ಸಾರಾಂಶ
ಕಾಪು ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿರುವ ಈ ಮಹಿಳೆಯ ಮಗ ಮಾನಸಿಕ ಅಸ್ವಸ್ಥನಾಗಿದ್ದು, ಕಳೆದ ಅನೇಕ ಸಮಯದಿಂದ ನಿರಂತರ ತಾಯಿ ಮೇಲೆ ಹಲ್ಲೆ ನಡೆಸಿತ್ತಿದ್ದಾನೆ. ಇತ್ತೀಚಿಗೆ ಹಲ್ಲೆ ನಡೆಸಿ ತಾಯಿಯ ಕಾಲನ್ನೇ ಮುರಿದಿದ್ದಾನೆ.
ಕನ್ನಡಪ್ರಭ ವಾರ್ತೆ ಉಡುಪಿ
ಮಗನಿಂದ ನಿರಂತರ ಹಲ್ಲೆಯಿಂದ ನೊಂದು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ದುಃಖಿಸುತ್ತಿದ್ದ ಅಸಹಾಯಕ ಮಹಿಳೆಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ಉಡುಪಿಯ ಸಖಿ ಸೆಂಟರಿಗೆ ದಾಖಲಿಸಿದ್ದಾರೆ.ಕಾಪು ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿರುವ ಈ ಮಹಿಳೆಯ ಮಗ ಮಾನಸಿಕ ಅಸ್ವಸ್ಥನಾಗಿದ್ದು, ಕಳೆದ ಅನೇಕ ಸಮಯದಿಂದ ನಿರಂತರ ತಾಯಿ ಮೇಲೆ ಹಲ್ಲೆ ನಡೆಸಿತ್ತಿದ್ದಾನೆ. ಇತ್ತೀಚಿಗೆ ಹಲ್ಲೆ ನಡೆಸಿ ತಾಯಿಯ ಕಾಲನ್ನೇ ಮುರಿದಿದ್ದಾನೆ.ನಂತರ ಈತನ ಮಾನಸಿಕ ಅಸ್ವಸ್ಥತೆ ಹೆಚ್ಚಿದ ಕಾರಣ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದ್ದು, ಅಲ್ಲಿಂದಲೂ ಆತ ಪರಾರಿಯಾಗಿದ್ದಾನೆ. ಇದರಿಂದ ಆತನನ್ನು ಆಸ್ಪತ್ರೆಯಲ್ಲಿ ನೋಡಿಕೊಳ್ಳುತ್ತಿದ್ದ ತಾಯಿ ಒಂದೆಡೆ ಮಗನನ್ನು ಕಾಣದೇ ಆತಂಕಿತರಾಗಿದ್ದಾರೆ. ಇನ್ನೊಂದೆಡೆ ಮನೆಗೆ ಹಿಂದಕ್ಕೆ ಹೋದರೇ ಮಗ ಮತ್ತೇನಾದರೂ ಮಾಡುತ್ತಾನೋ ಎಂದು ಭಯ ಪಡುತ್ತಿದ್ದಾರೆ.ಗುರುವಾರ ಆಸ್ಪತ್ರೆಯ ಬಳಿ ಕುಳಿತು ತನಗೆ ರಕ್ಷಣೆ ಹಾಗೂ ಆಶ್ರಯ ನೀಡುವಂತೆ ಕಂಡವರಲ್ಲಿ ಗೋಗರೆಯುತ್ತಿದ್ದರು. ಇದರ ಬಗ್ಗೆ ಮಾಹಿತಿ ಪಡೆದ ಸಮಾಜ ಸೇವಕ ವಿಶು ಶೆಟ್ಟಿ ಅವರು ಅವರನ್ನು ಉಡುಪಿಯ ಸಂತ್ರಸ್ಥ ಮಹಿಳೆಯ ಆಶ್ರಯತಾಣ ಸಖಿ ಸೆಂಟರ್‌ಗೆ ದಾಖಲಿಸಿದ್ದಾರೆ.ಈ ಮಹಿಳೆಯ ಆರ್ಥಿಕ ಪರಿಸ್ಥಿತಿ ಕೂಡಾ ಶೋಚನೀಯವಾಗಿದ್ದು, ಸಂಬಂಧ ಪಟ್ಟ ಇಲಾಖೆಗಳು ಆಕೆಗೆ ಜೀವನ ನಡೆಸಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ವಿಶು ಶೆಟ್ಟಿ ಮನವಿ ಮಾಡಿದ್ದಾರೆ.