ಸಾರಾಂಶ
- ಜಿಲ್ಲಾದ್ಯಂತ ಕಾನೂನು, ಸುವ್ಯವಸ್ಥೆ ಕಾಪಾಡಲು ಪೊಲೀಸ್ ಕಣ್ಗಾವಲು । ಶಾಂತಿ-ಸೌಹಾರ್ದ ಕಾಪಾಡಲಿ ಮನವಿ
- - - ಕನ್ನಡಪ್ರಭ ವಾರ್ತೆ ದಾವಣಗೆರೆಇಲ್ಲಿಯ ವಿನೋಬ ನಗರದ 2ನೇ ಮುಖ್ಯ ರಸ್ತೆಯಲ್ಲಿ ಪ್ರತಿಷ್ಟಾಪಿಸಿರುವ ಗಣೇಶ ವಿಸರ್ಜನೆ ಹಾಗೂ ಚನ್ನಗಿರಿ ಪಟ್ಟಣದ ಹಿಂದು ಏಕತಾ ಗಣೇಶ ವಿಸರ್ಜನೆಯನ್ನು ಸೆ.15ರಂದು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಕಾನೂನು, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಗಣೇಶ ವಿಸರ್ಜನೆ ಸಮಯದಲ್ಲಿ ಕೆಲ ಅಂಶಗಳನ್ನು ಪಾಲಿಸಲು ಜಿಲ್ಲಾ ಪೊಲೀಸ್ ಇಲಾಖೆ ಸೂಚಿಸಿದೆ.
ಗಣೇಶ ಮೂರ್ತಿ ಮೆರವಣಿಗೆ ನಿಗದಿಪಡಿಸಿರುವ ಮಾರ್ಗಗಳಲ್ಲೇ ಸಾಗಬೇಕು. ನಿಗದಿತ ಸ್ಥಳದಲ್ಲೇ ಮೂರ್ತಿ ಜಲಸ್ಥಂಭನ ಮಾಡಬೇಕು. ಈಜು ಬರುವಂತಹವರನ್ನು, ಜೀವರಕ್ಷಕರನ್ನು ನೇಮಿಸಿಕೊಳ್ಳಬೇಕು. ಯಾವುದೇ ಜೀವ ಹಾನಿಯಾಗದಂತೆ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹವರ ಮತ್ತು ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.ಗಣಪತಿ ಮೂರ್ತಿ ವಿಸರ್ಜನಾ ಸಂಬಂಧ ಜಿಲ್ಲಾಮಟ್ಟದಲ್ಲಿ, ಉಪ ವಿಭಾಗಮಟ್ಟದಲ್ಲಿ, ಠಾಣಾ ಮಟ್ಟದಲ್ಲಿ ವಿವಿಧ ಕೋಮಿನ ಮುಖಂಡರೊಂದಿಗೆ ಸಭೆ ನಡೆಸಿ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬರದಂತೆ ಹಬ್ಬಗಳನ್ನು ಆಚರಿಸುವಂತೆ ಈಗಾಗಲೇ ತಿಳಿಸಲಾಗಿದೆ. ಮೆರವಣಿಗೆ ವೇಳೆ ಮಾದಕ ವಸ್ತು ಸೇವನೆ, ಪ್ರಚೋದನಾಕಾರಿ ಹಾಡು ಹಾಕುವುದು, ಪೋಸ್ಟರ್ ಪ್ರದರ್ಶಿಸಲು ಅವಕಾಶ ಇಲ್ಲ. ಈ ಬಗ್ಗೆ ಆಯೋಜಕರು ವಿಶೇಷ ಗಮನಹರಿಸಬೇಕು. ಸಾರ್ವಜನಿಕ, ಜನ ಸಂದಣಿ ಪ್ರದೇಶಗಳಲ್ಲಿ ಪಟಾಕಿ ಸಿಡಿಸಬಾರದು. ಸುರಕ್ಷಿತ ಕ್ರಮಗಳನ್ನು ಅನುಸರಿಸಬೇಕು ಎಂದು ಇಲಾಖೆ ತಿಳಿಸಿದೆ.
ಮೆರವಣಿಗೆಯು ಸಾರ್ವಜನಿಕ ಸಂಚಾರ ವ್ಯವಸ್ಥೆಗೆ ತೊಂದರೆ ಆಗದಂತೆ ನಡೆಸಬೇಕು. ಬೆಳಕಿನ ವ್ಯವಸ್ಥೆಗೆ ಜನರೇಟರ್ ಅಳವಡಿಸಬೇಕು. ಯಾವುದೇ ವಿದ್ಯುತ್ ಅವಘಡ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಕರ್ಕಶ ಶಬ್ಧ ಹೊಮ್ಮಿಸುವ ಸೌಂಡ್ ಸಿಸ್ಟಂ ಮತ್ತು ಡಿಜೆ ಉಪಯೋಗಿಸಬಾರದು. ಸೂಕ್ಷ್ಮ ಪ್ರದೇಶಗಳಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಈ ಸಂಬಂಧ ರೌಡಿ ಮತ್ತು ಮತೀಯ ಗೂಂಡಾಗಳ ಮೇಲೆ ಮುಂಜಾಗ್ರತಾ ಕ್ರಮ ಕೈಗೊಂಡು ನಿಗಾ ಇರಿಸಲಾಗಿದೆ. ಗಣೇಶ ವಿಸರ್ಜನೆ ಉತ್ಸವ ವೇಳೆ ಸಾರ್ವಜನಿಕರ ಆಸ್ತಿ, ಜೀವಹಾನಿ ಆಗದಂತೆ ಕ್ರಮಗಳನ್ನು ಅನುಸರಿಸಬೇಕು. ಮೆರವಣಿಗೆ ಮಾರ್ಗಗಳಲ್ಲ್ಲಿಸ್ವಯಂ ಸೇವಕರ ನೇಮಿಸಿ, ಈ ಬಗ್ಗೆ ಸ್ಥಳೀಯ ಠಾಣೆಗೆ ಮಾಹಿತಿ ನೀಡಬೇಕು. ರಾತ್ರಿ 9 ಗಂಟೆಯೊಳಗೆ ಗಣೇಶ ವಿಸರ್ಜನೆ ಮಾಡಬೇಕು. ಶುಚಿತ್ವ ಕಾಪಾಡಿಕೊಂಡು ಪ್ರಸಾದ ವ್ಯವಸ್ಥೆ ಮಾಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದಕ ಹಾಗೂ ಧಾರ್ಮಿಕ ನಿಂದನೆ, ಸುಳ್ಳು ಸುದ್ದಿ ಹರಡುವುದು, ಕಾನೂನು ಸುವ್ಯವಸ್ಥೆಗೆ ದಕ್ಕೆ ಬರುವಂತಹ ಪೋಸ್ಟ್ ಹಾಕುವುದಾಗಲೀ ಹಾಗು ಶೇರ್ ಮಾಡುವುದಾಗಲೀ ಕಂಡುಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಸೂಚನೆ ನೀಡಿದೆ. ಅಲ್ಲದೇ, ತುರ್ತು ಸಹಾಯವಣಿ 112ಗೆ ಕರೆ ಮಾಡಿ, ನೆರವು ಪಡೆಯಬಹುದು. ಸ್ಥಳೀಯ ಪೊಲೀಸ್ ಠಾಣೆ, ಪೊಲೀಸ್ ಅಧಿಕಾರಿ ಸಿಬ್ಬಂದಿಗೂ ಮಾಹಿತಿ ನೀಡಬೇಕು ಎಂದು ಇಲಾಖೆ ಸೂಚಿಸಿದೆ.- - -
ಬಾಕ್ಸ್ * ಜಿಲ್ಲೆಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಜಿಲ್ಲೆಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಸಂಬಂಧ ಜಿಲ್ಲಾ ಪೊಲೀಸ್ ಇಲಾಖೆಯಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದಾವಣಗೆರೆ ವಿನೋಬ ನಗರ ಹಾಗೂ ಚನ್ನಗಿರಿ ಪಟ್ಟಣದ ಏಕತಾ ಗಣೇಶ ವಿಸರ್ಜನಾ ಮೇರವಣಿಗೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿ ಹಾಗೂ ಕೆ.ಎಸ್.ಆರ್.ಪಿ ತುಕಡಿಗಳನ್ನು ಮತ್ತು ಡಿಎಆರ್ ತುಕಡಿಗಳ ಜೊತೆಗೆ ಹೋಂ ಗಾರ್ಡ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಎಸ್‌ಪ ಇಉಮಾ ಪ್ರಶಾಂತ ತಿಳಿಸಿದ್ದಾರೆ.ಮೆರವಣಿಗೆಯುದ್ದಕ್ಕೂ ಸಿಸಿ ಟಿವಿ ಅಳವಡಿಕೆ, ಮೆರವಣಿಗೆಯ ಸಂಪೂರ್ಣ ಚಿತ್ರೀಕರಣಕ್ಕೆ ವಿಡಿಯೋಗ್ರಾಫರ್ಸ್‌ಗಳನ್ನು ನಿಯೋಜಿಸಲಾಗಿದೆ. ಡ್ರೋನ್ ಕಣ್ಗಾವಲು ಇರಿಸಲಾಗಿರುತ್ತದೆ . ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ತಿಳಿಸಿದ್ದಾರೆ.
- - -