ವರ್ಷಕ್ಕೊಮ್ಮೆ ಕಿಕ್ಕೇರಮ್ಮ ದೇವಿಗೆ ವಿಪ್ರರಿಂದ ಮಹಾಪೂಜೆ

| Published : Apr 03 2025, 12:33 AM IST

ಸಾರಾಂಶ

ವರ್ಷಕ್ಕೆ ಒಂದು ಬಾರಿ ಮಾತ್ರ ವಿಪ್ರ ಸಮುದಾಯದವರು ಪಟ್ಟಣದ ಕಿಕ್ಕೇರಮ್ಮ ದೇವಿಗೆ ಮಹಾಪೂಜೆ ನೆರವೇರಿಸಿದರು.

ಕಿಕ್ಕೇರಿ: ವರ್ಷಕ್ಕೆ ಒಂದು ಬಾರಿ ಮಾತ್ರ ವಿಪ್ರ ಸಮುದಾಯದವರು ಪಟ್ಟಣದ ಕಿಕ್ಕೇರಮ್ಮ ದೇವಿಗೆ ಮಹಾಪೂಜೆ ನೆರವೇರಿಸಿದರು. ಅಯ್ಯನ ಕೊಪ್ಪಲು ಜೋಯಿಸ್‌ ಕುಟುಂಬದವರ ನೇತೃತ್ವದಲ್ಲಿ ಮಹಾಪೂಜೆಗೆ ವಿಪ್ರ ಭಕ್ತರು ಭಾಗವಹಿಸಿ, ಮಹಾಲಕ್ಷ್ಮೀ ಪಂಚಮಿ ಪೂಜಾ ಸೇವಾ ಸಮಿತಿ ಮುಂದಾಳತ್ವದಲ್ಲಿ ದೇವಿಗೆ ಪಂಚಾಮೃತ ಅಭಿಷೇಕ, ಹೋಮ ಹವನಾದಿಗಳನ್ನು ನೆರವೇರಿಸಿದರು. ಗಂಗಾಜಲಾಭಿಷೇಕ, ಪಂಚಾಮೃತಾಭಿಷೇಕ, ವಿವಿಧ ದ್ರವ್ಯಗಳ ಅಭಿಷೇಕ, ವಿವಿಧ ಪರಿಮಳ ಪುಷ್ಪಗಳಿಂದ ದೇವಿಗೆ ಅಲಂಕರಿಸಿದರು. ಒಡವೆ, ವಸ್ತ್ರಗಳಿಂದ ಶೃಂಗರಿಸಿದರು. ವೇದ ಪಾರಾಯಣ ಮಾಡಿ, ಧೂಪ ದೀಪಾಧಾರತಿ ಬೆಳಗಿದರು.ಸೀರೆ, ಕುಪ್ಪಸ, ಬಳೆ, ಬೆಲ್ಲ, ಅಕ್ಕಿ ಮತ್ತಿತರ ಮಂಗಳದ್ರವ್ಯ ವಸ್ತುಗಳಿಂದ ಮಡಿಲು ತುಂಬಿದರು. ಸುಹಾಸಿನಿ ಪೂಜೆ, ಕುಂಕುಮಾರ್ಚನೆ ಮತ್ತಿತರ ಅರ್ಚನೆಗಳನ್ನು ದೇವಿಗೆ ಅರ್ಪಿಸಿ, ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಮಹಿಳೆಯರು ದೇವಿಯ ಪಾದುಕೆಯನ್ನು ಇಟ್ಟುಕೊಂಡು ಲಲಿತಾ ಸಹಸ್ರನಾಮ ಪಠಣೆ ಮಾಡಿದರು. ನಂತರ ಸುಬ್ರರಾಯಛತ್ರದಲ್ಲಿ ಸಾಮೂಹಿಕ ಭೋಜನ ವ್ಯವಸ್ಥೆ ನಡೆಯಿತು. ಕಿಕ್ಕೇರಮ್ಮ ಪಂಚಮಿ ಸೇವಾ ಸಮಿತಿಯ ಕೆ.ಎನ್.ಗೌರಿಶಂಕರ್, ಕೆ.ಸೋಮಶೇಖರ್, ಸತ್ಯನಾರಾಯಣ, ಕೆ.ಎಸ್. ಅನಂತಸ್ವಾಮಿ, ನಾಗರಾಜ್‌ ಭಾರ್ಗವ್, ಶಾಂತಲಾ ಭಾರ್ಗವ್, ಅಂಬಿಕಾ ಪ್ರಸಾದ್, ಮತ್ತಿತರರು ಭಾಗವಹಿಸಿದ್ದರು.