ಮಾದರಿ ನೀತಿ ಸಂಹಿತೆ ಉಲ್ಲಂಘನೆ: 178 ಕೇಸ್‌ ದಾಖಲು

| Published : Mar 25 2024, 12:53 AM IST

ಸಾರಾಂಶ

ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ಅಂಚೆ ಮತಪತ್ರದ ಕುರಿತು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ತೀವ್ರ ನಿಗಾ ವಹಿಸಲಾಗಿದ್ದು, ಪೋಲಿಸ್ ಇಲಾಖೆಯಿಂದ 47 ಹಾಗೂ ಅಬಕಾರಿಯಿಂದ 131 ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 178 ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ಅಂಚೆ ಮತಪತ್ರದ ಕುರಿತು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಚುನಾವಣಾ ಅಕ್ರಮ ಚಟುವಟಿಕೆ ನಿಗ್ರಹಿಸಲು ಜಿಲ್ಲೆಯಾದ್ಯಂತ 36 ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ದಿನದ 24 ಗಂಟೆಯೂ ಚೆಕ್‌ಪೋಸ್ಟ್‌ಗಳಲ್ಲಿ ಅಧಿಕಾರಿ, ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ವೇಳೆಯಲ್ಲಿ ಇಲ್ಲಿಯವರೆಗೆ ರೂ.1.87,93,000/- ನಗದು ವಶ ಪಡಿಸಿಕೊಳ್ಳ ಲಾಗಿದೆ. 108 ಸೀರೆಗಳ ವಶ, ಅಬಕಾರಿ ಇಲಾಖೆಯಿಂದ 22, 241.75 ಲೀಟರ್ ಮದ್ಯ ಹಾಗೂ ಪೊಲೀಸ್ ಇಲಾಖೆಯಿಂದ 265.490 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಚುನಾವಣಾಧಿಕಾರಿಗಳ ಕಾರ್ಯಾಲಯ ತೆರೆಯಲಾಗಿದ್ದು, ಇದೇ ಮಾರ್ಚ್ 28 ರಿಂದ ನಾಮಪತ್ರ ಗಳ ಸ್ವೀಕಾರ ಕಾರ್ಯ ನಡೆಯಲಿದೆ. ಇದಕ್ಕೂ ಪೂರಕವಾಗಿ ಬೇಕಾದಂತ ಅರ್ಜಿ ನಮೂನೆಗಳು ಕಚೇರಿಯಲ್ಲಿ ಲಭ್ಯವಿದ್ದು, ಅಗತ್ಯವಿರುವವರು ಕಚೇರಿಯ ಅವಧಿಯಲ್ಲಿ ಭೇಟಿ ಮಾಡಿ ಪಡೆಯಬಹುದಾಗಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಚುನಾವಣಾ ಆಯೋಗವು ಸಾಮಾನ್ಯ ವೀಕ್ಷಕರು, ವೆಚ್ಚ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರನ್ನು ನೇಮಕ ಮಾಡಿದೆ. ನಾಮಪತ್ರ ಸಲ್ಲಿಕೆಯ ಕಡೆಯ ದಿನಾಂಕದೊಳಗೆ ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಹೇಳಿದರು.

ಮತದಾನ ಹೆಚ್ಚಳಕ್ಕೆ ಕ್ರಮ: ಸ್ವೀಪ್ ಕಾರ್ಯದಡಿಯಲ್ಲಿ ಜಿಲ್ಲೆಯ ಎಲ್ಲ ಮತದಾರರು ಮತಗಟ್ಟೆಗೆ ತೆರಳಿ ಮತ ಚಲಾಯಿಸುವಂತೆ ಜಿಲ್ಲಾಡಳಿತ ವತಿಯಿಂದ ಮನವಿ ಮಾಡಲು ಕ್ರಮಕೈಗೊಂಡಿದ್ದು, ಪ್ರತಿಯೊಬ್ಬ ಮತದಾರರಿಗೂ ವೈಯಕ್ತಿಕ ಪತ್ರ ಮುಖೇನ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿ ಪ್ರಜಾಪ್ರಭುತ್ವದಲ್ಲಿ ಸಕ್ರಿಯ ವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗುವುದು. ಇದರ ಜೊತೆಗೆ ಕಡಿಮೆ ಮತದಾನವಾಗಿರುವ ಮತಗಟ್ಟೆ ಪ್ರದೇಶಗಳ ವ್ಯಾಪ್ತಿಯಲ್ಲಿ ಸ್ವೀಪ್ ಚಟುವಟಿಕೆಗಳ ಮೂಲಕ ಜಾಗೃತಿ ಮೂಡಿಸಿ, ಮತದಾನ ಪ್ರಮಾಣ ಹೆಚ್ಚಳಕ್ಕೆ ಅಗತ್ಯ ಕ್ರಮವಹಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ 1661 ಮತದಾನ ಕೇಂದ್ರಗಳು: ಭಾರತ ಚುನಾವಣಾ ಆಯೋಗವು ಮಾರ್ಚ್ 22ರಂದು ಜಿಲ್ಲೆಯ ಕರಡು ಮತದಾನ ಕೇಂದ್ರಗಳ ಪಟ್ಟಿಯನ್ನು ಅನುಮೋದಿಸಿದ್ದು, ಅದರಂತೆ ಜಿಲ್ಲೆಯಾದ್ಯಂತ ಒಟ್ಟು 1661 ಮತದಾನ ಕೇಂದ್ರಗಳಿದ್ದು, ಅಂತಿಮ ಮತದಾನ ಕೇಂದ್ರಗಳನ್ನು ಪಟ್ಟಿಯನ್ನು ಪ್ರಚುರಪಡಿ ಸಲಾಗುವುದು.

85 ವರ್ಷ ಮೇಲ್ಪಟ್ಟ ಮತದಾರರಿಗೆ ಹಾಗೂ ಅಂಗವಿಕಲ ಮತದಾರರಿಗೆ ಮನೆಯಲ್ಲಿಯೇ ಮತದಾನಕ್ಕೆ ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದೆ. 85 ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕಲರು ಕಡ್ಡಾಯವಾಗಿ ಮನೆಯಲ್ಲಿಯೇ ಮತದಾನ ಮಾಡಬೇಕು ಎಂಬುವುದು ಕಡ್ಡಾಯವಲ್ಲ. ಇದೊಂದು ಆಯ್ಕೆಯಾಗಿದೆ ಎಂದು ತಿಳಿಸಿದ ಅವರು, ಈಗಾಗಲೇ 85 ವರ್ಷ ಮೇಲ್ಪಟ್ಟವರಿಗೆ ಹಾಗೂ ಅಂಗವಿಕಲರಿಗೆ ಅಂಚೆ ಮತ ಪತ್ರ 12ಡಿ ಫಾರಂ ವಿತರಣೆ ಮಾಡಲಾಗುತ್ತಿದ್ದು, 12ಡಿಗೆ ಒಪ್ಪಿಗೆ ಸೂಚಿಸಿದ ನಂತರ ಮನೆ ಮತದಾನದ ಕುರಿತು ಪೂರ್ವಭಾವಿಯಾಗಿ ಮಾಹಿತಿ ನೀಡಲಾಗುವುದು. ಅಂತಹವರು ಮನೆಯಲ್ಲಿಯೇ ಹಾಜರಿದ್ದು, ಮತದಾನ ಮಾಡಬೇಕು. 12ಡಿ ಗೆ ಒಪ್ಪಿಗೆ ಸೂಚಿಸಿದ ನಂತರ ಯಾವುದೇ ಕಾರಣಕ್ಕೂ ಮತಗಟ್ಟೆಗೆ ಬಂದು ಮತ ಚಲಾಯಿಸಲು ಅವಕಾಶ ಇರುವುದಿಲ್ಲ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.