ಲೋಕಸಭಾ ಚುನಾವಣೆಗೆ ಕಾಂಗ್ರೆಸಿನಿಂದ ವಿನೋದ ಅಸೂಟಿ ನಾಮಪತ್ರ

| Published : Apr 17 2024, 01:16 AM IST

ಸಾರಾಂಶ

ಲೋಕಸಭಾ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಉದ್ಯಮಿ ಹಾಗೂ ಕಾಂಗ್ರೆಸ್‌ ಮುಖಂಡ ವಿನೋದ ಅಸೂಟಿ ಮಂಗಳವಾರ ತಮ್ಮ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಜಿಲ್ಲಾ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

ಧಾರವಾಡ: ಲೋಕಸಭಾ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಉದ್ಯಮಿ ಹಾಗೂ ಕಾಂಗ್ರೆಸ್‌ ಮುಖಂಡ ವಿನೋದ ಅಸೂಟಿ ಮಂಗಳವಾರ ತಮ್ಮ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಜಿಲ್ಲಾ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೂ ಮೊದಲು ನಗರದ ತುಳಜಾ ಭವಾನಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಛತ್ರಪತಿ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಬಳಿಕ ಮೆರವಣಿಗೆಗೆ ಚಾಲನೆ ದೊರೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಅಪಾರ ಬೆಂಬಲಿಗರೊಂದಿಗೆ ಬೃಹತ್ ರೋಡ್ ಶೋ ನಡೆಸುವ ಮೂಲಕ ಅಸೂಟಿ ಕಾಂಗ್ರೆಸ್ ಶಕ್ತಿ ಪ್ರದರ್ಶನ ಮಾಡಿದರು.

ಶಿವಾಜಿ ವೃತ್ತದಿಂದ ಪ್ರಾರಂಭಗೊಂಡ ಮೆರವಣಿಗೆ ರೀಗಲ್ ವೃತ್ತ, ಸಿಬಿಟಿ ರಸ್ತೆ, ಅಂಜುಮನ್ ವೃತ್ತ, ಆಝಾದ್ ಪಾರ್ಕ್, ಜ್ಯುಬಿಲಿ ವೃತ್ತ, ಕೋರ್ಟ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಮೆರವಣಿಗೆಯಲ್ಲಿ ಗೌತಮ ಬುದ್ಧ, ಜಗಜ್ಯೋತಿ ಬಸವೇಶ್ವರ, ಡಾ. ಅಂಬೇಡ್ಕರ್, ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಜತೆಗೆ ಕಾಂಗ್ರೆಸ್ ಧ್ವಜಗಳು, ಟೋಪಿಗಳು ರಾರಾಜಿಸಲ್ಪಟ್ಟವು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ, ಸಂತೋಷ ಲಾಡ್, ವಿನೋದ ಅಸೂಟಿ, ಸಲೀಂ ಅಹ್ಮದ್ ಹಾಗೂ ಕಾಂಗ್ರೆಸ್ ಪರವಾದ ವಿವಿಧ ಜಯಘೋಷ ಮೊಳಗಿದವು. ವಿನೋದ ಅಸೂಟಿ ಅವರ ಬೃಹತ್ ರೋಡ್ ಶೋಗೆ ಡೊಳ್ಳು ಕುಣಿತ, ಝಾಂಜ್ ಮೇಳ, ಜಗ್ಗಲಿಗೆ ಮೇಳ, ಬೊಂಬೆ ಕುಣಿತ ಕೆಲವು ಕಲಾ ತಂಡಗಳು ಮೆರಗು ತುಂಬಿದವು. ಅಸೂಟಿ ಅವರಿಗೆ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ಎನ್.ಎಚ್. ಕೋನರೆಡ್ಡಿ, ಪ್ರಸಾದ ಅಬ್ಬಯ್ಯ, ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಸಚಿವ ಹಿಂಡಸಗೇರಿ ಸೇರಿ ಪಕ್ಷದ ಸ್ಥಳೀಯ ಮುಖಂಡರು ಸಾಥ್ ನೀಡಿದರು.

ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಲು ತಡವಾಗುವ ಹಿನ್ನೆಲೆಯಲ್ಲಿ ಅಸೂಟಿ ಪಕ್ಷದ ಮುಖಂಡರೊಂದಿಗೆ ಮೆರವಣಿಗೆ ಮುಂಚೆಯೇ ಆಗಮಿಸಿ ಎರಡು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದರು. ಮೆರವಣಿಗೆ ಮುಗಿಸಿ ಮತ್ತೊಂದು ಬಾರಿ ನಾಮಪತ್ರ ಸಲ್ಲಿಸಲು ಆಗಮಿಸಿದಾಗ ಸಮಯ ಮೀರುತ್ತಿತ್ತು. ಸಮಯ ಮೀರುವ ಹೊತ್ತಿಗೆ ವೀಕ್ಷಕರೊಂದಿಗೆ ಓಡೋಡಿ ಬಂದ ವಿನೋದ ಅಸೂಟಿ, ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಮುಖಂಡರ ಸಮ್ಮುಖದಲ್ಲಿ ಮತ್ತೆರಡು ಪ್ರತಿಗಳ ನಾಮಪತ್ರ ಸಲ್ಲಿಕೆ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಅಜ್ಜಂಫೀರ್ ಖಾದ್ರಿ, ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನಿಲ ಪಾಟೀಲ, ಅಲ್ತಾಫ್ ಹಳ್ಳೂರ ಇದ್ದರು.

ಅಭ್ಯರ್ಥಿ ಬದಲಾವಣೆ ಬಗ್ಗೆ ಡಿ.ಕೆ. ಶಿವಕುಮಾರ ಸ್ಪಷ್ಟನೆ ನೀಡಿದ್ದು, ಬೆಂಬಲಿಗರು, ಕಾರ್ಯಕರ್ತರ ಹುಮ್ಮಸ್ಸಿನಿಂದ ನಾಮಪತ್ರ ಸಲ್ಲಿಸಿರುವೆ. ಜನತೆ ಬದಲಾವಣೆ ಬಯಸಿದ್ದು, ಲೀಡ್ ಎಷ್ಟು ಎಂಬುದು ಮತದಾರ ಪ್ರಭುಗಳಿಗೆ ಬಿಟ್ಟಿದೆ. ಗೆಲವು ಖಚಿತ. ದಿಂಗಾಲೇಶ್ವರ ಶ್ರೀ ನಡೆದಾಡುವ ದೇವರು. ಅವರ ಬಗ್ಗೆ ಪ್ರತಿಕ್ರಿಯಿಸಲ್ಲ. ಜಿಲ್ಲೆಯ ನಾಯಕರ ಹಾಗೂ ಕಾರ್ಯಕರ್ತರ ಶಕ್ತಿ ನನಗಿದೆ. ನಮ್ಮ ಶಕ್ತಿಯ ಮುಂದೆ ಜೋಶಿ ಅವರ ಶಕ್ತಿ ಕ್ಷೀಣಿಸಲಿದೆ ಎಂದು ವಿನೋದ ಅಸೂಟಿ ಹೇಳಿದರು.

ಕಾಂಗ್ರೆಸ್‌ ಅಭ್ಯರ್ಥಿ ಅಸೂಟಿ ಬಳಿ ₹16 ಕೋಟಿ ಆಸ್ತಿ:

ಸಿಮೆಂಟ್‌ ಇಟ್ಟಿಗೆ, ಮರಳು-ಕಡಿ ಅಂತಹ ಕಟ್ಟಡ ನಿರ್ಮಾಣಕ್ಕೆ ಬಳಸುವ ಕಚ್ಚಾವಸ್ತುಗಳ ಉದ್ಯಮಗಳನ್ನು ಹೊಂದಿರುವ ಹಾಗೂ ಮೊದಲ ಬಾರಿಗೆ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ ಬಳಿ ₹16 ಕೋಟಿ ಆಸ್ತಿ ಇದೆ.

ಮಂಗಳವಾರ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ ನಾಮಪತ್ರದಲ್ಲಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಅಸೂಟಿ ಅವರು ತಮ್ಮ ಚರಾಸ್ತಿ ಹಾಗೂ ಸ್ಥಿರಾಸ್ತಿಯನ್ನು ಘೋಷಿಸಿಕೊಂಡಿದ್ದಾರೆ.

₹12 ಕೋಟಿ ಚರಾಸ್ತಿ ಹೊಂದಿರುವ ಅಸೂಟಿ ಕೈಯಲ್ಲಿ ₹80 ಸಾವಿರ ನಗದು ಇದೆ. ವಿವಿಧ ಬ್ಯಾಂಕ್‌ಗಳಲ್ಲಿ ಉಳಿತಾಯ, ಎಲ್‌ಐಸಿಯಲ್ಲಿ ಇನ್ಸುರೆನ್ಸ್‌ ಮಾಡಿಸಿರುವ ಅವರ ಬಳಿ ವಾಣಿಜ್ಯ ವಾಹನಗಳೇ ಜಾಸ್ತಿ ಇವೆ. 2016ನೇ ಮಾಡಲ್‌ನ ಒಂದು ಇನ್ನೋವಾ ಕಾರು, ಒಂಬತ್ತು ಟಿಪ್ಪರ್‌ಗಳು, ₹62 ಲಕ್ಷ ಮೌಲ್ಯದ ಒಂದು ಹಿಟ್ಯಾಚಿ, ಒಂದು ಕ್ಯಾಂಟರ್‌ ಹಾಗೂ ₹10 ಲಕ್ಷ ಮೌಲ್ಯದ ಒಂದು ಜೆಸಿಬಿ ಲೋಡರ್‌ ಹೊಂದಿದ್ದಾರೆ. ₹22.29 ಲಕ್ಷ ಮೌಲ್ಯದ 350 ಗ್ರಾಂ ಚಿನ್ನದ ಆಭರಣಗಳು, ₹1.60 ಲಕ್ಷ ಮೌಲ್ಯದ 2 ಕೆ.ಜಿ. ಬೆಳ್ಳಿ ವಸ್ತುಗಳನ್ನು ಹೊಂದಿರುವುದಾಗಿ ಅಸೂಟಿ ಹೇಳಿಕೊಂಡಿದ್ದಾರೆ.ಇದರೊಂದಿಗೆ ಸಮೀಪದ ಮಂಡಿಹಾಳದಲ್ಲಿ ₹1.96 ಕೋಟಿ ಮೌಲ್ಯದ ಎಎಸಿ ಬ್ಲಾಕ್ಸ್‌ ಇಂಡಸ್ಟ್ರಿ, ಕಲಘಟಗಿಯ ಹಿರೇಹೊನ್ನಿಹಳ್ಳಿಯಲ್ಲಿ ₹1.25 ಕೋಟಿ ಮೌಲ್ಯದ ಬಸವಾ ಸ್ಟೋನ್ಸ್ (ಕ್ರಶಿಂಗ್‌ ಇಂಡಸ್ಟ್ರಿ), ಸವದತ್ತಿ ಬಳಿ ಮುನವಳ್ಳಿಯಲ್ಲಿ ₹1.18 ಕೋಟಿ ಮೌಲ್ಯದ ಮರಳು ಇಂಡಸ್ಟ್ರಿ, ಹಾವೇರಿಯ ಸವಣೂರಿನಲ್ಲಿ ₹1.30 ಕೋಟಿ ಮೌಲ್ಯದ ಮರಳು ಇಂಡಸ್ಟ್ರಿ ಹಾಗೂ ಮನಸೂರಿನಲ್ಲಿ ₹3.39 ಕೋಟಿ ಮೌಲ್ಯದ ಭಾಗ್ಯಶ್ರೀ ಹೆಸರಿನ ಸ್ಟೋನ್‌ ಕ್ರಶಿಂಗ್‌ ಇಂಡಸ್ಟ್ರಿ ಇದೆ.

ಇನ್ನು, ಧಾರವಾಡದ ಮನಸೂರು, ಗದಗನ ಕಳಸಾಪುರದಲ್ಲಿ ಐದು ಎಕರೆ ಕೃಷಿಯೇತರ ಭೂಮಿ, ಧಾರವಾಡದ ಹೊಸ ಬಸ್‌ ನಿಲ್ದಾಣದ ಬಳಿ ಸಿದ್ಧಾರ್ಥ ಕಾಲನಿಯಲ್ಲಿ ಆರು ಗುಂಟೆ ಜಾಗ ಸೇರಿದಂತೆ ₹4 ಕೋಟಿ ಸ್ಥಿರಾಸ್ತಿಯನ್ನು ಅಸೂಟಿ ಹೊಂದಿದ್ದಾರೆ. ಅದೇ ರೀತಿ ತಮ್ಮ ಉದ್ಯಮಕ್ಕಾಗಿ ಅಸೂಟಿ ₹4.50 ಕೋಟಿ ಸಾಲ ಸಹ ಮಾಡಿಕೊಂಡಿದ್ದಾರೆ. ಹಾಗೆಯೇ, ಪತ್ನಿ ಹೆಸರಿನಲ್ಲಿ ₹5.48 ಲಕ್ಷ ಚರಾಸ್ತಿ ಇದೆ. ಹಾಗೆಯೇ, ಇಬ್ಬರು ಪುತ್ರಿಯರು, ಓರ್ವ ಪುತ್ರರಿದ್ದು ಅವರ ಹೆಸರಿನಲ್ಲಿ ಯಾವ ಆಸ್ತಿ ಇಲ್ಲ ಎಂದು ಅಸೂಟಿ ಘೋಷಿಸಿಕೊಂಡಿದ್ದಾರೆ.