ಸಾರಾಂಶ
ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸುವುದು ಚುನಾವಣೆ ಆಯೋಗದ ಮುಖ್ಯ ಉದ್ದೇಶ. ಈ ಹಿನ್ನೆಲೆಯಲ್ಲಿ ಚುನಾವಣೆಗೆ ಸಂಬಂಧಿಸಿದ ಅತಿ ಸೂಕ್ಷ್ಮ ವಿಷಯಗಳು ಸೇರಿ ಪ್ರತಿ ಅಂಶ ಜಾಗರೂಕತೆಯಿಂದ ಗಮನಿಸಲಾಗುತ್ತಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಸಾಮಾನ್ಯ ವೀಕ್ಷಕ ಮನೋಹರ ಮರಂಡಿ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾದರಿ ನೀತಿ ಸಂಹಿತೆ ಹಾಗೂ ಚುನಾವಣೆ ವೆಚ್ಚದ ಕುರಿತು ಅಭ್ಯರ್ಥಿಗಳು ಹಾಗೂ ಅವರ ಏಜೆಂಟರೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು ಚುನಾವಣೆಗೆ ಸ್ಪರ್ಧಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಹಾಗೂ ವೇದಿಕೆ ಕಲ್ಪಿಸಿಕೊಡಲಾಗುವುದು. ಚುನಾವಣೆ ವೆಚ್ಚ ದೃಷ್ಟಿಯಿಂದ ರಾಜಕೀಯ ಮುಖಂಡರು ಹಾಗೂ ಸ್ಟಾರ್ ಪ್ರಚಾರಕರ ಆಗಮನದ ಮೇಲೂ ಗಮನ ಇರಿಸಲಾಗಿದೆ. ಸಿ-ವಿಜಿಲ್ ಮೂಲಕವೂ ಮಾದರಿ ನೀತಿ ಸಂಹಿತೆ ಉಲಂಘನೆ ದೂರು ಸಲ್ಲಿಸಬಹುದಾಗಿದೆ ಎಂದರು.
ಅಭ್ಯರ್ಥಿಗಳು ತಪ್ಪದೇ ಪ್ರತಿದಿನ ಚುನಾವಣೆ ವೆಚ್ಚದ ಲೆಕ್ಕವನ್ನು ಇಡಬೇಕು ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾ ವಣೆ ವೆಚ್ಚ ವೀಕ್ಷಕ ಪ್ರಜಕ್ತ ಠಾಕೂರ್ ಅಭ್ಯರ್ಥಿಗಳಿಗೆ ನಿರ್ದೇಶನ ನೀಡಿದರು. ಚುನಾವಣೆಗೆ ನಾಮಪತ್ರ ಸಲ್ಲಿಸಿದ ದಿನದಿಂದಲೇ ವೆಚ್ಚದ ವಹಿಗಳನ್ನು ನಿರ್ವಹಿಸಬೇಕು. ಈ ವಹಿಗಳನ್ನು ಮೂರು ಬಾರಿ ನಿಗದಿ ಪಡಿಸಿದ ದಿನಾಂಕಗಳಂದು ಪರಿಶೀಲನೆ ಮಾಡ ಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರವಾರು ಸಹಾಯಕ ಚುನಾವಣೆ ಅಧಿಕಾರಿಗಳ ನೇತೃತ್ವದಲ್ಲಿ ಚುನಾವಣೆ ವೆಚ್ಚದ ಶ್ಯಾಡೋ ರಿಜಿಸ್ಟರ್ ವಹಿ ದಾಖಲಿಸಲಾಗುತ್ತದೆ ಎಂದರು.ದೇವಾಲಯ, ಚರ್ಚ್, ಮಸೀದಿ, ಮಠ ಸೇರಿದಂತೆ ಯಾವುದೇ ಧಾರ್ಮಿಕ ಕೇಂದ್ರಗಳನ್ನು ಚುನಾವಣಾ ಪ್ರಚಾರಕ್ಕಾಗಿ ಬಳಸು ವಂತಿಲ್ಲ. ಇದರ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ನಿರ್ಮಿಸಲ್ಪಟ್ಟ ಸರ್ಕಾರಿ ಭವನಗಳನ್ನು ಚುನಾವಣಾ ಪ್ರಚಾರ ಕ್ಕೆ ಬಳಸಬಾರದು. ಅಭ್ಯರ್ಥಿಗಳಿಗೆ ಹಾಗೂ ಏಜೆಂಟರಿಗೆ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಸಲಹೆ ನೀಡಿದರು.
ಭಾರತ ಚುನಾವಣಾ ಆಯೋಗವು 80 ವರ್ಷ ಮೇಲ್ಪಟ್ಟ ಹಿರಿಯರಿಗೆ ಹಾಗೂ ಅಂಗವಿಕಲ ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದು, ಜಿಲ್ಲೆಯಲ್ಲಿ ಮನೆಯಿಂದಲೇ ಮತದಾನ ಏಪ್ರಿಲ್ 13 ರಿಂದ 15 ರವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.ಜಿಲ್ಲೆಯಲ್ಲಿ 29 ಸಾವಿರಕ್ಕೂ ಹೆಚ್ಚು ಅಂಗವಿಕಲ ಮತದಾರರು ಹಾಗೂ 80 ವರ್ಷ ಮೇಲ್ಪಟ್ಟ 16 ಸಾವಿರ ಹಿರಿಯ ನಾಗರಿಕರ ನ್ನು ಗುರುತಿಸಲಾಗಿದ್ದು, ಮನೆಯಿಂದಲೇ ಮತದಾನಕ್ಕಾಗಿ ಈಗಾಗಲೇ ಪ್ರತಿಯೊಬ್ಬರಿಗೂ ನಮೂನೆ 12 ‘ಡಿ’ ಅನ್ನು ವಿತರಣೆ ಮಾಡಲಾಗಿದೆ. ಈ ಪೈಕಿ ಮನೆಯಿಂದಲೇ ಮತದಾನ ಮಾಡಲು ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಸೇರಿ ಜಿಲ್ಲೆಯಲ್ಲಿ ಸುಮಾರು 4 ಸಾವಿರ ಮಂದಿ ಮನೆಯಿಂದ ಮತದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಎಸ್.ಜೆ. ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಜಿಲ್ಲಾ ಚುನಾವಣಾ ವೆಚ್ಚ ಉಸ್ತುವಾರಿ ಕೋಶದ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಡಿ.ಆರ್.ಮಧು ಸೇರಿ ಚಿತ್ರದುರ್ಗ ಲೋಕಸಭಾ ಚುನಾವಣೆಗ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಏಜೆಂಟರು ಇದ್ದರು.