ಸಾರಾಂಶ
ಮಹಿಳಾ ದಿನ ಕಾರ್ಯಕ್ರಮ । ಭಾಷಣ ಸ್ಪರ್ಧೆ ವಿಜೇತರಿಗೆ ಬಹುಮಾನ
ಕನ್ನಡಪ್ರಭ ವಾರ್ತೆ ಹಿರಿಯೂರುಇತಿಹಾಸದ ಶೋಷಿತ ಹೆಜ್ಜೆ ಗುರುತುಗಳನ್ನು ಅಳಿಸಿ ಹಾಕಿ ಇಂದಿನ ಮಹಿಳೆ ಲಿಂಗ ಸಮಾನತೆ ಸಾಧಿಸಿ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿ ಸ್ಥಾನಕ್ಕೆ ಬರುತ್ತಿದ್ದರು ಸಹ ಅವಳ ಮೇಲಿನ ದೌರ್ಜನ್ಯ, ಶೋಷಣೆ ಸಂಪೂರ್ಣ ಕೊನೆಯಾಗಿಲ್ಲ ಎಂದು ಸಮಾಜ ಸೇವಕಿ, ಸತ್ವ ಮಹಿಳಾ ಸಂಸ್ಥೆ ಅಧ್ಯಕ್ಷೆ ಶಶಿಕಲಾ ರವಿಶಂಕರ್ ಅಭಿಪ್ರಾಯಪಟ್ಟರು.ನಗರದ ವಾಣಿ ಸಕ್ಕರೆ ಪ್ರಥಮ ದರ್ಜೆ ಕಾಲೇಜು ಹಾಗೂ ಸತ್ವ ಮಹಿಳಾ ಸಂಸ್ಥೆಯ ಆಶ್ರಯದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆ ರಾಷ್ಟ್ರದ ಸಧೃಢತೆಗೆ ಭದ್ರ ಬುನಾದಿ ಎನ್ನುವುದನ್ನು ನಿರೂಪಿಸಬೇಕಿದೆ. ಈ ವರ್ಷದ ಧ್ಯೇಯ ಮಹಿಳೆಯ ಅಭಿವೃದ್ಧಿ ಪ್ರಕ್ರಿಯೆಯ ವೇಗೋತ್ಕರ್ಷವಾಗಿದೆ. ಅವಳ ಸಾಧನೆಯ ದಾರಿಯ ತೊಡರುಗಳನ್ನು ನಿವಾರಿಸುವುದು ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ. ಈ ನಿಟ್ಟಿನಲ್ಲಿ ಹೆಣ್ಣುಮಕ್ಕಳು ತಮ್ಮ ಸರ್ವತೋಮುಖ ಅಭಿವೃದ್ಧಿಯತ್ತ ಕ್ರಮಿಸಬೇಕಿದೆ. ಹೆಣ್ಣು ಮೊದಲಿಗೆ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ನಂತರ ಆರ್ಥಿಕವಾಗಿ, ಸಾಮಾಜಿಕವಾಗಿ ಸಧೃಢಳಾಗಬೇಕು ಎಂದರು.ಪ್ರಾಂಶುಪಾಲ ಡಾ.ಆರ್.ಮಹೇಶ್ ಮಾತನಾಡಿ, ಮಹಿಳೆಯರು ಅವಕಾಶ ವಂಚಿತರಾಗದೆ ಪ್ರಗತಿಯನ್ನು ಸಾಧಿಸಿ ಸಮಾಜದ ಉನ್ನತಿಗೆ ಶ್ರೇಷ್ಠ ಕೊಡುಗೆ ನೀಡಬೇಕು. ಪುರುಷ ಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಿರುವ ಇಂದಿನ ಮಹಿಳೆಯರು ಇನ್ನಷ್ಟು ಅಭಿವೃದ್ಧಿ ಪಥದತ್ತ ಚಲಿಸಬೇಕಿದೆ ಎಂದು ಹೇಳಿದರು.
ಈ ವೇಳೆ ಮಹಿಳಾ ಕುಂದುಕೊರತೆ ಸೆಲ್‌ನ ಸಂಯೋಜಕಿ ಪ್ರೊ.ಹೇಮಲತಾ, ಸತ್ವ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಸರ್ವಮಂಗಳಾ, ಪ್ರೊ.ವಲಿ, ಶ್ರೀಕರ್, ಪ್ರೊ.ಧರಣೇಂದ್ರಯ್ಯ, ಮೂರ್ತಿ, ಉಪನ್ಯಾಸಕರಾದ ರಾಧಿಕಾ, ಗೌರಿ ಕಿಮತ್ಕರ್, ರಾಜೇಶ್ವರಿ, ಸತ್ವ ಮಹಿಳಾ ಸಂಸ್ಥೆಯ ಉಪಾಧ್ಯಕ್ಷೆ ಯಮುನಾ ಉಮಾಕಾಂತ್, ಖಜಾಂಜಿ ತ್ರಿವೇಣಿ ಸತೀಶ್, ನಿರ್ದೇಶಕರಾದ ಲತಾ ಶಿವಪ್ರಸಾದ್,ಅರುಣಾ ವೀರೇಶ್,ಸವಿತಾ ಮಹೇಶ್,ರಾಜೇಶ್ವರಿ ಸಂಜಯ್,ನಿರ್ಮಲಾ ಮಹಂತೇಶ್ ಮುಂತಾದವರು ಇದ್ದರು.ಲಿಂಗ ಸಮಾನತೆ ರಾಷ್ಟ್ರದ ಸದೃಢತೆಗೆ ಭದ್ರ ಬುನಾದಿ ಎನ್ನುವ ವಿಷಯಕ್ಕೆ ಕಾಲೇಜಿನ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ನಡೆದು ಮೌಲ್ಯಯುತ ಪುಸ್ತಕಗಳ ಬಹುಮಾನ ವಿತರಣೆ ಮಾಡಲಾಯಿತು.