ವಿಪ ಚುನಾವಣೆ: ರಾಯಚೂರು ಜಿಲ್ಲೆಯಲ್ಲಿ ಶೇ.71.28ರಷ್ಟು ಮತದಾನ

| Published : Jun 04 2024, 12:30 AM IST

ಸಾರಾಂಶ

ರಾಯಚೂರಿನ ಸರ್ಕಾರಿ ಬಾಲಕಿಯದ ಪದವಿ ಪೂರ್ವ ಕಾಲೇಜಿನಲ್ಲಿ ಈಶಾನ್ಯ ಪದವೀಧರರ ಕ್ಷೇತ್ರಕ್ಕೆ ನಡೆದ ಚುನಾವಣೆ ನಿಮಿತ್ತ ಮತದಾನ ನಡೆಸಲು ಮತದಾರರು ಸಾಲಾಗಿ ನಿಂತಿರುವುದು.

ಕನ್ನಡಪ್ರಭ ವಾರ್ತೆ ರಾಯಚೂರು

ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ಮತಗಟ್ಟೆಗಳಲ್ಲಿ ಸೋಮವಾರ ನಡೆದ ಮತದಾನ ಪ್ರಕ್ರಿಯೇ ಬಹುತೇಕ ಶಾಂತಿಯುತವಾಗಿ ಜರುಗಿತು.

ರಾಯಚೂರು ನಗರ ಸೇರಿದಂತೆ ಜಿಲ್ಲೆಯ ಒಟ್ಟು 30 ಮತಗಟ್ಟೆಗಳಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ನೋಂದಾಯಿತ ಪದವೀಧರ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು. ಒಟ್ಟಾರೆ ಜಿಲ್ಲೆಯಾದ್ಯಂತ ಶೇ.71.28ರಷ್ಟು ಮತದಾನ ನಡೆಯಿತು.

ರವಿವಾರ ರಾತ್ರಿ ಮಳೆಯಾಗಿದ್ದರಿಂದ ಬೆಳಗ್ಗೆ 8ರಿಂದ ಮಂದಗತಿಯಲ್ಲಿಯೇ ಆರಂಭ ಪಡೆದ ಮತದಾನವು 10ಗಂಟೆ ಬಳಿಕ ಬಿರಿಸು ಪಡೆದುಕೊಂಡಿತು. ನಗರದ ಕರ್ನಾಟಕ ಸಂಘ, ತಹಸೀಲ್ದಾರ್‌ ಕಚೇರಿ, ಪದವಿ ಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜಿನಲ್ಲಿ ಮತದಾನದ ಕೇಂದ್ರಗಳನ್ನು ಆರಂಭಿಸಲಾಗಿತ್ತು. ನಗರ ಸೇರಿ ರಾಯಚೂರು ಗ್ರಾಮೀಣ, ಮಾನ್ವಿ, ಸಿರವಾರ, ದೇವದುರ್ಗ, ಲಿಂಗಸುಗೂರು, ಮಸ್ಕಿ ಮತ್ತು ಸಿಂಧನೂರು ತಾಲೂಕುಗಳಲ್ಲಿ ಒಟ್ಟು 30 ಮತಗಟ್ಟೆಗಳಲ್ಲಿ ಮತದಾರರು ತಮ್ಮ ಪ್ರಾಶಸ್ತ್ಯ ಮತವನ್ನು ಚಲಾಯಿಸಿದರು.

ಜಿಲ್ಲೆಯಲ್ಲಿ ಒಟ್ಟು 20,317 ಮತದಾರರಿದ್ದು, 13,581 ಪುರುಷ, 6,731 ಮಹಿಳಾ ಹಾಗೂ 5 ಲಿಂಗತ್ವ ಅಲ್ಪಸಂಖ್ಯಾತ ಮತದಾರರ ಪೈಕಿ ಒಟ್ಟು 14,481 ಮತದಾರರು ಹಕ್ಕು ಚಲಾಯಿಸಿದ್ದು ಇದರಲ್ಲಿ 10,134 ಪುರುಷರು,4,346 ಮಹಿಳಾ ಮತದಾರರು ಹಾಗೂ ಒಬ್ಬರು ಲಿಂಗತ್ವ ಅಲ್ಪಸಂಖ್ಯಾತರು ಮತದಾನ ಮಾಡಿದ್ದಾರೆ.

ಮಳೆಯಾಗಿದ್ದರಿಂದ ಪದವೀಧರರು ಆರಂಭದಲ್ಲಿ ಮತದಾನ ಮಾಡಲು ಆಸಕ್ತಿ ತೋರಲಿಲ್ಲ ಬಳಿಕ ಮತಗಟ್ಟೆಗಳ ಮುಂದೆ ಗಂಟೆಗಟ್ಟಲೆ ಸಾಲಾಗಿ ನಿಂತು ಮತಚಲಾಯಿಸಿದರು. ಇದೇ ವೇಳೆ ಸಂಜೆ 4 ನಂತರ ಮತಗಟ್ಟೆ ಆವರಣದೊಳಗೆ ಪ್ರವೇಶಿಸಿದ ಮತದಾರರಿಗೆ ಚೀಟಿಗಳನ್ನು ನೀಡಿ ರಾತ್ರಿವರೆಗೂ ಮತದಾನವನ್ನು ಮಾಡಿಸಲಾಯಿತು. ಶಾಂತಿ-ಸುವ್ಯವಸ್ಥಿತವಾಗಿ ಮತದಾನ ನಡೆಸುವುದಕ್ಕಾಗಿ ಮತಗಟ್ಟೆಗಳ ಸುತ್ತಲು ನಿಷೇಧಾಜ್ಞೆ ಜಾರಿ ಮಾಡುವುದರ ಜೊತೆಗೆ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿತ್ತು. ಮತಗಟ್ಟೆ ಸಮೀಪದಲ್ಲಿ ರಾಜಕೀಯ ಪಕ್ಷದ ಮುಖಂಡರು,ಕಾರ್ಯಕರ್ತರು ಸೇರಿದ್ದರು.

ಮತದಾನ ಕೇಂದ್ರಕ್ಕೆ ಡಿಸಿ, ಎಸ್ಪಿ ಭೇಟಿಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮತಗಟ್ಟೆಗೆ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಭೇಟಿ ನೀಡಿ ಮತದಾನ ಪ್ರಕ್ರಿಯೆ ವಿಕ್ಷಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಸಹಾಯಕ ಆಯುಕ್ತ ಎಸ್.ಎಸ್ ಸಂಪಗಾವಿ, ತಹಸೀಲ್ದಾರ್ ಸುರೇಶ ವರ್ಮಾ ಅವರು ಉಪಸ್ಥಿತರಿದ್ದರು.