ಸಾರಾಂಶ
ಹುಬ್ಬಳ್ಳಿ:
ಬಾಂಗ್ಲಾದೇಶದಲ್ಲಿ ಹಿಂಸಾಚಾರ ಮುಂದುವರಿದಿದ್ದು, ತಕ್ಷಣ ಕೇಂದ್ರ ಸರ್ಕಾರ ಅಲ್ಲಿರುವ ಹಿಂದೂಗಳ ರಕ್ಷಣೆಗೆ ಕ್ರಮಕೈಗೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಮೌನವಹಿಸದೇ ಹಿಂದೂಗಳ ರಕ್ಷಣೆಗೆ ಆದ್ಯತೆ ನೀಡಬೇಕು. ಜತೆಗೆ ದೇಶದಲ್ಲಿರುವ ಅಕ್ರಮ ಬಾಂಗ್ಲಾ ನುಸುಳುಕೋರರನ್ನು ಹೊರ ಹಾಕಬೇಕೆಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಂಗ್ಲಾದೇಶದಲ್ಲಿ ಮೀಸಲಾತಿ ಹೋರಾಟ ಹಿಂಸಾಚಾರಕ್ಕೆ ತಿರುಗಿದೆ. ಈ ಘಟನೆಯಲ್ಲಿ ಅಲ್ಲಿ ನೆಲೆಸಿರುವ ಹಿಂದೂಗಳನ್ನು ಗುರಿಯಾಗಿಸಿಕೊಂಡು ಹಿಂಸಿಸುವ ಕೃತ್ಯ ನಡೆಯುತ್ತಿದೆ. ಈಗಾಗಲೇ ಅಲ್ಲಿರುವ ಇಸ್ಕಾನ್ ಸೇರಿದಂತೆ ಪ್ರಮುಖ ಹಿಂದೂ ದೇವಸ್ಥಾನ, ಅಂಗಡಿ, ಮನೆ ಹಾಗೂ ರವೀಂದ್ರನಾಥ ಠಾಗೋರ್ ಅವರ ಪ್ರತಿಮೆ ಧ್ವಂಸ ಮಾಡಿದ್ದಾರೆ. ಹಲವು ಹಿಂದೂ ಮಹಿಳೆಯರ ಅತ್ಯಾಚಾರ ಮಾಡಲಾಗುತ್ತಿದೆ. ಇದಕ್ಕೆಲ್ಲ ಮೂಲ ಇಸ್ಲಾಂ ಪ್ರವೃತ್ತಿಯೇ ಕಾರಣವಾಗಿದ್ದು, ಇದನ್ನು ಕೇಂದ್ರ ಸರ್ಕಾರ ಖಂಡಿಸಬೇಕಿದೆ ಎಂದರು.
ಪ್ರಧಾನಿ ಮೋದಿ ಅವರೇ ನೀವು ಮನಮೋಹನ್ ಸಿಂಗ್ ಅವರಂತೆ ಮೌನಿಬಾಬಾ ಆಗಬೇಡಿ. ಇಸ್ರೇಲ್ ಮಾದರಿಯಲ್ಲಿ ಬಾಂಗ್ಲಾದೇಶದ ಒಳಹೊಕ್ಕು ಹಿಂದೂಗಳ ರಕ್ಷಣೆಗೆ ಕ್ರಮಕೈಗೊಳ್ಳಿ ಎಂದು ಆಗ್ರಹಿಸಿದರು.ಈಗಿನ ಕೇಂದ್ರ ಸರ್ಕಾರವೇ ದೇಶದ ಅಸುರಕ್ಷತೆಗೆ ಕಾರಣವಾಗಿದೆ. ಹಿಂದೂಗಳ ಮೇಲೆ ದೌರ್ಜನ್ಯ ಮಾಡಿದವರ ಮೇಲೆ ಎನ್ ಕೌಂಟರ್ ಆಗಬೇಕು. ಅಂದಾಗ ಮಾತ್ರ ಇಂತಹ ಕ್ರೌರ್ಯ, ಹಿಂಸೆಗಳಿಗೆ ಮುಕ್ತಿ ಸಿಗಲಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಿಂಸಾಚಾರದ ಹಿಂದೆ ಚೀನಾ, ಪಾಕಿಸ್ತಾನ, ಅಮೆರಿಕಾದ ಕೈವಾಡವಿದೆ ಎಂದು ಸಂಶಯ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಅಕ್ರಮ ನುಸುಳುಕೋರರನ್ನು ಪತ್ತೆಹಚ್ಚುವ ಸಲುವಾಗಿಯೇ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ನೇತೃತ್ವದಲ್ಲಿ 5 ಜನರ ಸಮಿತಿ ರಚಿಸಿ ರಾಜ್ಯದಲ್ಲಿ ಎಲ್ಲಲ್ಲಿ ಅಕ್ರಮವಾಗಿ ನುಸುಳುಕೋರರು ನೆಲೆಸಿದ್ದಾರೆ ಎಂಬ ವರದಿ ಸಿದ್ಧಪಡಿಸಿ, ಶೀಘ್ರದಲ್ಲೇ ಸರ್ಕಾರಕ್ಕೆ, ಸಂಬಂಧಿಸಿದ ಸಚಿವರಿಗೆ ಸಮಗ್ರ ವರದಿ ನೀಡಲಾಗುವುದು. ಒಂದು ತಿಂಗಳೊಳಗೆ ಅಕ್ರಮ ವಲಸಿಗರನ್ನು ಮುಖ್ಯಮಂತ್ರಿ, ಗೃಹಸಚಿವರು ರಾಜ್ಯದಿಂದ ಹೊರಹಾಕದೇ ಇದ್ದರೆ, ಶ್ರೀರಾಮಸೇನೆ ಕಾರ್ಯಕರ್ತರೇ ಹೊರಹಾಕುತ್ತಾರೆ ಎಂದರು.ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ, ಆ. 12ರಂದು ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪೊಲೀಸ್ ಆಯುಕ್ತರಿಗೆ ಎಚ್ಚರಿಕೆಯ ಮನವಿ ಸಲ್ಲಿಸಲಾಗುತ್ತದೆ ಎಂದರು.
ಈ ವೇಳೆ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಮಾತನಾಡಿ, ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿದ್ದರೂ ಕೂಡ ದೇಶದ ಗಡಿಯಲ್ಲಿ ಸೂಕ್ತ ಭದ್ರತೆ ನೀಡುವ ಕಾರ್ಯ ಮಾಡುತ್ತಿಲ್ಲ. ಗಡಿಯಲ್ಲಿ ಹೆಚ್ಚಿನ ಭದ್ರತೆ ನೀಡಬೇಕಿದೆ ಎಂದರು.