ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಪತ್ತೆಗಾಗಿ ಶೀಘ್ರದಲ್ಲೇ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದು ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಸೋಮವಾರ ಹೇಳಿದರು.ರಾಮನಗರ ಗಡಿಭಾಗದ ಬಿಡದಿಯಿಂದ ಮಂಡ್ಯ ಗಡಿ ಭಾಗದ ನಿಡಘಟ್ಟದವರೆಗೆ ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಸಂಚಾರ ನಿಯಮ ಉಲ್ಲಂಘನೆ ಮತ್ತು ವಾಹನಗಳ ಅಪಘಾತ ತಡೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಎಕ್ಸ್ ಪ್ರೆಸ್ ವೇನಲ್ಲಿ 100 ಕಿಮೀ ಗಿಂತಲೂ ವೇಗ ಮೀರಿ ಚಾಲಕರು ವಾಹನಗಳ ಚಲಾಯಿಸುತ್ತಿರುವುದರಿಂದ ಅಪಘಾತಗಳು ಸಂಭವಿಸಿ ಸಾವು- ನೋವು ಉಂಟಾಗುತ್ತಿವೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ಹಾಗೂ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪತ್ತೆಹಚ್ಚಲು ಹೆದ್ದಾರಿಯಲ್ಲಿ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಲಾಗಿದೆ ಎಂದರು.ವಾಹನಗಳ ಚಾಲಕರು ಮತ್ತು ಮುಂದಿನ ಸೀಟಿನ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಿ ಪ್ರಯಾಣ ಮಾಡುವುದು ಕಡ್ಡಾಯವಾಗಿದೆ. ಒಂದು ವೇಳೆ ಸೀಟ್ ಬೆಲ್ಟ್ ಧರಿಸದೇ ಪ್ರಯಾಣಿಸುವ ವಾಹನಗಳ ಚಾಲಕರನ್ನು ಸಿಸಿ ಕ್ಯಾಮೆರಾದ ಮೂಲಕ ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಎಕ್ಸ್ ಪ್ರೆಸ್ ವೇ ನಲ್ಲಿ ನಾಲ್ಕು ಹೆದ್ದಾರಿ ಗಸ್ತು ವಾಹನಗಳನ್ನು ನಿಯೋಜಿಸಲಾಗಿದೆ. ಎರಡು ವಿಭಾಗಗಳಲ್ಲಿ ತಲಾ ಎರಡು ಗಸ್ತು ವಾಹನಗಳು ಕಾರ್ಯ ನಿರ್ವಹಿಸುತ್ತಿವೆ. ಹೆಚ್ಚಿನ ನಿಗಾ ವಹಿಸಲು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಹೆದ್ದಾರಿಯಲ್ಲಿ ದ್ವಿಚಕ್ರ, ತ್ರಿಚಕ್ರ ಹಾಗೂ ಟ್ರ್ಯಾಕ್ಟರ್ ಸೇರಿ ಮೋಟಾರ್ ವಾಹನಗಳ ಸಂಚಾರವನ್ನು ನಿಷೇಧಿಸುವ ಮೂಲಕ ಹೆಚ್ಚುವರಿಯಾಗಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದರಿಂದ ಕ್ರಮೇಣ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳಿದರು.ಎಕ್ಸ್ ಪ್ರೆಸ್ ವೇ ನಲ್ಲಿ ರಸ್ತೆ ಸುರಕ್ಷತೆಗಾಗಿ ಸರ್ವಿಸ್ ರಸ್ತೆಗೆ ಹೊಂದಿಕೊಂಡಂತೆ ಉಕ್ಕಿನ ತಂತಿ ಬೇಲಿಗಳನ್ನು ಅಳವಡಿಸಲಾಗಿದೆ. ಸರ್ವಿಸ್ ರಸ್ತೆ ಎರಡು ಬದಿಗಳಲ್ಲಿ ಕೆಲವರು ಉಕ್ಕಿನ ಬೇಲಿಗಳನ್ನು ಕತ್ತರಿಸಿ ಹಗಲು-ರಾತ್ರಿ ವ್ಯಾಪಾರ ನಡೆಸುತ್ತಿರುವುದರಿಂದ ಅಪಘಾತಗಳ ಜೊತೆಗೆ ದರೋಡೆ ಮತ್ತಿತರ ಚಟುವಟಿಕೆಗಳು ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಚಟುವಟಿಕೆಗಳನ್ನು ನಿಯಂತ್ರಿಸಲು ಸಂಬಂಧಪಟ್ಟ ಸಂಚಾರಿ ಪೊಲೀಸ್ ಠಾಣೆ ಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.
ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಮಂಡ್ಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ತಿಮ್ಮಯ್ಯ, ಗಂಗಾಧರ ಸ್ವಾಮಿ, ಮದ್ದೂರು ವೃತ್ತ ನಿರೀಕ್ಷಕ ಕೆ.ಆರ್.ಪ್ರಸಾದ್, ಸಂಚಾರಿ ಠಾಣೆ ಪಿಎಸ್ಐ ಜೆ.ಇ. ಮಹೇಶ್ ಇದ್ದರು.