ಸಾರಾಂಶ
- ಬ್ರಾಹ್ಮಣರು, ಆರ್ಯ ವೈಶ್ಯರು, ವಿಶ್ವಕರ್ಮ ಸಮಾಜದಿಂದ ತಹಸೀಲ್ದಾರ್, ಶಾಸಕರಿಗೆ ಮನವಿ
-----ಕನ್ನಡಪ್ರಭ ವಾರ್ತೆ ಸುರಪುರ
ನಗರಸಭೆ ವ್ಯಾಪ್ತಿಯ ರಂಗಂಪೇಟ-ರತ್ನಾಳ ರಸ್ತೆಯಲ್ಲಿರುವ ಸ್ಮಶಾನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲು ಉಂಟಾಗುವ ಸಮಸ್ಯೆಯನ್ನು ನಿವಾರಿಸಬೇಕು ಎಂದು ಆಗ್ರಹಿಸಿ ಬ್ರಾಹ್ಮಣರು, ಆರ್ಯ ವೈಶ್ಯರು, ವಿಶ್ವಕರ್ಮ ಸಮಾಜದಿಂದ ತಹಸೀಲ್ದಾರರಿಗೆ ಹಾಗೂ ಶಾಸಕರ ಕಚೇರಿಯಲ್ಲಿ ರಾಜಾ ವೇಣುಗೋಪಾಲ ನಾಯಕ ಅವರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ನಗರಸಭೆ ವ್ಯಾಪ್ತಿಯ ವಾರ್ಡ್ ನ.21 ಹಾಗೂ ವಾರ್ಡ್ ನಂ.22 ರ ನಿವಾಸಿಗಳಾದ ಆರ್ಯವೈಶ್ಯ, ಬ್ರಾಹ್ಮಣ ಹಾಗೂ ವಿಶ್ವಕರ್ಮ ಸಮಾಜದ ಜನರಿಗೆ ರಂಗಂಪೇಟೆಯಿಂದ ರತ್ನಾಳ ಗ್ರಾಮಕ್ಕೆ ಹೋಗುವ ರಸ್ತೆಯ ಎಡಭಾಗದಲ್ಲಿರುವ ಸ್ಮಶಾನ ಭೂಮಿ ಇರುವುದು ಒಂದೇ. ಇದರಲ್ಲೇ ಹಲವು ವರ್ಷಗಳಿಂದ ಅಂತ್ಯಕ್ರಿಯೆ ನಡೆಸುತ್ತಿದ್ದೇವೆ. ಕೆಲವು ದಿನಗಳಿಂದ ಈ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಸಲು ಕೆಲವರು ಅಂತ್ಯಕ್ರಿಯೆ ಮಾಡದಂತೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಓಣಿಯ ಹಿರಿಯರೊಬ್ಬರು ನಿಧನರಾದಾಗ ಅವರ ಅಂತ್ಯಕ್ರಿಯೆ ನಡೆಸಲು ಕೆಲವರು ತೊಂದರೆ ನೀಡಿದ್ದಾರೆ. ಮನೆಯಲ್ಲಿ ಶವವನ್ನು ಇಟ್ಟುಕೊಂಡು ಅಂತ್ಯಕ್ರಿಯೆ ನಡೆಸಲು ದುಃಖತಪ್ತ ಮೃತ ಕುಟುಂಬ ವರ್ಗದವರು ತೊಂದರೆ ಅನುಭವಿಸಿದರು. ಕೊನೆಗೆ ಸ್ಮಶಾನ ಜಾಗಕ್ಕೆ ಪೋಲಿಸ್, ಕಂದಾಯ ಹಾಗೂ ನಗರಸಭೆ ಅಧಿಕಾರಿಗಳು ಬಂದ ನಂತರ ಅಂತ್ಯಕ್ರಿಯೆ ನಡೆಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದೇ ಸ್ಥಳದಲ್ಲಿ ನಗರಸಭೆಯ ಅನುದಾನದಿಂದ ಪಾಥೀವ ಶರೀರ ದಹಿಸಲು ಶೆಡ್ ನಿರ್ಮಿಸಲಾಗಿದೆ. ಈ ಮಾರ್ಗದಲ್ಲೇ ಕಸ ತಂದು ಹಾಕುತ್ತಿದ್ದರೆ. ಸ್ಮಶಾನಕ್ಕೆ ಹೋಗಲು ರಸ್ತೆ ಇಲ್ಲದಂತಾಗಿದೆ. ಅಂತ್ಯಕ್ರಿಯೆ ನಡೆಸಲು ನಮಗೆ ಅನುಕೂಲ ಮಾಡಿಕೊಡಬೇಕು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು. ಅಂತ್ಯಕ್ರಿಯೆ ಕೈಗೊಳ್ಳಲು ಸೂಕ್ತ ಪೋಲಿಸ್ ಬಂದೋಬಸ್ತ್ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಸಮಸ್ಯೆ ಬಗೆಹರಿಸದಿದ್ದರೆ ಮುಂಬರುವ ದಿನಗಳಲ್ಲಿ ಯಾರಾದರೂ ಮೃತಪಟ್ಟ ಸಂದರ್ಭದಲ್ಲಿ ಅಂತ್ಯಕ್ರಿಯೆಗೆ ಯಾರಾದರೂ ಅಡ್ಡಿಪಡಿಸಿದರೆ ಆರ್ಯವೈಶ್ಯ, ಬ್ರಾಹ್ಮಣರು, ವಿಶ್ವಕರ್ಮ ಸಮಾಜದವರು ಶವವನ್ನು ತಂದು ತಹಸೀಲ್ದಾರ್ ಕಚೇರಿ ಅಥವಾ ನಗರಸಭೆ ಕಚೇರಿ ಮುಂದುಗಡೆ ಇಟ್ಟು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಗುರುರಾಜ ಕುಲಕರ್ಣಿ, ಕೊಟ್ರೇಶ ಹಳಿಚಂಡು, ಹೊನ್ನಪ್ಪ ಕುಲಕರ್ಣಿ, ರಾಮಣ್ಣ ಕಡಬೂರು, ಕೃಷ್ಣಯ್ಯ ಕಲಕೊಂಡ, ರಾಮಾಂಜನೇಯ ಪೋಲಂಪಲ್ಲಿ, ತಿಪ್ಪಯ್ಯ ಪೋಲಂಪಲ್ಲಿ, ಲಕ್ಷ್ಮಿಕಾಂತ್ ಶಿರವಾಳ, ಮಾನಪ್ಪ ಪತ್ತಾರ, ವಾಸುದೇವ ಓಬಳಶೆಟ್ಟಿ, ಶರಶ್ಚಂದ್ರ ಜೋಶಿ, ಗೋಪಾಲಯ್ಯ ಗೌಡಗೇರಾ, ರಾಘವೇಂದ್ರ ಭಟ್ ಜಾಗೀರದಾರ, ಧೀರೇಂದ್ರ ಕುಲಕರ್ಣಿ ಇದ್ದರು.
----ಫೋಟೊ: ಸುರಪುರ ನಗರಸಭೆ ವ್ಯಾಪ್ತಿಯ ರಂಗಂಪೇಟ-ರತ್ನಾಳ ರಸ್ತೆಯಲ್ಲಿರುವ ಸ್ಮಶಾನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲು ಆಗುತ್ತಿರುವ ಸಮಸ್ಯೆ ನಿವಾರಿಸಬೇಕೆಂದು ಆಗ್ರಹಿಸಿ ಬ್ರಾಹ್ಮಣರು, ಆರ್ಯ ವೈಶ್ಯರು, ವಿಶ್ವಕರ್ಮ ಸಮಾಜದಿಂದ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರಿಗೆ ಮನವಿ ಸಲ್ಲಿಸಲಾಯಿತು.
2ವೈಡಿಆರ್11: