ವಿನಯ ಕುಲಕರ್ಣಿ ಜಾಮೀನು ರದ್ದು, ಕ್ಷೇತ್ರದಲ್ಲಿ ಸಂಚಲನ

| Published : Jun 07 2025, 01:31 AM IST

ಸಾರಾಂಶ

2016 ರಲ್ಲಿ ಬಿಜೆಪಿ ಜಿಪಂ ಸದಸ್ಯ ಯೋಗೇಶ್ ಗೌಡ ಹತ್ಯೆಯಲ್ಲಿ ವಿನಯ ಕುಲಕರ್ಣಿ ಪಾತ್ರ ಇದೆ ಎಂದು ಆರೋಪಿಸಲಾಗಿತ್ತು

ಧಾರವಾಡ: ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯ ಯೋಗೀಶಗೌಡ ಕೊಲೆ ಆರೋಪದಲ್ಲಿ ಬಂಧಿತರಾಗಿ ಜಾಮೀನಿನ ಮೇಲೆ ಹೊರಗಿರುವ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದ್ದು, ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ.

ಅವರಿಗೆ ಜಾಮೀನು ದೊರೆತರೂ ಧಾರವಾಡ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ನಂತರ 2023 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ಕ್ಷೇತ್ರದ ಹೊರಗಿದ್ದುಕೊಂಡೆ ಗೆಲುವು ಸಾಧಿಸುವ ಮೂಲಕ ವಿನಯ ಕುಲಕರ್ಣಿ ಇತಿಹಾಸ ನಿರ್ಮಿಸಿದ್ದರು. ಎರಡು ವರ್ಷಗಳ ಕಾಲ ಕ್ಷೇತ್ರದ ಹೊರಗಿದ್ದುಕೊಂಡೇ ಆಡಳಿತ ಮಾಡಿದ್ದ ಅವರು, ಇದೀಗ ಜಾಮೀನು ರದ್ದಾಗಿರುವ ಹಿನ್ನೆಲೆಯಲ್ಲಿ ಮತ್ತೆ ಜೈಲು ಪಾಲಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಹಾಗೂ ಕಾರ್ಯಕರ್ತರು ಚಿಂತೆಗೀಡು ಆಗಿದ್ದಾರೆ.

2016 ರಲ್ಲಿ ಬಿಜೆಪಿ ಜಿಪಂ ಸದಸ್ಯ ಯೋಗೇಶ್ ಗೌಡ ಹತ್ಯೆಯಲ್ಲಿ ವಿನಯ ಕುಲಕರ್ಣಿ ಪಾತ್ರ ಇದೆ ಎಂದು ಆರೋಪಿಸಲಾಗಿತ್ತು. ಆಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು. ನಂತರ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚುನಾವಣಾ ರ್‍ಯಾಲಿಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ವಿನಯ್ ಕುಲಕರ್ಣಿಯನ್ನು ಜೈಲಿಗೆ ಕಳುಹಿಸುವುದಾಗಿ ಪ್ರತಿಜ್ಞೆ ಮಾಡಿದ್ದರು.

ನಂತರ ಬಂದ ಬಿಜೆಪಿ ಸರ್ಕಾರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತು. ತನಿಖೆ ನಂತರ ವಿನಯ್ ಕುಲಕರ್ಣಿಯನ್ನು ಬಂಧಿಸಲಾಗಿತ್ತು. ಅವರು 9 ತಿಂಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿ ಕಳೆದು ಜಾಮೀನು ಪಡೆದಿದ್ದರು. ಇದೀಗ ಜಾಮೀನು ರದ್ದಾಗಿದ್ದು ವಿನಯ ಕುಲಕರ್ಣಿ ಅವರ ಮುಂದಿನ ಹೆಜ್ಜೆ, ರಾಜಕೀಯ ಭವಿಷ್ಯವೇನಾಗಲಿದೆ ಕಾದು ನೋಡಬೇಕಿದೆ.