ನರಸಿಂಹರಾಜಪುರ ತಾಲೂಕು ವ್ಯಾಪ್ತಿಯ ಗಿರಿಜನರಿಗೆ ಕಳೆದ ನಾಲ್ಕುತಿಂಗಳಿನಿಂದ ನಿಲ್ಲಿಸಲಾದ ಪೌಷ್ಠಿಕ ಆಹಾರ ವಿತರಣೆಗೆ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಶೃಂಗೇರಿ ಕ್ಷೇತ್ರ ಮಟ್ಟದ ಮಹರ್ಷಿ ವಾಲ್ಮೀಕಿ ನಾಯಕರ ಸಂಘದ ಅಧ್ಯಕ್ಷ ವಾಲ್ಮೀಕಿ ಶ್ರೀನಿವಾಸ್ ಎಚ್ಚರಿಕೆ ನೀಡಿದರು.
- ಶೃಂಗೇರಿ ಕ್ಷೇತ್ರ ಮಟ್ಟದ ವಾಲ್ಮೀಕಿ ಸಂಘದಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆಕನ್ನಡಪ್ರಭ ವಾರ್ತೆ ನರಸಿಂಹರಾಜಪುರತಾಲೂಕು ವ್ಯಾಪ್ತಿಯ ಗಿರಿಜನರಿಗೆ ಕಳೆದ ನಾಲ್ಕುತಿಂಗಳಿನಿಂದ ನಿಲ್ಲಿಸಲಾದ ಪೌಷ್ಠಿಕ ಆಹಾರ ವಿತರಣೆಗೆ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಶೃಂಗೇರಿ ಕ್ಷೇತ್ರ ಮಟ್ಟದ ಮಹರ್ಷಿ ವಾಲ್ಮೀಕಿ ನಾಯಕರ ಸಂಘದ ಅಧ್ಯಕ್ಷ ವಾಲ್ಮೀಕಿ ಶ್ರೀನಿವಾಸ್ ಎಚ್ಚರಿಕೆ ನೀಡಿದರು.ಸೋಮವಾರ ಮಿನಿವಿಧಾನ ಸೌಧದ ಮುಂಭಾಗದಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶೃಂಗೇರಿ ಕ್ಷೇತ್ರ ಮಟ್ಟದ ಮಹರ್ಷಿ ವಾಲ್ಮೀಕಿ ನಾಯಕರ ಸಂಘದಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ ಸರ್ಕಾರ ನೀಡುತ್ತಿದ್ದ ಪೌಷ್ಠಿಕ ಆಹಾರವನ್ನೇ ನಂಬಿ ಜೀವನ ನಡೆಸುತ್ತಿದ್ದ ಆದಿವಾಸಿ ಬುಡಕಟ್ಟು ಜನಾಂಗದವರಿಗೆ ಸಾಕಷ್ಟು ಸಮಸ್ಯೆ ಯಾಗುತ್ತಿದೆ.ಸಮರ್ಪಕ ಕೂಲಿ ಸಿಗದೆ ಕಾಡಂಚಿನಲ್ಲಿ ವಾಸಮಾಡುತ್ತಿರುವ ಅರಣ್ಯ ವಾಸಿಗಳಿಗೆ ಪ್ರತಿ ತಿಂಗಳು ಪೌಷ್ಠಿಕ ಆಹಾರ ವಿತರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಪೌಷ್ಠಿಕ ಆಹಾರ ವಿತರಣೆಗೆ ಪ್ರತ್ಯೇಕ ಜಿಲ್ಲಾವಾರು ಟೆಂಡರ್ ಕರೆಯಲು ಕ್ರಮ ವಹಿಸ. ಪೌಷ್ಠಿಕ ಆಹಾರ ಪ್ರತಿ ತಿಂಗಳು ಕೊಡುವುದು ತಪ್ಪಿದಲ್ಲಿ ಅಂತಹ ಟೆಂಡರ್ ಪಡೆದವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.ನರಸಿಂಹರಾಜಪುರ ತಾಲೂಕಿನ ಗ್ರಾಪಂನಲ್ಲಿ ಅರಣ್ಯ ಹಕ್ಕು ಸಮಿತಿಯಲ್ಲಿ ಗಿರಿಜನರಿಗೆ ಹೊಸ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿಗಳ ಬಳಿ ಬಾಕಿಯಿರುವ ಅರಣ್ಯ ಹಕ್ಕು ಪತ್ರಗಳ ಅರ್ಜಿಗಳ ಮರು ಪರಿಶೀಲಿಸಬೇಕು. ಹಿಂದೆ ಗಿರಿಜನರಿಗೆ ನೀಡಿದ ಅರಣ್ಯ ಹಕ್ಕು ಪತ್ರಗಳಿಗೆ ರಾಷ್ಟ್ರೀಕೃತ ಬ್ಯಾಂಕಿನಿಂದ ಸಾಲ ಸೌಲಭ್ಯ ನೀಡುತ್ತಿಲ್ಲ. ಹಾಗಾಗಿ ಅರಣ್ಯ ಹಕ್ಕು ಪತ್ರದ ಪಹಣಿಯಲ್ಲಿ ಕಾಲಂ ನಂ11ರಿಂದ 9 ಕ್ಕೆ ಬದಲಾಯಿಸಿ ಕೊಡಬೇಕು ಎಂದು ಒತ್ತಾಯಿಸಿದರು.ತಾಲೂಕಿನ ಅರಣ್ಯ ಹಕ್ಕು ಸಮಿತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಅರ್ಜಿ ಕೊಟ್ಟು ತಿರಸ್ಕೃತಗೊಂಡ ಪ್ರತಿಯೊಬ್ಬ ಗಿರಿಜನ ಅರ್ಜಿದಾರರಿಗೆ 2 ಎಕರೆ ಜಮೀನು ಮಂಜೂರು ಮಾಡಬೇಕು. ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ವ್ಯಾಪ್ತಿಯಲ್ಲಿ ವಾಸವಿರುವ 11ಸಾವಿರ ಗಿರಿಜನರ ಮನೆಗಳಿಗೆ ಸೋಲಾರ್ ದೀಪ, ವಿದ್ಯುತ್ ಸೌಲಭ್ಯ ಕಲ್ಪಿಸಿ, ಬನ್ನೂರು ಗ್ರಾಪಂ ಸರ್ವೆ ನಂ 89,95 ರಲ್ಲಿ ನೂರಾರು ವರ್ಷದಿಂದ ವಾಸವಿರುವ ಆದಿವಾಸಿ ಅಸಲು ಜನಾಂಗದವರಿಗೆ ಹಕ್ಕು ಪತ್ರ ನೀಡಲು ಕ್ರಮಕೈಗೊಳ್ಳಬೇಕೆಂದು . ತಾಲೂಕಿನ ಸಿಂಸೆ ಗ್ರಾಮದ ಸರ್ವೆ ನಂ 20 ರಲ್ಲಿ 9 ದಲಿತ ಕುಟುಂಬಗಳಿಗೆ 1982 ರಲ್ಲಿ ಜಾಗ ಸಮೀಕ್ಷೆ ಮಾಡಿ 2.6 ಎಕರೆ ಜಾಗ ನೀಡಿದ್ದು ಈವರೆಗೂ ಜಾಗ ತೋರಿಸಿಲ್ಲ ಎಂದು ಆರೋಪಿಸಿದರು.ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಡಿ.ರಾಮು ಮಾತನಾಡಿ ದಲಿತರ ಸಮಸ್ಯೆ ಬಗೆಹರಿಸುವಂತೆ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಪರಿಶಿಷ್ಟಜಾತಿ, ಪಂಗಡದವರು 94ಸಿ ಅಡಿ ಅರ್ಜಿ ಸಲ್ಲಿಸಿದರೂ ಹಕ್ಕು ಪತ್ರ ನೀಡಿಲ್ಲ ಎಂದು ದೂರಿದರು. ತಾಲೂಕಿನ ಸೂಸಲವಾನಿ ಗ್ರಾಮದಲ್ಲಿ ವಾಸವಿರುವ 150 ಕ್ಕೂ ಅಧಿಕ ಆದಿ ಕರ್ನಾಟಕ ಕುಟುಂಬಗಳಿಗೆ ರದ್ದುಪಡಿಸಿರುವ ಪರಿಶಿಷ್ಟ ಪಂಗಡದ ಪುಲಿಯನ್ ಜಾತಿ ಪ್ರಮಾಣ ಮತ್ತೆ ಕೊಡುವ ವ್ಯವಸ್ಥೆ ಮಾಡದಿದ್ದಲ್ಲಿ ಹೋರಾಟ ರೂಪಿಸಲಾಗುವುದು ಎಂದರು.ಪ್ರತಿಭಟನೆಯಲ್ಲಿ ತಾಲೂಕು ದಸಂಸ ಕೃಷ್ಣಪ್ಪ ಬಣದ ಅಧ್ಯಕ್ಷ ಪಿಕಪ್ ಚಂದ್ರು, ಸುಶೀಲಮ್ಮ, ಗೋಪಾಲ್, ರಮೇಶ್, ಶೆಟ್ಟಿಕೊಪ್ಪ ಮಂಜುನಾಥ್ ಮತ್ತಿತರರಿದ್ದರು. ಪ್ರತಿಭಟನೆಯ ನಂತರ ತಹಸೀಲ್ದಾರ್ ನೂರುಲ್ ಹುದಾ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.