ಆಘಾತ ತರುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ

| Published : Sep 28 2024, 01:19 AM IST

ಸಾರಾಂಶ

ಹೆಣ್ಣುಮಕ್ಕಳ ಮೇಲೆ ದಿನನಿತ್ಯ ಅತ್ಯಾಚಾರ, ದೌರ್ಜನ್ಯ, ಸಣ್ಣಪುಟ್ಟ ಕಾರಣಗಳಿಗೂ ಕೊಲೆಯಂತಹ ಘಟನೆಗಳು ನಡೆಯುತ್ತಿರುವುದನ್ನು ನೋಡಿದಾಗ ನಾವು ಸಭ್ಯ, ನಾಗರಿಕ ಸಮಾಜದಲ್ಲಿದ್ದೇವೆಯೇ ಎಂಬ ಪ್ರಶ್ನೆ ಮೂಡುತ್ತಿದೆ.

ಧಾರವಾಡ:

ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್)ಯ ಜಿಲ್ಲಾ ಸಮಿತಿ ವತಿಯಿಂದ ಮಹಿಳೆಯರ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ಸಾಮಾಜಿಕ ದೌರ್ಜನ್ಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಜರುಗಿತು.

ಜಿಲ್ಲಾಧ್ಯಕ್ಷೆ ಮಧುಲತಾ ಗೌಡರ್ ಮಾತನಾಡಿ, ಹೆಣ್ಣುಮಕ್ಕಳ ಮೇಲೆ ದಿನನಿತ್ಯ ಅತ್ಯಾಚಾರ, ದೌರ್ಜನ್ಯ, ಸಣ್ಣಪುಟ್ಟ ಕಾರಣಗಳಿಗೂ ಕೊಲೆಯಂತಹ ಘಟನೆಗಳು ನಡೆಯುತ್ತಿರುವುದನ್ನು ನೋಡಿದಾಗ ನಾವು ಸಭ್ಯ, ನಾಗರಿಕ ಸಮಾಜದಲ್ಲಿದ್ದೇವೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಪ್ರೀತಿ ನಿರಾಕರಿಸಿದ್ದಾರೆ ಎನ್ನುವ ಕಾರಣಕ್ಕೆ ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಹಾಗೂ ಅಂಜಲಿಯ ಬರ್ಬರ ಹತ್ಯೆ, ಕೊಲ್ಕತ್ತಾದ ಆರ್.ಜಿ. ಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಯುವ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ, ಬೆಂಗಳೂರಿನಲ್ಲಿ ಮಹಾಲಕ್ಷ್ಮೀ ಎಂಬ ಮಹಿಳೆಯನ್ನು ತುಂಡು ತುಂಡಾಗಿ ಕತ್ತರಿಸಿ ಪ್ರಿಡ್ಜ್ ನಲ್ಲಿಟ್ಟ ಘಟನೆಗಳು ಜನಸಾಮಾನ್ಯರಲ್ಲಿ ಆಘಾತವನ್ನುಂಟು ಮಾಡಿವೆ ಎಂದರು.

ಸಮಾಜದಲ್ಲಿ ಆಳವಾಗಿರುವ ಪುರುಷ ಪ್ರಧಾನ ಮನೋಧೋರಣೆ, ವ್ಯಾಪಕವಾಗಿ ಹರಡುತ್ತಿರುವ ಸಿನಿಮಾ-ಸಾಹಿತ್ಯ-ಅಂತರ್ಜಾಲಗಳಲ್ಲಿನ ಅಶ್ಲೀಲತೆ, ಮದ್ಯ-ಮಾದಕ ವಸ್ತುಗಳ ಹಾವಳಿ, ದುರ್ಬಲ ಕಾನೂನು-ನ್ಯಾಯಾಂಗ ವ್ಯವಸ್ಥೆ ಇಂತಹ ಕ್ರೌರ್ಯ, ದಬ್ಬಾಳಿಕೆಗಳಿಗೆ ಕುಮ್ಮಕ್ಕು ನೀಡುತ್ತಿವೆ. ಇಂತಹ ಕೃತ್ಯಗಳ ವಿರುದ್ಧ ಸಮರ್ಪಕ ಕ್ರಮ ತೆಗೆದುಕೊಳ್ಳಲು ರಾಜಕೀಯ ಇಚ್ಛಾಶಕ್ತಿ ಇಲ್ಲದ, ನಿಷ್ಕ್ರಿಯ ಸರ್ಕಾರಗಳನ್ನು ಬಲಿಷ್ಠ ಹೋರಾಟಗಳ ಮೂಲಕ ಎಚ್ಚರಿಸಬೇಕಿದೆ. ಇಲ್ಲಿ ಪ್ರಜ್ಞಾವಂತ ನಾಗರಿಕರು, ವಿದ್ಯಾರ್ಥಿ-ಯುವಜನರು, ಹೊಸ ನೈತಿಕತೆ, ಹೊಸ ಆದರ್ಶ, ಹೊಸ ಜೀವನ ಮೌಲ್ಯಗಳೊಂದಿಗೆ ಹೊಸ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಒಂದಾಗಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ಯಾರಾಮೆಡಿಕಲ್ ಕಾಲೇಜಿನ ಸಂಯೋಜಕರಾದ ಸಂಧ್ಯಾ ಭಟ್, ಗಂಗೂಬಾಯಿ ಕೊಕರೆ, ದೇವಮ್ಮ ದೇವತ್ಕಲ್ ಇದ್ದರು.