ಸಾರಾಂಶ
ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಮದ್ಯದ್ದೇ ಸಿಂಹಪಾಲು, ಸುಮಾರು 94,67,004 ರು. ಮೌಲ್ಯದ 15,380 ಲೀ.ನಷ್ಟು ಮದ್ಯವನ್ನು ಅಬಕಾರಿ ಪೊಲೀಸರು ಜಪ್ತು ಮಾಡಿಕೊಂಡಿದ್ದಾರೆ. 1,10950 ರು. ಮೌಲ್ಯದ 3.449 ಕೆ.ಜಿ. ಮಾದಕ ವಸ್ತುಗಳನ್ನು ಹಾಗೂ 3,68,510 ರು. ಮೌಲ್ಯದ ಬಟ್ಟೆಬರೆ, ಸಾಫ್ಟ್ ಡ್ರಿಂಕ್ಸ್ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ಮೇಲೆ ಮಂಗಳವಾರದ ವರೆಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಒಟ್ಟು 99,46,464 ರು. ಮೌಲ್ಯದ ಮದ್ಯ, ಮಾದಕ ವಸ್ತು ಹಾಗೂ ಇನ್ನಿತರು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಅದರಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಮದ್ಯದ್ದೇ ಸಿಂಹಪಾಲು, ಸುಮಾರು 94,67,004 ರು. ಮೌಲ್ಯದ 15,380 ಲೀ.ನಷ್ಟು ಮದ್ಯವನ್ನು ಅಬಕಾರಿ ಪೊಲೀಸರು ಜಪ್ತು ಮಾಡಿಕೊಂಡಿದ್ದಾರೆ. 1,10950 ರು. ಮೌಲ್ಯದ 3.449 ಕೆ.ಜಿ. ಮಾದಕ ವಸ್ತುಗಳನ್ನು ಹಾಗೂ 3,68,510 ರು. ಮೌಲ್ಯದ ಬಟ್ಟೆಬರೆ, ಸಾಫ್ಟ್ ಡ್ರಿಂಕ್ಸ್ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿ, ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ಅಲ್ಲದೆ ಸೂಕ್ತ ದಾಖಲೆಗಳಿಲ್ಲದೆ ಸಾಗಿಸಲಾಗುತ್ತಿದ್ದ 14,92,600 ರು. ನಗದನ್ನು ವಶಪಡಿಸಿಕೊಳ್ಳಲಾಗಿದ್ದರೂ ಕೂಡ, ನಂತರ ದಾಖಲೆಗಳನ್ನು ಒದಗಿಸಿದ ಮೇಲೆ ಹಿಂತಿರುಗಿಸಲಾಗಿದೆ ಎಂದವರು ಹೇಳಿದ್ದಾರೆ.ಪಕ್ಷಗಳ ಪ್ರಚಾರ ಸಭೆ ಸಮಾವೇಶಗಳಲ್ಲಿ ವೆಚ್ಚಕ್ಕೆ ಸಂಬಂಧಿಸಿದಂತೆ 13 ಮತ್ತು ಅಬಕಾರಿ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿ 537 ಪ್ರಕರಣಗಳನ್ನು ದಾಖಲಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು1202 ದೂರುಗಳು ದಾಖಲಾಗಿದ್ದು, ಅವುಗಳಲ್ಲಿ 1199 ದೂರುಗಳನ್ನು ಕ್ಷಿಪ್ರವಾಗಿ ಇತ್ಯರ್ಥ ಮಾಡಲಾಗಿದೆ, 3 ದೂರುಗಳು ಹೆಚ್ಚಿನ ತನಿಖೆಗೆ ಬಾಕಿ ಇವೆ ಎಂದು ಕ್ಷೇತ್ರ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಬರುವ ಸ್ಟಾರ್ ಪ್ರಚಾರಕರಿಗೆ ಹೆಲಿಕಾಫ್ಟರ್ ಇಳಿಯಲು 4 ಅನುಮತಿಗಳನ್ನು ನೀಡಲಾಗಿದೆ. ಪಕ್ಷಗಳ ಕಚೇರಿಗೆ ತೆರೆಯಲು 11 ಅರ್ಜಿಗಳು ಬಂದಿದ್ದು, 9 ಅನುಮತಿ ನೀಡಲಾಗಿದೆ. ಹೀಗೆ ಸಭೆ, ಸಮಾವೇಶ, ರ್‍ಯಾಲಿ ಇತ್ಯಾದಿಗಳಿಗೆ ಒಟ್ಟು 164 ಅರ್ಜಿಗಳು ಬಂದಿದ್ದು, 131ಕ್ಕೆ ಅನುಮತಿ ನೀಡಲಾಗಿದೆ. 27 ಅರ್ಜಿಗಳಿಗೆ ಅನುಮತಿ ನೀರಾಕರಿಸಲಾಗಿದ್ದು, 6 ಅರ್ಜಿಗಳು ಬಾಕಿ ಇವೆ ಎಂದವರು ತಿಳಿದ್ದಾರೆ.