ಮಹಿಳೆಯರ ಮೇಲಿನ ದೌರ್ಜನ್ಯ ಇನ್ನು ನಿಂತಿಲ್ಲ: ಬಿ.ಎಸ್.ಭಾರತಿ

| Published : Mar 30 2025, 03:02 AM IST

ಸಾರಾಂಶ

ಕಾನೂನು, ಕಾಯಿದೆಗಳು ಜಾರಿಯಾಗಿ ಶಿಕ್ಷೆಯಾಗುತ್ತಿದ್ದರೂ ಮಹಿಳೆಯರ ಮೇಲಿನ ದೌರ್ಜನ್ಯಗಳು ಇನ್ನು ನಿಂತಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಬಿ.ಎಸ್.ಭಾರತಿ ವಿಷಾದ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕಾನೂನು, ಕಾಯಿದೆಗಳು ಜಾರಿಯಾಗಿ ಶಿಕ್ಷೆಯಾಗುತ್ತಿದ್ದರೂ ಮಹಿಳೆಯರ ಮೇಲಿನ ದೌರ್ಜನ್ಯಗಳು ಇನ್ನು ನಿಂತಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಬಿ.ಎಸ್.ಭಾರತಿ ವಿಷಾದ ವ್ಯಕ್ತಪಡಿಸಿದರು.

ಜೆಎಸ್‌ಎಸ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಜೆಎಸ್‌ಎಸ್ ಮಹಿಳಾ ಕಾಲೇಜು, ಹಿರಿಯ ವಿದ್ಯಾರ್ಥಿನಿಯರ ಸಂಘ, ದಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರೇಂಜರ್ಸ್ ಘಟಕ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರಿಗೆ ಎಲ್ಲಾ ಸಮಾನ ಅವಕಾಶಗಳನ್ನು ನೀಡಿ, ಹಕ್ಕುಗಳನ್ನು ನೀಡಿದ್ದರೂ ದೌರ್ಜನ್ಯಗಳು ಕಡಿಮೆಯಾಗಿಲ್ಲ. ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಸಂಧಾನ ಮಾಡುವ ಮೂಲಕ ಅವರನ್ನು ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಈ ಕ್ರೂರ ಪ್ರಪಂಚದಲ್ಲಿ ಸಂಕಷ್ಟಗಳನ್ನು ಸಹಿಸಿಕೊಂಡು ಮಹಿಳೆಯರು ಬದುಕು ಸಾಗಿಸುತ್ತಿದ್ದಾರೆ ಎಂದರು.

ಮಹಿಳೆಯರು ಮನೋಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು. ಅವರ ಮೇಲಾಗುವ ದೌರ್ಜನ್ಯಗಳ ವಿರುದ್ಧ ಸೆಟೆದು ನಿಲ್ಲಬೇಕಿದೆ. ಮಹಿಳೆಯರ ಹಕ್ಕು ಅಧಿಕಾರಗಳನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ, ಅದನ್ನು ನೀವೆ ಪಡೆದುಕೊಳ್ಳಬೇಕಿದೆ. ಮಹಿಳೆಯರು ಹೆಚ್ಚಿನ ಶಿಕ್ಷಣ ಪಡೆದುಕೊಂಡರೇ, ದೌರ್ಜನ್ಯಗಳ ವಿರುದ್ಧ ಹೋರಾಟ ಮಾಡಬಹುದಾಗಿದೆ. ತಮಿಳುನಾಡಿನಲ್ಲಿ ಶೇ.೭೦ ರಷ್ಟು ಮಹಿಳಾ ನ್ಯಾಯಾಧೀಶರು ಇದ್ದಾರೆ. ಇದು ನಮ್ಮ ರಾಜ್ಯದಲ್ಲೂ ಸ್ಫೂರ್ತಿಯಾಗಬೇಕು ಎಂದರು.

ದಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರೇಂಜರ್ಸ್ ಘಟಕ ಸಂಚಾಲಕಿ ಡಾ.ಎ.ಆರ್.ಸುಷ್ಮ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರಿಗೆ ಸಂವಿಧಾನದ ಅಡಿಯಲ್ಲಿ ಹಲವಾರು ಹಕ್ಕುಗಳನ್ನು ನೀಡಲಾಗಿದೆ. ವರದಕ್ಷಿಣೆ ನಿಷೇಧ, ಸತಿ ಸಹಗಮನ ಪದ್ಧತಿ ನಿಷೇಧ ಹಾಗೂ ಇನ್ನಿತರೆ ಕಾಯ್ದೆಗಳನ್ನು ರೂಪಿಸಲಾಗಿದೆ. ಅದಾಗ್ಯೂ ಮಹಿಳೆಯರು ಈ ಸಮಾಜದಲ್ಲಿ ಸುರಕ್ಷಿತರಾಗಿದ್ದಾರಾ ಎಂಬುದನ್ನು ಯೋಚನೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಮಹಿಳಾ ದಿನಾಚರಣೆ ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು.

ಕೊಳ್ಳೇಗಾಲ ಮಹದೇಶ್ವರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಎಚ್.ಎಸ್.ಪ್ರೇಮಲತಾ ಮುಖ್ಯ ಭಾಷಣಕಾರರಾಗಿದ್ದರು, ಪ್ರಾಂಶುಪಾಲ ಡಾ.ಎನ್.ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಣ್ಯದಹುಂಡಿ ಪುಟ್ಟೀರಮ್ಮರನ್ನು ಸನ್ಮಾನಿಸಿ, ಗೌರವಿಸಿ ಅವರು ನಡೆದ ಬಂದ ಹಾದಿಯನ್ನು ಮನವರಿಕೆ ಮಾಡಿಕೊಡಲಾಯಿತು,

ಹಿರಿಯ ವಿದ್ಯಾರ್ಥಿನಿಯರ ಸಂಘದ ಅಧ್ಯಕ್ಷೆ ಕೆ.ಎಸ್.ಸುಮ, ರಾಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಎಂ.ಸೌಮ್ಯ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಜಮುನಾ ಹಾಗೂ ಇತರರು ಉಪಸ್ಥಿತರಿದ್ದರು.