ಸಾರಾಂಶ
- ದ್ವಿಚಕ್ರ, ಬಹುಚಕ್ರ ವಾಹನಗಳ ತಪಾಸಣೆ ನಡೆಸಿ ದಂಡ । ರಸ್ತೆ ನಿಯಮ ಕಡ್ಡಾಯ ಪಾಲನೆಗೆ ಎಸ್‌ಪಿ ಎಚ್ಚರಿಕೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಸಂಚಾರ ನಿಯಮ ಉಲ್ಲಂಘಿಸುವ ದ್ವಿಚಕ್ರ ವಾಹನ, ಆಟೋ, ಕಾರು ಸೇರಿದಂತೆ ವಿವಿಧ ಬಹುಚಕ್ರ ವಾಹನಗಳ ವಿರುದ್ಧ ನಗರದ ಸಂಚಾರ ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡರು.ನಗರದ ಉತ್ತರ, ದಕ್ಷಿಣ ಸಂಚಾರ ಪೊಲೀಸ್ ಅಧಿಕಾರಿ, ಸಿಬ್ಬಂದಿ ನೇತೃತ್ವದಲ್ಲಿ ಸಂಚಾರ ನಿಯಮಗಳು, ಅವುಗಳ ಪಾಲನೆ ಬಗ್ಗೆ ಅರಿವು ಮೂಡಿಸಿದರು. ಕರ್ಕಶ ಧ್ವನಿ ಹೊಮ್ಮಿಸುವ ಸೈಲೆನ್ಸರ್, ಹಾನ್‌ಗಳ ವಿರುದ್ಧವೂ ವಿಶೇಷ ಕಾರ್ಯಾಚರಣೆ ಕೈಗೊಂಡು, ಸ್ಥಳದಲ್ಲೇ ಚಾಲಕರು, ಸವಾರರಿಗೆ ದಂಡ ವಿಧಿಸಲಾಯಿತು.
ಇನ್ನು ಮುಂದೆ ಇದೇ ರೀತಿ ಜಿಲ್ಲೆಯಲ್ಲಿ ಕಾರ್ಯಾಚರಣೆಯನ್ನು ಕೈಗಳ್ಳಲಾಗುವುದು. ವಾಹನ ಸವಾರರು ಕಡ್ಡಾಯವಾಗಿ ಚಾಲನಾ ಪರವಾನಿಗೆ, ವಾಹನಗಳ ಇನ್ಶೂರೆನ್ಸ್, ವಾಯು ಮಾಲಿನ್ಯ ತಪಾಸಣೆ ಇತರೆ ದಾಖಲೆ ಹೊಂದಿರಬೇಕು. ವಾಹನಗಳಲ್ಲಿ ಕರ್ಕಶ ಧ್ವನಿ ಸೂಸುವ ಸೈಲೆನ್ಸರ್ (Defective Silencers), ಕರ್ಕಶ ಧ್ವನಿ ಹೊರಡಿಸುವ ಹಾರ್ನ್ (Shrill Horns)ಗಳನ್ನು ಹಾಕಬಾರದು. ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ಟ್ರಿಪಲ್ ರೈಡಿಂಗ್, ಏಕಮುಖ ಸಂಚಾರ ಮಾಡಬಾರದು, ವಾಹನ ಸವಾರರು ಸೀಟ್ ಬೆಲ್ಟ್ ಧರಿಸಿರಬೇಕು ಎಂದು ಜಾಗೃತಿ ಮೂಡಿಸಲಾಯಿತು.ಇತ್ತೀಚಿನ ದಿನಗಳಲ್ಲಿ ಹೆಚ್ಚು ಬೆಳಕು ಹೊರಸೂಸುವ ಎಲ್ಇಡಿ (LED) ದೀಪಗಳನ್ನು ವಾಹನಗಳಿಗೆ ಅಳವಡಿಸಲಾಗುತ್ತಿದ್ದು, ಇದರಿಂದ ಎದುರು ಮುಖದಲ್ಲಿ ಸಂಚರಿಸುವ ಇತರೆ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ. ಕೇಂದ್ರ ಮೋಟಾರು ಕಾಯ್ದೆ (CMV)ಯಲ್ಲಿ ನಮೂದಿಸಿದ ಮಾನದಂಡದಂತೆ ವಾಹನ ಸವಾರರು ಹೆಡ್ ಲೈಟ್ ಅಳವಡಿಕೆ ಮಾಡಿಕೊಳ್ಳಬೇಕು. ಈ ಕಾಯ್ದೆ ಉಲ್ಲಂಘಿಸಿದರೆ ಅಂತಹ ವಾಹನಗಳ ಸವಾರರ ವಿರುದ್ಧ ಕಾನೂನು ರೀತ್ಯಾ ಪ್ರಕರಣ ದಾಖಲು ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಎಎಸ್‌ಪಿಗಳಾದ ವಿಜಯಕುಮಾರ ಎಂ. ಸಂತೋಷ, ಜಿ.ಮಂಜುನಾಥ, ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ಮಾರ್ಗದರ್ಶನದಲ್ಲಿ ಸಂಚಾರ ಪೊಲೀಸ್ ವೃತ್ತ ನಿರೀಕ್ಷಕ ಮಂಜನಾಥ ನಲವಾಗಲು ನೇತೃತ್ವದಲ್ಲಿ ದಕ್ಷಿಣ ಸಂಚಾರ ಹಾಗೂ ಉತ್ತರ ಸಂಚಾರ ಪೊಲೀಸ್ ಅಧಿಕಾರಿ ಸಿಬ್ಬಂದಿ ತಂಡಗಳು ನಗರದ ವಿವಿಧ ಭಾಗಗಳಲ್ಲಿ ಸಂಚಾರ ನಿಯಮಗಳ ಪಾಲನೆ ಬಗ್ಗೆ ಅರಿವು ಮೂಡಿಸಿದವು.- - -
ಬಾಕ್ಸ್ ವಿವಿಧ ಪ್ರಕರಣಗಳಡಿ ದಂಡ ಸಂಗ್ರಹ ಕರ್ಕಶ ಧ್ವನಿ ಸೂಸುವ ಹಾರ್ನ್‌ಗಳ ಒಟ್ಟು 25 ಪ್ರಕರಣಗಳಲ್ಲಿ ₹12,500 ಸಾವಿರ ದಂಡ, ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರ 105 ಪ್ರಕರಣಗಳಲ್ಲಿ ₹53,000 ದಂಡ, ದ್ವಿಚಕ್ರ ವಾಹನದಲ್ಲಿ ಟ್ರಿಪಲ್ ರೈಡಿಂಗ್‌ನ 20 ಕೇಸ್‌ಗಳಲ್ಲಿ ₹10 ಸಾವಿರ ದಂಡ, ರ್ಯಾಕ್ ಲೆಸ್ ಡ್ರೈವಿಂಗ್‌ನ 2 ಪ್ರಕರಣದಲ್ಲಿ ₹3 ಸಾವಿರ, ಸೀಟ್ ಬೆಲ್ಟ್ ಧರಿಸದ 12 ಪ್ರಕರಣದಲ್ಲಿ ₹6 ಸಾವಿರ, ಬೈಕ್ ಮತ್ತು ಆಟೋ ರಿಕ್ಷಾಗಳಲ್ಲಿ ಹೆಚ್ಚುವರಿ ಪ್ರಯಾಣಿಕರನ್ನು ಸಾಗಿಸುವ 35 ಪ್ರಕರಣದಲ್ಲಿ ₹7 ಸಾವಿರ ಸೇರಿದಂತೆ ಇತರೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿ, ದಂಡ ವಿಧಿಸಲಾಯಿತು.- - - ಕೋಟ್ ವಾಹನ ಚಾಲನೆ ಮಾಡುವ ಎಲ್ಲರೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಒಂದು ವೇಳೆ ಸಂಚಾರ ನಿಯಮ ಪಾಲಿಸದಿದ್ದರೆ ಅಂತಹ ಚಾಲಕರ ಮೇಲೆ ಅಗತ್ಯ ಕಾನೂನು ಕ್ರಮ ಜರುಗಿಸಲಾಗುವುದು
- ಉಮಾ ಪ್ರಶಾಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ- - -
-21ಕೆಡಿವಿಜಿ14, 15, 16, 17:
ದಾವಣಗೆರೆಯಲ್ಲಿ ಸಂಚಾರ ಪೊಲೀಸ್ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿ ವಿವಿಧೆಡೆ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಾರ್ಯಾಚರಣೆ ನಡೆಸಿ, ತಪ್ಪಿತಸ್ಥಿರಿಗೆ ದಂಡ ವಿಧಿಸಿ, ನಿಯಮ ಪಾಲಿಸಲು ಎಚ್ಚರಿಕೆ ನೀಡಿದರು.