ಇಲ್ಲಿನ ಬಡಗುಬೆಟ್ಟುವಿನ ಸರ್ಕಾರಿ ಭೂಮಿಯಲ್ಲಿ 28ರಂದು ಕಾಪು ಶಾಸಕರ ನೇತೃತ್ವದಲ್ಲಿ ಉಡುಪಿ ಕಂಬಳ ಜೋಡುಕರೆ ನಿರ್ಮಾಣಕ್ಕೆ ನಡೆದ ಭೂಮಿಪೂಜೆ ಕಾನೂನುಬಾಹಿರವಾಗಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.
ಉಡುಪಿ: ಇಲ್ಲಿನ ಬಡಗುಬೆಟ್ಟುವಿನ ಸರ್ಕಾರಿ ಭೂಮಿಯಲ್ಲಿ 28ರಂದು ಕಾಪು ಶಾಸಕರ ನೇತೃತ್ವದಲ್ಲಿ ಉಡುಪಿ ಕಂಬಳ ಜೋಡುಕರೆ ನಿರ್ಮಾಣಕ್ಕೆ ನಡೆದ ಭೂಮಿಪೂಜೆ ಕಾನೂನುಬಾಹಿರವಾಗಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡಗಬೆಟ್ಟುವಿನಲ್ಲಿ ಕಂಬಳ ನಡೆಸಲು ಜಿಲ್ಲಾಡಳಿತ ಷರತ್ತುಬದ್ಧವಾಗಿ 6.30 ಎಕ್ರೆ ಭೂಮಿ ಮಂಜೂರು ಮಾಡಿದೆ, ಆದರೆ ಭೂಮಿ ಶಾಸಕರ ನೇತೃತ್ವದ ಕಂಬಳ ಸಮಿತಿಗೆ ಹಸ್ತಾಂತರವಾಗಿಲ್ಲ. ಶಾಸಕರು ಷರತ್ತು ಉಲ್ಲಂಘಿಸಿ ಭೂಮಿ ಪೂಜೆ ಮಾಡಿದ್ದಾರೆ ಎಂದರು. ಈ ಕಂಬಳದ ಭೂಮಿ ಪೂಜೆಗೆ ಕಂಬಳ ಸಮಿತಿಯು ಅರಣ್ಯ ಇಲಾಖೆಯ ನೂರಾರು ಮರಗಳನ್ನು ಕಡಿದಿದ್ದು, ಈ ಬಗ್ಗೆ 24ರಂದು ಅರಣ್ಯ ಇಲಾಖೆ ಸಮಿತಿ ವಿರುದ್ಧ ಕೇಸು ದಾಖಲಿಸಿದೆ. ಷರತ್ತು ಉಲ್ಲಂಘಿಸುವ ಕಾರಣ ಭೂಮಿಪೂಜೆ ನಡೆಸುವುದಕ್ಕೆ ಜಿಲ್ಲಾಡಳಿತ ಫೆ. 28ರಂದು ನಿಷೇಧಾಜ್ಞೆ ಹಾಕಿತ್ತು. ಆದರೂ 6 ಮಂದಿ ಶಾಸಕರು, ಸಂಸದರು, ರಾಜ್ಯ ಕಂಬಳ ಸಮಿತಿ ಅಧ್ಯಕ್ಷರೂ ಸದಸ್ಯರೂ ನೂರಾರು ಮಂದಿ ಸೇರಿ ಭೂಮಿ ಪೂಜೆ ನಡೆಸಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು, ಸಂಸದರೇ ನಿಷೇಧಾಜ್ಞೆ ಉಲ್ಲಂಘಿಸಿದ್ದಾರೆ, ಈ ಬಗ್ಗೆಯೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದವರು ಹೇಳಿದರು.
ಕಂಬಳಕ್ಕೆ 6.30 ಎಕ್ರೆ ಭೂಮಿ ಮಂಜೂರಾಗಿದ್ದರೂ, ಸುಮಾರು 13 ಎಕ್ರೆ ಮೀಸಲು ಅರಣ್ಯ, ಕುಮ್ಕಿ ಭೂಮಿಯನ್ನು ಅತಿಕ್ರಮ ಮಾಡಲಾಗಿದೆ. ಇದರಿಂದ ತೊಂದರೆಗೊಳಗಾದ ಈ ಭೂಮಿಯಲ್ಲಿ 40 ವರ್ಷಗಳಿಂದ ಕೃಷಿ ಮಾಡಿಕೊಂಡು ಬದುಕುತ್ತಿರುವ 10 ಕುಟುಂಬಗಳಿಗೆ ಬೆದರಿಕೆ ಒಡ್ಡಿ, ಸುಮ್ಮನಿರುವಂತೆ ಮಾಡಲಾಗಿದೆ. ಬಡವರಿಗೆ 5 ಸೆಂಟ್ಸ್ ಭೂಮಿ ನೀಡಲಾಗದ ಶಾಸಕರು, ಕಾನೂನುಬಾಹಿರ ಚಟುವಟಿಕೆ, ಜೂಜು ನಡೆಸುವ ತಮ್ಮ ಹಿಂಬಾಲಕರಿಗಾಗಿ ಅರಣ್ಯ ಇಲಾಖೆಯ 6.30 ಎಕರೆ ಭೂಮಿಯಲ್ಲಿ ಅಕ್ರಮವಾಗಿ ಕಂಬಳ ಮಾಡಲು ಹೊರಟಿದ್ದಾರೆ ಎಂದು ಆಕ್ರೋಷ ವ್ಯಕ್ತಪಡಿಸಿದರು.ಉಡುಪಿ ಕಂಬಳ ನಡೆಸುವುದಕ್ಕೆ ತನ್ನ ಅಭ್ಯಂತರವಿಲ್ಲ. ಆದರೆ ಅದು ಬಿಜೆಪಿ ಪಕ್ಷದ ಕಂಬಳ ಆಗಬಾರದು, ಜಿಲ್ಲಾಡಳಿತದ ಕಂಬಳ ಆಗಬೇಕು. ಸ್ಥಳೀಯ ಜನರಿಗೆ ಕಂಬಳದಿಂದ ತೊಂದರೆ ಆಗದಂತೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದವರು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್, ಪಕ್ಷದ ಪ್ರಮುಖರಾದ ಹರೀಶ್ ಕಿಣಿ, ಇಸ್ಮಾಯಿಲ್ ಆತ್ರಾಡಿ, ಸಂತೋಷ್ ಕುಲಾಲ್ ಪಕ್ಕಾಲು, ಸಂತೋಷ್ ಶೆಟ್ಟಿ ಬೆಳ್ಳಂಪಳ್ಳಿ ಉಪಸ್ಥಿತರಿದ್ದರು,
ಕಂಬಳಕ್ಕಾಗಿ ಮೀಸಲಿಟ್ಟ ಭೂಮಿಯಲ್ಲಿ ಪೂಜೆಯಾಗಿದೆ: ಗುರ್ಮೆಉಡುಪಿ: ಜಿಲ್ಲಾಡಳಿತದಿಂದ ಕಂಬಳಕ್ಕಾಗಿಯೇ ಮೀಸಲಿಟ್ಟ ಭೂಮಿಯಲ್ಲಿಯೇ ಪೂಜೆ ನಡೆಸಲಾಗಿದೆ, ಕಾನೂನು ಪ್ರಕಾರವೇ ಈ ಭೂಮಿಯನ್ನು ಕಂದಾಯ ಇಲಾಖೆಯಿಂದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸಲಾಗಿದೆ. ಯಾವುದೇ ಷರತ್ತು ಉಲ್ಲಂಘನೆಯಾಗಿಲ್ಲ ಎಂದು ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪರ ಜಿಲ್ಲಾಧಿಕಾರಿ ಉಪಸ್ಥಿತಿಯಲ್ಲಿ ಅರಣ್ಯಾಧಿಕಾರಿಗಳೇ ಗಡಿ ಗುರುತು ಮಾಡಿಕೊಟ್ಟ 6.30 ಎಕ್ರೆ ಭೂಮಿಯಲ್ಲಿ ಕಂಬಳ ಜೋಡುಕರೆ ನಿರ್ಮಾಣಕ್ಕೆ, ಸ್ಥಳೀಯ ಶಾಸಕ ಮತ್ತು ಶಿಷ್ಟಾಚಾರದಂತೆ ಕಂಬಳ ಸಮಿತಿಯ ಅಧ್ಯಕ್ಷನ ನೆಲೆಯಲ್ಲಿ ಭೂಮಿ ಪೂಜೆ ಮಾಡಿದ್ದೇನೆ. ಇದರಲ್ಲಿ ಕಾನೂನುಬಾಹಿರ ಏನಿದೆ ? ಕಂಬಳಕ್ಕಾಗಿ ಮೀಸಲಿಟ್ಟ ಭೂಮಿಯಲ್ಲಿ ಬೇರೆ ಏನೂ ಮಾಡಬಾರದು ಎಂಬ ಷರತ್ತು ಇದೆ, ನಾವು ಕಂಬಳವನ್ನು ಮಾಡುತಿದ್ದೇವೆ, ಇದರಲ್ಲಿ ಷರತ್ತು ಉಲ್ಲಂಘನೆ ಎಲ್ಲಿದೆ ಎಂದವರು ಪ್ರಶ್ನಿಸಿದರು. ಮಾಜಿ ಶಾಸಕರು ಇಷ್ಟು ಕೆಳಮಟ್ಟದ ರಾಜಕೀಯ ಮಾಡಬಾರದಿತ್ತು ಎಂದರು. ಶಾಸಕ ಸುನಿಲ್ ಕುಮಾರ್ ಮಾತನಾಡಿ, ಭೂಮಿಪೂಜೆಯನ್ನು ತಡೆಯುವುದಕ್ಕಾಗಿ ಅಲ್ಲಿ ನಿಷೇದಾಜ್ಞೆ ಹಾಕಿದ್ದರು, ಅಲ್ಲಿ ಕಾನೂನು ಸುವ್ಯವಸ್ಥೆಗೆ ಬೆದರಿಕೆಯಾಗುವ ಯಾವ ಘಟನೆ ನಡೆದಿದೆ ? ಯಾಕೆ ಸೆಕ್ಷನ್ ಹಾಕಬೇಕಾಗಿತ್ತು ? ಎಂದು ಪ್ರಶ್ನಿಸಿದರು. ಮಾಜಿ ಸಚಿವರು ರಾಜ್ಯದಲ್ಲಿ ತಮ್ಮ ಪಕ್ಷದ ಸರ್ಕಾರವಿದೆ, ಆದ್ದರಿಂದ ತಾವು ಹೇಳಿದಂತೆ ನಡೆಯಬೇಕು ಎನ್ನುವ ಕೇವಲ ಕಾರಣಕ್ಕಾಗಿ ರಾಜಕೀಯ ಮಾಡುತಿದ್ದಾರೆ. ಇದನ್ನು ಸಹಿಸುವುದಿಲ್ಲ ಎಂದರು. ಈಗಾಗಲೇ ಭೂಮಿ ಪೂಜೆ ನಡೆದಿದೆ, ಫೆ. 4ರಂದು ಮತ್ತೇ ಉಸ್ತುವಾರಿ ಸಚಿವರನ್ನು ಕರೆಸಿ ಭೂಮಿ ಪೂಜೆ ಮಾಡಲು ಪ್ರಯತ್ನಿಸಿದರೇ ಅವಕಾಶ ನೀಡುವುದಿಲ್ಲ, ಎಲ್ಲ ಶಾಸಕರು ಸೇರಿ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕಂಬಳಕ್ಕಾಗಿ ಮೀಸಲಿಟ್ಟ ಭೂಮಿಯನ್ನು ಪ್ರವೇಶಿಸಬಾರದು ಎಂದು ನಿಷೇದಾಜ್ಞೆ ಹೇರಲಾಗಿತ್ತು, ಭೂಮಿ ಪೂಜೆ ನಡೆಸಿದ ತನ್ನನ್ನು ಮತ್ತು ಶಾಸಕರನ್ನೂ ಸೇರಿಸಿ 37 ಮಂದಿ ಮೇಲೆ ಕೇಸು ದಾಖಲಿಸಲಾಗಿದೆ. ಇದು ಮಾಜಿ ಸಚಿವರು ಮತ್ತು ಉಸ್ತುವಾರಿ ಸಚಿವರು ಒತ್ತಡ ಹೇರಿ, ಪೊಲೀಸರ ಮೂಲಕ ಬೆದರಿಕೆ ಒಡ್ಡುವ ಪ್ರಯತ್ನ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು, ಶಾಸಕರಾದ ಯಶ್‌ಪಾಲ್ ಸುವರ್ಣ, ಕಿರಣ್ ಕೊಡ್ಗಿ, ಮಾಜಿ ಶಾಸಕ ಲಾಲಾಜಿ ಮೆಂಡನ್ ಉಪಸ್ಥಿತರಿದ್ದರು.
