ನಿಯಮ ಉಲ್ಲಂಘನೆ: ಕಿರವತ್ತಿಯ ೩ ಖಾಸಗಿ ಆಸ್ಪತ್ರೆಗೆ ಬೀಗ

| Published : Jul 30 2024, 12:32 AM IST

ನಿಯಮ ಉಲ್ಲಂಘನೆ: ಕಿರವತ್ತಿಯ ೩ ಖಾಸಗಿ ಆಸ್ಪತ್ರೆಗೆ ಬೀಗ
Share this Article
  • FB
  • TW
  • Linkdin
  • Email

ಸಾರಾಂಶ

ಕೆಪಿಎಂಇ ಕಾಯ್ದೆ ಅಡಿಯಲ್ಲಿ ಅಗತ್ಯ ನಿಯಮಗಳನ್ನು ಪಾಲಿಸದೇ ವೈದ್ಯಕೀಯ ವೃತ್ತಿಯಲ್ಲಿ ನಿರತರಾಗಿದ್ದ ಯಲ್ಲಾಪುರ ತಾಲೂಕಿನ ಕಿರವತ್ತಿಯ ೩ ಖಾಸಗಿ ಆಸ್ಪತ್ರೆಗಳನ್ನು ಸೋಮವಾರ ಬೀಗ ಹಾಕಿ ಮುಚ್ಚಿಸಲಾಗಿದೆ.

ಯಲ್ಲಾಪುರ: ಕೆಪಿಎಂಇ ಕಾಯ್ದೆ ಅಡಿಯಲ್ಲಿ ಅಗತ್ಯ ನಿಯಮಗಳನ್ನು ಪಾಲಿಸದೇ ವೈದ್ಯಕೀಯ ವೃತ್ತಿಯಲ್ಲಿ ನಿರತರಾಗಿದ್ದ ತಾಲೂಕಿನ ಕಿರವತ್ತಿಯ ೩ ಖಾಸಗಿ ಆಸ್ಪತ್ರೆಗಳನ್ನು ಸೋಮವಾರ ಬೀಗ ಹಾಕಿ ಮುಚ್ಚಿಸಲಾಗಿದೆ.

ಈ ಆಸ್ಪತ್ರೆಗಳ ಮೇಲೆ ಹಠಾತ್ ದಾಳಿ ನಡೆಸಿದ ತಾಲೂಕು ಆರೋಗ್ಯಾಧಿಕಾರಿಗಳ ತಂಡ, ಅನೇಕ ನ್ಯೂನತೆಗಳನ್ನು ಪತ್ತೆ ಹಚ್ಚಿದೆ. ಬೀಗ ಹಾಕಲಾದ ಎಲ್ಲ ಆಸ್ಪತ್ರೆಗಳಲ್ಲಿ ಬಯೋಮೆಡಿಕಲ್ ವೇಸ್ಟ್ ಸರಿಯಾದ ಕ್ರಮದಲ್ಲಿ ವಿಲೇವಾರಿ ಮಾಡುತ್ತಿಲ್ಲ. ಸೂಜಿ, ಸಿರಿಂಜ್, ಕಾಟನ್, ಸಲೈನ್ ಬಾಟಲ್, ಕೆಥೆಟರ್, ಖಾಲಿ ಆಂಪಲ್‌ಗಳನ್ನು ನಿಯಮಾನುಸಾರ ವಿಲೇವಾರಿ ಮಾಡದೇ ಕಸದ ವಾಹನದಲ್ಲಿ ಕಳುಹಿಸಲಾಗುತ್ತಿದೆ. ತಾಂತ್ರಿಕ ಪರಿಣತಿ, ನಿಗದಿತ ವಿದ್ಯಾರ್ಹತೆ ಇಲ್ಲದ ಸಿಬ್ಬಂದಿಯನ್ನು ಔಷಧ ವಿತರಣೆಗೆ, ರಕ್ತದ ಒತ್ತಡ, ಡಯಾಬಿಟಿಸ್ ಪರೀಕ್ಷೆಗೆ ನೇಮಿಸಲಾಗಿದೆ. ಆಸ್ಪತೆಯಲ್ಲಿ ಸ್ವಚ್ಛತೆ ಇಲ್ಲ; ಒಂದು ಖಾಸಗಿ ಆಸ್ಪತ್ರೆ ಕೆಪಿಎಂಇ ಅಡಿಯಲ್ಲಿ ನೋಂದಣಿ ಆಗಿಲ್ಲ. ಇದಲ್ಲದೇ ಸ್ವಂತ ಮನೆಯ ರೂಮೊಂದರಲ್ಲಿ ಒಬ್ಬರು ಯಾವುದೇ ವಿದ್ಯಾರ್ಹತೆ ಹೊಂದದೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಈ ಎಲ್ಲ ಕಾರಣಗಳಿಂದಾಗಿ ಗುರುಪ್ರಸಾದ ಪಾಲಿಕ್ಲಿನಿಕ್, ಕೀರ್ತಿ ಕ್ಲಿನಿಕ್ ಹಾಗೂ ನೇವಿಣಿಗಲ್ಲಿಯ ಮನೆಯೊಂದರಲ್ಲಿ ನಡೆಸಲಾಗುತ್ತಿದ್ದ ಕ್ಲಿನಿಕ್‌ಗೆ ಬೀಗಮುದ್ರೆ ಹಾಕಲಾಗಿದೆ. ಒಂದು ವಾರದೊಳಗೆ ಎಲ್ಲ ವ್ಯವಸ್ಥೆ ಸರಿಪಡಿಸಿಕೊಂಡು ಕೆಪಿಎಂಇ ಕಾಯ್ದೆಗೆ ಅನುಗುಣವಾಗಿ ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ.

ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ, ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ. ಭಟ್ಟ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಹೇಶ ತಾಳಿಕೋಟಿ, ಯು. ಜೋಸೆಫ್, ಪೋಲೀಸ್ ಹವಾಲ್ದಾರ ರಾಘವೇಂದ್ರ ನಾಯ್ಕ ತಂಡದಲ್ಲಿದ್ದರು.