ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಸರ್ಕಾರಿ ನಿಯಮ ಮೀರಿ ಆದೇಶ ವಿತರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಡಿಪಿಐ, ಜಿಲ್ಲೆಯ 5 ಮಂದಿ ಬಿಇಒ ಮತ್ತು ಕಲಾಂ ಸಂಸ್ಥೆಯ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಬಿಹಾಳ ಮತ್ತು ಕೊಳ್ಳೇಗಾಲ ಶ್ರೀನಿವಾಸ ಟಾಕೀಸ್ ರಸ್ತೆಯ ಪದಾಧಿಕಾರಿಗಳನ್ನು ದೂರುದಾರರ ಉಪಸ್ಥಿತಿಯಲ್ಲಿ ಮೈಸೂರು ವಿಭಾಗೀಯ ಜಂಟಿ ನಿರ್ದೇಶಕರು 19ರಂದು ಪ್ರತ್ಯೇಕವಾಗಿ ವಿಚಾರಣೆ ನಡೆಸಲಿದ್ದಾರೆ .ಎ ಪಿ ಜೆ ಅಬ್ದುಲ್ ಕಲಾಂ ಸಂಸ್ಥೆಗೆ ಡಿಡಿಪಿಐ ಅವರು ಗಣಕಯಂತ್ರ, ಯೋಗ ತರಬೇತಿಗಾಗಿ ನಿಯಮ ಮೀರಿ ಅನುಮತಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡಪ್ರಭ ಸವಿವರ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಏತನ್ಮಧ್ಯೆ, ಈ ಸಂಬಂಧ ನಿರಂಜನ್ ಎಂಬುವರು ಆಯುಕ್ತರು, ಶಿಕ್ಷಣ ಇಲಾಖಾ ಸಚಿವರು, ಮುಖ್ಯಮಂತ್ರಿಗಳಿಗೆ ದೂರು ನೀಡಿದ ಹಿನ್ನೆಲೆ ಈ ಸಂಬಂಧ ತನಿಖೆಗೆ ಆದೇಶಿಸಲಾಗಿತ್ತು.
ಮೈಸೂರು ವಿಭಾಗೀಯ ಜಂಟಿ ನಿರ್ದೇಶಕ ಪಾಂಡುರಂಗರವರು ಈ ಸಂಬಂಧ ಜಿಲ್ಲೆಯೆ ಹನೂರು ಬಿಇಒ ಗುರುಲಿಂಗಯ್ಯ, ಕೊಳ್ಳೇಗಾಲ ಬಿಇಒ ಮಂಜುಳ, ಯಳಂದೂರು ಬಿಇಒ ಮಾರಯ್ಯ, ಚಾ.ನಗರ ಬಿಇಒ ಹನುಮಶೆಟ್ಟಿ, ಗುಂಡ್ಲುಪೇಟೆ ಬಿಇಒ ಸ್ವಾಮಿ ಸೇರಿದಂತೆ ಐದು ಮಂದಿ ಬಿಇಒಗಳಿಗೆ ಜಂಟಿ ನಿರ್ದೇಶಕರು ಕಲಾಂ ಸಂಸ್ಥೆ ನೇಮಕಾತಿ ಪ್ರಕರಣದಲ್ಲಿ ಸಹಿ ನನ್ನದಲ್ಲ, ಆದೇಶ ಹೊರಡಿಸಿಲ್ಲ ಎಂಬ ಡಿಡಿಪಿಐ ಹೇಳಿಕೆ ಹಿನ್ನೆಲೆ ವಿಚಾರಣೆ ನಡೆಸಿ ವಾಸ್ತವ ಮಾಹಿತಿಯನ್ನು ದೂರುದಾರರು ಸಮಕ್ಷಮದಲ್ಲಿ ಪಡೆಯಲಿದ್ದಾರೆ ಎನ್ನಲಾಗಿದೆ.ಅಲ್ಲದೆ ಈ ಸಂಬಂಧ ಡಿಡಿಪಿಐ ಅವರು ನಿಯಮ ಮೀರಿ ಆದೇಶ ನೀಡಿದ ಪ್ರಕರಣ ಹಾಗೂ ಸರ್ಕಾರಿ ಅಧಿಕಾರಿಯಾಗಿ ಸರ್ಕಾರದ ಅನುಮತಿ ಪಡೆಯದೆ ನಿಯಮ ಉಲ್ಲಂಘಿಸಿ ಅನುಮತಿ ನೀಡಿ ಬಡವರು, ಹಿಂದುಳಿದ ವರ್ಗದವರು ಉದ್ಯೋಗದ ಆಸೆಗಾಗಿ ವಂಚನೆಗೊಳಗಾದ ಹಿನ್ನೆಲೆ ಈ ಸಂಬಂಧವೂ ಸಹ ದೂರುದಾರರ ಸಮಕ್ಷಮದಲ್ಲಿ ಚಾ.ನಗರ ಡಯಟ್ ನಲ್ಲಿ ಡಿಡಿಪಿಐ ರಾಮಚಂದ್ರರಾಜೇ ಅರಸ್ ಮತ್ತು ದೂರುದಾರರ ಸಮಕ್ಷಮದಲ್ಲಿ ಜಂಟಿ ನಿರ್ದೇಶಕರು ವಿಚಾರಣೆ ನಡೆಸಲಿದ್ದಾರೆ.
ಬಿಇಒ ವಿರುದ್ದವೂ 3ಗಂಟೆಗೆ ವಿಚಾರಣೆ:ಹನೂರು ಶೈಕ್ಷಣಿಕ ವಲಯದ ಬಿಇಒ ಗುರುಲಿಂಗಯ್ಯ ಅವರು ಅಟೆಂಡರ್ ಬಿಡುಗಡೆಗೊಳಿಸಿ ಎಂಬ ಆದೇಶದ ಹಿನ್ನೆಲೆ ಹಾಗೂ ಆಯಾ, ಅಟೆಂಡರ್ ನೇಮಕಕ್ಕೆ ಮೌಖಿಕವಾಗಿ ಆದೇಶ ನೀಡಿ ವಿವಾದಕ್ಕೀಡಾಗಿ, ಸರ್ಕಾರಿ ಅಧಿಕಾರಿಯಾಗಿ ಈ ಪ್ರಕರಣದಲ್ಲಿ ನಿಯಮ ಮೀರಿ ಮತ್ತೊಂದು ಆದೇಶ ಹೊರಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ವಿಚಾರಣೆ ನಡೆಯಲಿದೆ.
ಚಾ.ನಗರ ಡಯಟ್ ನಲ್ಲಿ ಮಾ.19ರಂದು ಮಧ್ಯಾಹ್ನ 3 ಗಂಟೆಗೆ ವಿಚಾರಣೆಯು ದೂರುದಾರರ ಸಮ್ಮುಖದಲ್ಲಿ ನಡೆಯಲಿದ್ದು ವಿಚಾರಣೆಗೆ ಹಾಜರಾಗದ ಪಕ್ಷದಲ್ಲಿ ಏಕಪಕ್ಷೀಯವಾಗಿ ವಿಚಾರಣಾ ವರದಿಯನ್ನು ಪಾರದರ್ಶಕವಾಗಿ ಸರ್ಕಾರದ ಮತ್ತು ಇಲಾಖಾ ಗಮನಕ್ಕೆ ಸಲ್ಲಿಸುವುದಾಗಿ ಜಂಟಿ ನಿರ್ದೇಶಕರು ನೀಡಿರುವ ನೋಟಿಸ್ ನಲ್ಲಿ ತಿಳಿಸಿದ್ದಾರೆ.------
ಸಂಖ್ಯಾಬಲ ಮರೆಮಾಚುತ್ತಿರುವ ಬಿಇಒಗಳು! :ಈ ಪ್ರಕರಣದಲ್ಲಿ ಕಲಾಂ ಸಂಸ್ಥೆಯಿಂದ ನೇಮಕಗೊಂಡ ಯೋಗ, ಗಣಕಯಂತ್ರ ಮತ್ತು ಅಟೆಂಡರ್ ಗಳ ಸಂಖ್ಯಾ ಬಲವನ್ನು ಜಿಲ್ಲಾದ್ಯಂತ ಕೆಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮರೆಮಾಚುತ್ತಿದ್ದಾರೆ. ಒಬ್ಬ ಬಿಇಒ ನಾವು ಯಾರನ್ನು ನೇಮಕ ಮಾಡಿಕೊಂಡಿಲ್ಲ ಎಂದು ಸುಳ್ಳು ಹೇಳುತ್ತಿದ್ದು, ಆ ವಲಯದಲ್ಲಿ ಹಲವರು ಕಲಾಂ ಸಂಸ್ಥೆಯಿಂದ ನೇಮಕಗೊಂಡ ಶಾಲೆಯಲ್ಲಿ ಕತ೯ವ್ಯ ನಿರ್ವಹಿಸುತ್ತಿರುವ ದಾಖಲೆಗಳು ಲಭ್ಯವಿದೆ. ಅಲ್ಲದೆ ಮತ್ತೊಬ್ಬ ಬಿಇಒ ಅವರು ಹೆಚ್ಚು ಯೋಗ, ಅಟೆಂಡರ್, ಯೋಗ ತರಬೇತಿಗಾಗಿ ಫಲಾನುಭವಿಗಳನ್ನು ನೇಮಿಸಿಕೊಂಡು ಕಡಿಮೆ ನೇಮಕದ ಪಟ್ಟಿ ನೀಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಸಂಬಂಧ ದೂರುದಾರರ ಬಳಿ ಸಮರ್ಪಕ ದಾಖಲೆಗಳಿದ್ದು ವಿಚಾರಣೆ ವೇಳೆ ದಾಖಲೆ ಸಮೇತ ಪಟ್ಟಿ ಸಲ್ಲಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಅಧಿಕಾರಿಯೊಬ್ಬರು ಪ್ರಭಾವಿ ಸಚಿವರ ಮೊರೆ :ಕಲಾಂ ಸಂಸ್ಥೆಗೆ ನಿಯಮ ಮೀರಿ ಆದೇಶ ವಿತರಿಸಿದ ಪ್ರಕರಣ, ಲೋಪ, ಭ್ರಷ್ಟಾಚಾರಕ್ಕೆ ಆಸ್ಪದ ಮಾಡಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಯೊಬ್ಬರು ಪ್ರಭಾವಿ ಸಚಿವರೊಬ್ಬರ ಮೊರೆ ಹೊಕ್ಕಿದ್ದಾರೆ ಎನ್ನಲಾಗಿದೆ. ನನ್ನ ರಕ್ಷಿಸಿ ಎಂದು ಅಧಿಕಾರಿ ಸಚಿವರೊಬ್ಬರಿಗೆ ಮೊರೆ ಇಟ್ಟಿದ್ದಾರೆ ಎಂದು ಶಿಕ್ಷಕ ವಲಯಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಅಲ್ಲದೆ ಈ ಪ್ರಕರಣದಲ್ಲಿ ಡಿಡಿಪಿಐ ಅವರು ಬಚಾವ್ ಆಗಲು ಕೆಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕೆಲ ಮುಖ್ಯ ಶಿಕ್ಷಕರನ್ನು ತಲೆದಂಡ ಮಾಡುವ ಸಾಧ್ಯತೆ ಇದೆ ಎಂದು ಸಹ ಇಲಾಖಾ ವಲಯಗಳಲ್ಲಿ ಹೇಳಲಾಗುತ್ತಿದೆ,
-----ಈ ಪ್ರಕರಣದಲ್ಲಿ ಡಿಡಿಪಿಐ ಅವರು ತಪ್ಪು ಮಾಡಿ ಇಲಾಖೆಯ ಘನತೆ ಹಾಳು ಮಾಡಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಕ್ರಮಕ್ಕೆ ದೂರು ಸಲ್ಲಿಸಿದ್ದು, ಮತ್ತೊಬ್ಬ ಬಿಇಒ ಅವರು ಸಹ ಡಿಡಿಪಿಐ ಆದೇಶ ಉಲ್ಲೇಖಿಸಿ ಮರು ಆದೇಶ ನೀಡಿ ಅಕ್ರಮಕ್ಕೆ ಸಾಥ್ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಸಹ ಮಾ.19ರಂದು ವಿಚಾರಣೆ ನಡೆಯಲಿದೆ. ಈ ವಿಚಾರಣೆ ವೇಳೆ ನ್ಯಾಯ ಸಿಗದಿದ್ದರೆ ಇನ್ನಷ್ಟು ದಾಖಲೆಗಳ ಸಮೇತ ಲೋಕಾಯುಕ್ತಕ್ಕೂ ದೂರು ನೀಡುವೆ.
- ನಿರಂಜನ್, ದೂರುದಾರ------
ಡಿಡಿಪಿಐ ನಿಯಮ ಮೀರಿದ ಆದೇಶ ಪ್ರಕರಣಕ್ಕೆ ಡಿಡಿಪಿಐ, ಜಿಲ್ಲೆಯ 5 ಮಂದಿ ಬಿಇಒ ಮತ್ತು ನಕಲಿ ಮತ್ತು ಅಸಲಿ ಕಲಾಂ ಸಂಸ್ಥೆ, ಹನೂರು ಬಿಇಒಗೂ ಪ್ರತ್ಯೇಕ ವಿಚಾರಣೆಗೆ ಜಂಟಿ ನಿರ್ದೇಶಕರು ಪ್ರತ್ಯೇಕ ನೋಟಿಸ್ ಜಾರಿ ಮಾಡಿರುವ ಪ್ರತಿ.