ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ನಗರಸಭಾ ವ್ಯಾಪ್ತಿಯಲ್ಲಿ ಕಳೆದ ೧೫ ದಿನಗಳಿಂದ ಹಲವು ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸೋಮವಾರ ಶಾಸಕರ ಕಚೇರಿ ಸಭಾಂಗಣದಲ್ಲಿ ಜಲಸಿರಿ ಯೋಜನೆ ಹಾಗೂ ನಗರಸಭೆಯ ನೀರಿನ ವಿಭಾಗದ ಅಧಿಕಾರಿಗಳ ಸಭೆಯು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ನಡೆಯುತ್ತಿತ್ತು.ಸಭೆ ನಡೆಯುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಮತ್ತು ಅಧಿಕಾರಿಗಳ ತಂಡ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಕಾರಣಕ್ಕೆ ಸಭೆಯನ್ನು ಮೊಟಕುಗೊಳಿಸಿ ಶಾಸಕರನ್ನು ಹೊರಗೆ ಕಳುಹಿಸಿ ಕಚೇರಿ ಮತ್ತು ಸಭಾಂಗಣಕ್ಕೆ ಬೀಗ ಜಡಿದ ಘಟನೆ ನಡೆಯಿತು.ಸಭೆಯಲ್ಲಿ ನಗರಸಭಾ ವ್ಯಾಪ್ತಿಯಲ್ಲಿನ ಪೆರಿಯತ್ತೋಡಿ, ಬಿರಾವು, ಮಂಜಲ್ಪಡ್ಪು, ಕೆಮ್ಮಾಯಿ, ಚಿಕ್ಕಮುಡ್ನೂರು, ನೆಹರೂನಗರ, ಮುಕ್ರಂಪಾಡಿ ಮತ್ತಿತರ ಕಡೆಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿರುವ ಬಗ್ಗೆ ಪ್ರಸ್ತಾಪಿಸಿದ ಶಾಸಕರು ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಸ್ಪಷ್ಟನೆ ಕೇಳಿದರು.
ಸಭೆಯಲ್ಲಿ ಸ್ಪಷ್ಟನೆ ನೀಡಿದ ಜಲಸಿರಿ ಯೋಜನೆಯ ಅಧಿಕಾರಿಗಳಾದ ಮಾದೇಶ ಮತ್ತು ಪ್ರಮೋದ್ ಅವರು ನಗರಸಭಾ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಪೂರೈಕೆಯ ಬಗ್ಗೆ ಜನವರಿ ತಿಂಗಳಿನಿಂದ ಟ್ರಯಲ್ ಆರಂಭಗೊಂಡಿದೆ. ನಗರದ ಬೋರ್‌ವೆಲ್‌ನಿಂದ ಇರುವಂತಹ ಪೈಪ್‌ಲೈನ್‌ಗಳನ್ನು ಮರ್ಜಿ ಮಾಡಲಾಗುತ್ತಿದೆ. ಮುಂದಿನ ೮ ವರ್ಷಗಳ ಕಾಲ ಗುತ್ತಿಗೆದಾರರೇ ಇದರ ಮೇಲ್ವಿಚಾರಣೆ ಮಾಡಲಿದ್ದಾರೆ. ನಗರದಾದ್ಯಂತ ಒಟ್ಟು ೧೦ ಝೋನ್‌ಗಳಿದ್ದು, ಈ ಪೈಕಿ ೩ ಝೋನ್‌ಗಳಲ್ಲಿ ನೀರು ವ್ಯವಸ್ಥೆ ಸಮರ್ಪಕವಾಗಿದೆ. ಝೋನ್ ೧ರಲ್ಲಿನ ಚಿಕ್ಕಮುಡ್ನೂರು ಎಂಬಲ್ಲಿ ನೀರಿನ ಕೊರತೆಯಿಂದಾಗಿ ಟ್ಯಾಂಕ್‌ಗೆ ನೀರು ತುಂಬುತ್ತಿಲ್ಲ ಅದರಿಂದಾಗಿ ಸ್ಪಲ್ಪ ಮಟ್ಟಿಗೆ ಸಮಸ್ಯೆಯಾಗಿದೆ. ಒಟ್ಟು ೧೫೮ ಕಿ.ಮೀ ಪೈಪ್‌ಲೈನ್ ಅಳಡಿಕೆ ಪೂರ್ಣಗೊಂಡಿದೆ. ಇನ್ನು ೧೨ ಕಿ.ಮೀ ಬಾಕಿಯಾಗಿದೆ. ಇದರೊಂದಿಗೆ ಕುಡ್ಸೆಂಪ್ ಪೈಪ್‌ಲೈನ್‌ಗಳನ್ನು ಇರೊಂದಿಗೆ ಅಂತರ್‌ಜೋಡಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಕುಡಿಯುವ ನೀರಿಗೆ ತೊಂದರೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ನೀರು ಬಿಡುವವರು ಎಚ್ಚರ ವಹಿಸಬೇಕು. ನೀರು ಬಿಡುವವರು ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಸೂಚಿಸಿದ ಶಾಸಕರು ಜಲಸಿರಿ ಕಾಮಗಾರಿ ಡಿಸೆಂಬರ್ ಅಂತ್ಯದೊಳಗೆ ಮುಗಿಯಬೇಕಿತ್ತು. ಆದರೆ ನಿಮಗೆ ಮತ್ತೆ ಹೆಚ್ಚುವರಿಯಾಗಿ ಮಾರ್ಚ್ ಅಂತ್ಯದ ತನಕ ಅವಧಿ ವಿಸ್ತರಣೆ ಮಾಡಲಾಗಿತ್ತು. ಏಪ್ರಿಲ್ ಬಳಿಕ ನೀವು ಬಿಟ್ಟು ಕೊಡಬೇಕಿತ್ತು. ಆದರೆ ಈತನಕವೂ ನಿಮ್ಮ ಕಾಮಗಾರಿ ಪೂರ್ಣಗೊಂಡಿಲ್ಲ. ಕುಡಿಯುವ ನೀರು ವ್ಯವಸ್ಥೆಯನ್ನು ಇನ್ನೆರಡು ದಿನಗಳಲ್ಲಿ ಸರಿಪಡಿಸದಿದ್ದಲ್ಲಿ ನಗರಸಭೆಯ ಮುಂಭಾಗದಲ್ಲಿ ಧರಣಿ ಕುಳಿತುಕೊಳ್ಳುತ್ತೇನೆ ಎಂದು ಎಚ್ಚರಿಸಿದರು. ಅಧಿಕಾರಿಗಳಿಂದ ಸಭೆಗೆ ತಡೆ: ಚುನಾವಣೆಯ ನೀತಿ ಸಂಹಿತೆಯ ನಡುವೆ ಶಾಸಕರು ಸಭೆ ನಡೆಸುತ್ತಿರುವ ಮಾಹಿತಿ ಅರಿತು ಚುನಾವಣಾಧಿಕಾರಿಗಳಾದ ತಹಸೀಲ್ದಾರ್ ಕುಂಞ ಅಹ್ಮದ್ ಅವರು ನಗರಸಭಾ ಪೌರಾಯುಕ್ತ ಬದ್ರುದ್ದೀನ್ ಸೌಧಾಗಾರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಹನಮ ರೆಡ್ಡಿ, ಪೊಲೀಸ್ ಮತ್ತು ಇತರ ಅಧಿಕಾರಿಗಳ ಸಹಿತ ಸಭೆ ನಡೆಯುವ ಸ್ಥಳಕ್ಕೆ ಆಗಮಿಸಿದರು.
ನೀತಿ ಸಂಹಿತೆ ಹಿನ್ನೆಲೆಯಲ್ಲಿ ಯಾವುದೇ ಸಭೆ ನಡೆಸದಂತೆ ಶಾಸಕರಿಗೆ ತಿಳಿಸಿದರು. ಆಗ ಶಾಸಕ ಅಶೋಕ್ ಕುಮಾರ್ ರೈ ಕುಡಿಯುವ ನೀರಿಗೆ ಸಮಸ್ಯೆಯಾಗಿರುವ ಕಾರಣ ನಾನು ಸಭೆ ನಡೆಸುತ್ತಿದ್ದೇನೆ. ಮೊನ್ನೆಯ ಮಳೆಗೆ ೨ ಕಡೆ ಮನೆಗಳಿಗೆ ಹಾನಿಯಾಗಿದೆ. ಕೆಲವು ಕಡೆಗಳಲ್ಲಿ ಕುಡಿಯಲು ನೀರಿಲ್ಲದ ಕಾರಣ ಜನರು ಕೆರೆಯ ನೀರನ್ನು ಕುಡಿಯುತ್ತಿದ್ದಾರೆ. ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳಾದ ನೀವು ಸಭೆ ಮಾಡುವುದಿದ್ದಲ್ಲಿ ನಾನು ಸಭೆ ಮಾಡುತ್ತಿರಲಿಲ್ಲ ಎಂದು ತಿಳಿಸಿದರು.ಸಮಸ್ಯೆಗಳ ಬಗ್ಗೆ ನಮಗೆ ತಿಳಿಸಿ, ನಾವು ಪರಿಹಾರಕ್ಕಾಗಿ ಕ್ರಮ ಕೈಗೊಳ್ಳುತ್ತೇವೆ. ಸಭೆಯನ್ನು ಮೊಟಕುಗೊಳಿಸಿ ಎಂದು ತಹಸೀಲ್ದಾರ್ ಶಾಸಕರಿಗೆ ತಿಳಿಸಿದರು. ಅದರಂತೆ ಶಾಸಕರು ಸಭೆಯನ್ನು ಮೊಟಕುಗೊಳಿಸಿ ತೆರಳಿದರು.
ಬಳಿಕ ಶಾಸಕರನ್ನು ಹಾಗೂ ಸಭಾಂಗಣದ ಒಳಗಿದ್ದ ಎಲ್ಲರನ್ನೂ ಹೊರಗೆ ಕಳುಹಿಸಿದ ಅಧಿಕಾರಿಗಳು ಸಭಾಂಗಣ, ಶಾಸಕರ ಕಚೇರಿ ಮತ್ತು ಅಂಗಳದಲ್ಲಿರುವ ಗೇಟ್‌ಗೆ ಬೀಗ ಹಾಕಿ ತೆರಳಿದರು.ನಾನು ಕಾನೂನಿಗೆ ಗೌರವ ಕೊಡುತ್ತೇನೆ. ನೀವು ಸಮಸ್ಯೆಗೆ ಸ್ಪಂದಿಸದೆ ಇರುವ ನಾನು ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳ ಸಭೆಯನ್ನು ಕರೆದಿದ್ದೇನೆ. ನೀತಿ ಸಂಹಿತೆ ಇದೆ ಎಂದು ಜನರು ನೀರು ಕುಡಿಯದೆ ಇರಲಿಕ್ಕೆ ಆಗುತ್ತದೆಯೇ? ಎರಡು ದಿನಗಳ ಒಳಗೆ ಸಮರ್ಪಕ ವ್ಯವಸ್ಥೆ ಮಾಡದೇ ಇದ್ದರೆ ನಗರಸಭೆಯ ಮುಂಭಾಗದಲ್ಲಿ ನಾನು ಧರಣಿ ಕೂರಬೇಕಾಗುತ್ತದೆ - ಅಶೋಕ್ ಕುಮಾರ್ ರೈ, ಪುತ್ತೂರು ಶಾಸಕ.