ಬಾಂಗ್ಲಾ ಹಿಂದೂಗಳ ಮೇಲಿನ ಹಿಂಸಾಚಾರ ಖಂಡನೀಯ

| Published : Dec 05 2024, 12:31 AM IST

ಸಾರಾಂಶ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ, ಅತ್ಯಾಚಾರ ಹಾಗೂ ಹಿಂದೂ ದೇವಾಲಯಗಳ ವಿಗ್ರಹಗಳ ಧ್ವಂಸ ಕೃತ್ಯಗಳನ್ನು ಖಂಡಿಸಿ ನಗರದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯಿಂದ ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ತಿಪಟೂರು

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ, ಅತ್ಯಾಚಾರ ಹಾಗೂ ಹಿಂದೂ ದೇವಾಲಯಗಳ ವಿಗ್ರಹಗಳ ಧ್ವಂಸ ಕೃತ್ಯಗಳನ್ನು ಖಂಡಿಸಿ ನಗರದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯಿಂದ ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಕುಪ್ಪೂರು-ತಮ್ಮಡಿಹಳ್ಳಿ ಮಠದ ಶ್ರೀ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿರುವುದು ಅಮಾನವೀಯ ಘಟನೆ. ಇಂತಹ ಕೃತ್ಯಗಳನ್ನು ತಕ್ಷಣ ತಡೆದು ಹಿಂದೂಗಳು ನೆಮ್ಮದಿಯಿಂದ ಬದುಕಲು ಅವಕಾಶ ನೀಡಬೇಕು ಎಂದರು. ಗುರುಕುಲಾನಂದಾಶ್ರಮದ ಶ್ರೀ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಸಕಲ ಜೀವಿಗಳಿಗೆ ಲೇಸನ್ನು ಬಯಸುವುದೇ ಎಲ್ಲಾ ಧರ್ಮಗಳ ಆಶಯವಾಗಿದೆ. ವಿಶ್ವದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವ ಹಿಂದೂ ಸಮಾಜದ ಮೇಲೆ ದುಷ್ಟಶಕ್ತಿಗಳು ದೌರ್ಜನ್ಯ ಮಾಡುತ್ತಿದ್ದಾರೆ ಎಂದರು. ಭಾಷಣಕಾರ ಉಮೇಶ್ ಮಾತನಾಡಿ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನಾಗರೀಕ ಸಮಾಜವೇ ತಲೆತಗ್ಗಿಸುವಂತಾಗಿದೆ. ಕೂಡಲೇ ಅಲ್ಲಿನ ದುಷ್ಕೃತ್ಯಗಳನ್ನು ತಡೆಯಬೇಕು. ಜಿಹಾದಿಗಳು ಹಿಂದೂ ಸಮಾಜವನ್ನು ನಾಶ ಮಾಡಲು ಮುಂದಾಗಿದ್ದು ನಮ್ಮ ಹಿಂದೂಗಳು ಬೀದಿಗಿಳಿದು ಹೋರಾಟ ಮಾಡಬೇಕು ಎಂದರು.

ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಗಂಗರಾಜು, ಬಿಸ್ಲೇಹಳ್ಳಿ ಜಗದೀಶ್, ರಾಮಮೋಹನ್, ಶಶಿಕಿರಣ್, ಹಾವೇನಹಳ್ಳಿ ನಾಗೇಶ್, ರಂಗಾಪುರ ನಾಗೇಶ್, ಮಡೇನೂರು ವಿನಯ್, ಉಮೇಶ್, ಗುಲಾಬಿ ಸುರೇಶ್, ಬಳ್ಳೆಕಟ್ಟೆ ಸುರೇಶ್ ಇದ್ದರು.