹ, ಕುಟುಂಬ ಸದಸ್ಯರಿಗೆ ಮನವಿ ಮಾಡಿದರು.ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಯುವಕನ ಆತ್ಮಹತ್ಯೆಗೆ ಕಾರಣಕರ್ತರಾದ ಜಿಲ್ಲೆಯ ಶಾಸಕರು ಮತ್ತು ಡೆತ್‌ನೊಟ್‌ನಲ್ಲಿ ಬರೆದಿರುವ ಎಲ್ಲ ಆರೋಪಿಗಳನ್ನು ಬಂಧಿಸಿ ಕ್ರಮಕೈಗೊಳ್ಳಬೇಕು. ಪ್ರಕರಣದಲ್ಲಿ ಯುವಕನ ಕುಟುಂಬಕ್ಕೆ ನ್ಯಾಯ ದೊರಕುವ ತನಕ ಪ್ರತಿಭಟನೆ ಮುಂದುವರಿಯುವುದು ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿದರು.

ಸುಮಾರು ಅರ್ಧ ಗಂಟೆ ರಸ್ತೆ ತಡೆ ನಡೆಸಿದ ಕಾರ್ಯಕರ್ತರು, ಸರ್ಕಾರ ಮತ್ತು ಶಾಸಕರ ವಿರುದ್ಧ ಘೋಷಣೆ ಕೂಗಿದರು.ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಗೌತಮ್, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಅನಿತಾ ಪೂವಯ್ಯ, ಕುಶಾಲನಗರ ನಗರ ಬಿಜೆಪಿ ಅಧ್ಯಕ್ಷ ಎಂ.ಎಂ. ಚರಣ್, ಪುರಸಭೆ ಸದಸ್ಯರಾದ ಅಮೃತರಾಜ್, ರೇಣುಕಾ, ಪಕ್ಷದ ಪ್ರಮುಖರಾದ ಸೋಮೇಶ್, ನೆಲ್ಲಿರ ಚಲನ್, ಶರತ್, ರಾಮನಾಥನ್, ಹೇರೂರು ಚಂದ್ರಶೇಖರ್, ನವನೀತ್, ಲಕ್ಷ್ಮೀನಾರಾಯಣ್, ವೈಶಾಖ್, ಪ್ರವೀಣ್ ಮತ್ತಿತರರು ಇದ್ದರು.