ಲೋಕ ಸಮರ: ಗಣ್ಯರಿಂದ ಮತದಾನ

| Published : Apr 27 2024, 01:20 AM IST / Updated: Apr 27 2024, 05:51 AM IST

Lokasabhe Election 2024 Voting Live Blog 04

ಸಾರಾಂಶ

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಗಣ್ಯಾತಿ ಗಣ್ಯರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುವ ಮೂಲಕ ತಮ್ಮ ಕರ್ತವ್ಯ ಮೆರೆದರು.

 ಬೆಂಗಳೂರು :  ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಗಣ್ಯಾತಿ ಗಣ್ಯರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುವ ಮೂಲಕ ತಮ್ಮ ಕರ್ತವ್ಯ ಮೆರೆದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಯತೀಂದ್ರ ಅವರು ಮೈಸೂರಿನ ವರುಣಾದ ಬೂತ್ ಸಂಖ್ಯೆ 86ರಲ್ಲಿ, ತುಮಕೂರಿನ ಸಿದ್ದಾರ್ಥ ನಗರದಲ್ಲಿ ಗೃಹ ಸಚಿವ ಪರಮೇಶ್ವರ್‌, ಚಿತ್ರದುರ್ಗದ ಮಠದಹಳ್ಳಿಯಲ್ಲಿ ಕಿಂಚಟಿಗ ಮಹಾ ಸಂಸ್ಥಾನ ಮಠದ ಶಾಂತವೀರ ಸ್ವಾಮೀಜಿ, ಮಾದರ ಪೀಠದ ಮಾದರ ಚನ್ನಯ್ಯ ಸ್ವಾಮೀಜಿ, ಹೊಳೆನರಸೀಪುರದ ಪಡುವಲಹಿಪ್ಪೆ ಮತಗಟ್ಟೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ದಂಪತಿ, ರೇವಣ್ಣ ದಂಪತಿ ಮತ ಚಲಾಯಿಸಿದರು.

ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ. ಕೆ.ಸುಧಾಕರ್‌ ತಮ್ಮ ಹುಟ್ಟೂರು ಚಿಕ್ಕಬಳ್ಳಾಪುರದ ಪೆರೇಸಂದ್ರ ಗ್ರಾಮದ ಮತಗಟ್ಟೆಗೆ ಕುಟುಂಬ ಸಮೇತ ತೆರಳಿ ಮತದಾನ ಮಾಡಿದರು. ಮೈಸೂರಿನ ಶ್ರೀಕಾಂತ ವಿದ್ಯಾಸಂಸ್ಥೆಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ದಂಪತಿ, ರಾಜಮಾತೆ ಪ್ರಮೋದಾ ದೇವಿ ಒಡೆಯರ್‌ ತಮ್ಮ ಹಕ್ಕು ಚಲಾಯಿಸಿದರು.

ಉಡುಪಿಯಲ್ಲಿ ರಕ್ಷಿತ್‌ ಶೆಟ್ಟಿ, ಮಂಡ್ಯದ ದೊಡ್ಡರಸಿನಕೆರೆಯಲ್ಲಿ ಸುಮಲತಾ ಅಂಬರೀಶ್‌, ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಜೆಸಿಪುರದಲ್ಲಿ ಮಾಜಿ ಸಚಿವ ಮಾಧುಸ್ವಾಮಿ, ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯಲ್ಲಿ ನಿರ್ಮಲಾನಂದ ನಾಥ ಸ್ವಾಮೀಜಿ ತಮ್ಮ ಮತ ಹಾಕಿದರು.

ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಆರ್‌ಎಸ್‌ಎಸ್‌ ಸಹ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಗಾಯತ್ರಿ ನಗರದಲ್ಲಿ ನಟಿ ರಾಧಿಕಾ ಪಂಡಿತ್‌, ಜೆ.ಪಿ.ನಗರದಲ್ಲಿ ನಟಿ ಸಪ್ತಮಿ ಗೌಡ, ಕೇತಗಾನಹಳ್ಳಿಯಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಆರ್‌ಎಂಬಿ ಕ್ಲಬ್‌ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ದಂಪತಿ, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮತ ಚಲಾಯಿಸಿದರು. ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ದಂಪತಿ ಜಕ್ಕೂರು ಮಾದರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಮಠದ ರಂಭಾಪುರಿ ಶ್ರೀಗಳು ರಂಭಾಪುರಿ ಮಠದ ಬೂತ್‌ನಲ್ಲಿ, ಮಂಗಳೂರಿನ ಕಾರ್‌ಸ್ಟ್ರೀಟ್‌ ರಥಬೀದಿಯ ಹೆಣ್ಮಕ್ಕಳ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ, ನಳಿನ್‌ ಕುಮಾರ್‌ ಕಟೀಲ್‌, ಉಡುಪಿಯ ನಾರ್ತ್ ಶಾಲೆಯಲ್ಲಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಉಜಿರೆಯ ಎಸ್.ಡಿ.ಎಂ.ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ದಂಪತಿ,

ಹತ್ತಕ್ಕೂ ಹೆಚ್ಚು ಮದುಮಕ್ಕಳಿಂದ ಮತದಾನ!

ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಮತದಾನದ ದಿನವಾದ ಶುಕ್ರವಾರ ಶುಭಮಹೂರ್ತ ಇದ್ದ ಕಾರಣ ಅನೇಕ ಕಡೆ ಮದುವೆ ಸೇರಿ ಹಲವು ಶುಭ ಕಾರ್ಯಗಳೂ ಹೆಚ್ಚಿನ ಸಂಖ್ಯೆಯಲ್ಲಿ ನಡೆದಿದ್ದು, ಈ ವೇಳೆ ಅನೇಕ ಕಡೆ ವಧು-ವರರು ವಿವಾಹದ ಸಂಭ್ರಮ, ಗದ್ದಲದ ನಡುವೆಯೂ ತಮ್ಮ ಹಕ್ಕು ಚಲಾಯಿಸಿ ಇತರರಿಗೆ ಸ್ಫೂರ್ತಿಯಾದರು. ರಾಜ್ಯದಲ್ಲಿ 10ಕ್ಕೂ ಹೆಚ್ಚು ವಧು-ವರರು ಮದುವೆ ದಿರಿಸಿನಲ್ಲೇ ಮತಕೇಂದ್ರಕ್ಕೆ ತೆರಳಿ ಮತ ಚಲಾಯಿಸಿದ್ದು ಎಲ್ಲರ ಗಮನ ಸೆಳೆಯಿತು.

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಖಾಂಡ್ಯ ಹೋಬಳಿಯ ಶಿರಗೋಳದ ಯುವಕ ನಿತೀಶ್‌, ನರಸಿಂಹರಾಜಪುರ ತಾಲೂಕಿನ ಹಂತುವಾನಿ ಸಮೀಪದ ನಾಗರ ಬನ ಹಡ್ಲುವಿನ ಶಿವಕುಮಾರ್, ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮದಲ್ಲಿ ತೀರ್ಥೇಶ್‌, ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯಲ್ಲಿ ಚೇತನ್‌, ಉಡುಪಿಯ ಕುಂದಾಪುರ ಪುರಸಭೆ ವ್ಯಾಪ್ತಿಯ ಹೊಂಚಾರು ಬೆಟ್ಟು ಮತಗಟ್ಟೆಯಲ್ಲಿ ಮಧುಮಗಳು ಹೃತಿಕಾ, ಯಡಬೆಟ್ಟು ಗ್ರಾಮದಲ್ಲಿ ಸ್ಫೂರ್ತಿ ಆಚಾರ್ಯ, ವಡೇರಹೋಬಳಿಯ ಅಶ್ವಿನಿ ಮದುವೆ ದಿರಿಸಿನಲ್ಲೇ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಮಂಜುನಾಥ್.ಕೆ. ಮತ್ತು ಸ್ಮಿತಾ, ಕುಂದಾಪುರ ತಾಲೂಕಿನ ಹಾಲಾಡಿಯಲ್ಲಿ ಮಾಧುರಿ ಮತ್ತು ನಾಗರಾಜ್, ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಗಣೇಶ್ ಮತ್ತು ಕಾವ್ಯ ಜೋಡಿ ಮದುವೆ ಬೆನ್ನಲ್ಲೇ ತಮ್ಮ ಮತದಾನದ ಹಕ್ಕು ಚಲಾಯಿಸಿದರು.

ಮಗನ ಮದುವೆ ಮುಗಿಸಿ ಬಂದು ಮತ ಹಾಕಿದ ಶಾಸಕ ಗೋಪಾಲಯ್ಯ:

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಬಿಜೆಪಿ ಶಾಸಕ ಕೆ.ಗೋಪಾಲಯ್ಯ ತಮ್ಮ ಮಗನ ಮದುವೆ ಮುಗಿಸಿ ಕುಟುಂಬ ಸಮೇತರಾಗಿ ಆಗಮಿಸಿ ಮತ ಹಾಕಿದರು.ಅನಾರೋಗ್ಯದ ನಡುವೆಯೂ ಇನ್ಫಿ ನಾರಾಯಣ ಮೂರ್ತಿ ಮತದಾನಅನಾರೋಗ್ಯದ ಹೊರತಾಗಿಯೂ 77ರ ಇಳೆಯದಲ್ಲಿ ಇನ್ಫೋಸಿಸ್‌ನ ಸಹ ಸಂಸ್ಥಾಪಕ ನಾರಾಯಣಮೂರ್ತಿ ಮತ ಚಲಾಯಿಸಿ ಕರ್ತವ್ಯ ಪ್ರಜ್ಞೆ ಮೆರೆದರು.2024ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಮೊದಲ ಹಂತದ ಚುನಾವಣೆ ನಡೆದಿದ್ದು, ಇನ್ಫೋಸಿಸ್ ಸಹ-ಸಂಸ್ಥಾಪಕರಾದ ಎನ್‌ಆರ್ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾ ಮೂರ್ತಿ ಅವರು ಬೆಂಗಳೂರು ದಕ್ಷಿಣದ ಜಯನಗರ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.ನಾರಾಯಣ ಮೂರ್ತಿ ಅವರು ಅಸ್ವಸ್ಥರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮತದಾನ ಪ್ರಕ್ರಿಯೆ ನಡೆದಿದ್ದರಿಂದ ಡಿಸ್ಚಾರ್ಜ್ ಮಾಡಿಸಿಕೊಂಡುಬಂದಿದ್ದು, ಮತದಾನದ ನಂತರ ಅವರನ್ನು ಮನೆಗೆ ಕರೆದುಕೊಂಡು ಹೋದರು. ಈ ವೇಳೆ ಪತ್ರಕರ್ತರಿಗೆ ಪ್ರತಿಕ್ರಿಯಿಸಿದ ಅವರು, ಪ್ರತಿ ಐದು ವರ್ಷಗಳಿಗೊಮ್ಮೆ ಮತದಾನದ ಹಕ್ಕನ್ನು ನಾವು ಪಡೆಯುತ್ತೇವೆ. ಈ ಹಕ್ಕನ್ನು ನಾವು ಸಾಕಷ್ಟು ಚಿಂತನೆಯೊಂದಿಗೆ ಜವಾಬ್ದಾರಿಯುತವಾಗಿ ಚಲಾಯಿಸಬೇಕು. ಈ ಅವಕಾಶವನ್ನು ಯಾರೂ ಬಿಟ್ಟುಕೊಡಬಾರದು ಎಂದು ತಿಳಿಸಿದರು.

ಆಂಬ್ಯುಲೆನ್ಸ್‌ನಲ್ಲಿ ಬಂದು ಮತದಾನ ಮಾಡಿದರು!

ಕ್ಯಾನ್ಸರ್‌ ಗೆದ್ದ 103 ವರ್ಷದ ಶತಾಯುಷಿ ವೃದ್ಧರೊಬ್ಬರು ಆಂಬ್ಯುಲೆನ್ಸ್‌ನಲ್ಲಿ ಬಂದು ಮತದಾನ ಮಾಡಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಕ್ಯಾನ್ಸರ್‌ನಿಂದ ಬದುಕುಳಿದ ವಿಜಯನಗರ ಜಿಲ್ಲೆಯ ನಂಜುಂಡ ಸ್ವಾಮಿ (103) ಹಳೆ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇಶದ ಪ್ರಜಾಸತ್ತಾತ್ಮಕ ಮನೋಭಾವ ಎತ್ತಿಹಿಡಿಯುವ ದೃಷ್ಠಿಯಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ, ಭಾರತೀಯ ಚುನಾವಣಾ ಆಯೋಗ (ಇಸಿಐ) ಮತ್ತು ನಾಗರಿಕ ಪ್ರಾಧಿಕಾರದ ಸಹಯೋಗದೊಂದಿಗೆ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 25 ರಿಂದ 103 ವರ್ಷದೊಳಗಿನ 41 ರೋಗಿಗಳಿಗೆ ಮತದಾನಕ್ಕೆ ಅನುಕೂಲ ಮಾಡಿಕೊಟ್ಟಿದೆ.ಚಾಮರಾಜನಗರದಲ್ಲಿ ಮತಗಟ್ಟೆಯೇ ಧ್ವಂಸ!

ಲೋಕಸಭಾ ಚುನಾವಣೆ ಮತದಾನ ಬಹಿಷ್ಕರಿಸಿದ್ದ ಗ್ರಾಮಸ್ಥರಿಂದ ಮತಗಟ್ಟೆಯನ್ನೇ ಧ್ವಂಸಗೊಳಿಸಿರುವ ಘಟನೆ ಚಾಮರಾಜನಗರದ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಜರುಗಿದೆ.

ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ಸರಹದ್ದಿನ ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆಯ ಬಾಗಿಲು, ಮೇಜು, ಕಿಟಕಿ, ಕುರ್ಚಿ, ಇವಿಎಂ ಯಂತ್ರ ಪರಿಕರಗಳನ್ನು ಧ್ವಂಸ ಮಾಡಿ, ಮತ ಕೇಂದ್ರದ ಕಾಂಪೌಂಡ್ ಸಹ ವಿರೂಪಗೊಳಿಸಿ ಚುನಾವಣೆಗೆ ಬಳಸಿಕೊಳ್ಳಲಾಗಿದ್ದ ಮೂರು ಸರ್ಕಾರಿ ವಾಹನಗಳನ್ನು ಜಖಂಗೊಳಿಸಿದ್ದಾರೆ. ಅಧಿಕಾರಿಗಳು, ಸಿಬ್ಬಂದಿ, ಗ್ರಾಮಸ್ಥರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮಾದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಗೆ ಬರುವ ತುಳಸಿಕೆರೆಯ ಮತಗಟ್ಟೆ ವ್ಯಾಪ್ತಿಯಲ್ಲಿ 480 ಮತದಾರರು, ಇಂಡಿಗನತ್ತ ಮೆಂದರೆ ಗ್ರಾಮಗಳ ವ್ಯಾಪ್ತಿಯ 528 ಮತದಾರರು, ಪಡಸಲನಾಥ ಪೋಡಿನ 298 ಮತದಾರರು ಮತದಾನದಿಂದ ದೂರವಿದ್ದು, ತಮಗೆ ಗ್ರಾಮಗಳಿಗೆ ಕುಡಿಯುವ ನೀರು, ರಸ್ತೆ ಮತ್ತು ವಿದ್ಯುತ್ ಸೌಲಭ್ಯ ಕಲ್ಪಿಸುವವರೆಗೂ ಮತದಾನ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.ವಿಚಾರ ತಿಳಿಯುತ್ತಿದ್ದಂತೆ ಜಿಲ್ಲಾಡಳಿತ, ಚುನಾವಣಾ ಅಧಿಕಾರಿಗಳು ಮತ್ತು ತಾಲೂಕು ದಂಡಾಧಿಕಾರಿ ಗುರುಪ್ರಸಾದ್ ಮತ್ತು ಮಲೆ ಮಾದೇಶ್ವರ ಬೆಟ್ಟದ ಇನ್ಸ್‌ಪೆಕ್ಟರ್ ಜಗದೀಶ್, ಸಿಬ್ಬಂದಿ ವರ್ಗದವರು ಇಂಡಿಗನತ್ತ ಗ್ರಾಮಕ್ಕೆ ತೆರಳಿ ಮೆದರೆ ಗ್ರಾಮದ ಕೆಲವರನ್ನು ಮತದಾನ ಮಾಡಲು ಮನವೊಲಿಸಿ ಮತಗಟ್ಟೆಗೆ ಕರತಂದಾಗ ವಿಚಾರ ತಿಳಿದ ಗ್ರಾಮಸ್ಥರ ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ಉಂಟಾಗಿದೆ.ಇದನ್ನು ತಿಳಿಗೊಳಿಸಲು ಪೊಲೀಸರಿಂದ ಲಾಟಿ ಪ್ರಹಾರ ನಡೆಸಿದಾಗ ರೊಚ್ಚಿಗೆದ್ದ ಇಂಡಿಗನತ್ತ ಗ್ರಾಮಸ್ಥರಿಂದ ಕಲ್ಲು ತೂರಾಟ ನಡೆಸಿ ಮತಗಟ್ಟೆ ಧ್ವಂಸಗೊಳಿಸಿದ್ದಾರೆ. ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ ಪರಿಣಾಮ ಘಟನೆಯಲ್ಲಿ ತಾಲೂಕು ದಂಡಾಧಿಕಾರಿ ಗುರುಪ್ರಸಾದ್ ಹಣೆಗೆ ತೀವ್ರವಾಗಿ ಪೆಟ್ಟಾಗಿ ಮಲೆ ಮಾದೇಶ್ವರ ಬೆಟ್ಟದ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಪೊಲೀಸ್ ಅಧಿಕಾರಿ, ಮತಗಟ್ಟೆಯ ಸಿಬ್ಬಂದಿ ವರ್ಗದವರು, ಗ್ರಾಮಸ್ಥರು ಸಹ ಘಟನೆಯಲ್ಲಿ ಗಾಯಗೊಂಡಿದ್ದಾರೆ.

ತಾಲೂಕಿನಾದ್ಯಂತ ಉತ್ತಮವಾಗಿ ಮತದಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕಾರ ಮಾಡಿದ್ದ ಗ್ರಾಮದಲ್ಲಿ ಮತಗಟ್ಟೆ ಧ್ವಂಸಗೊಳಿಸಿದ ವಿಷಯ ತಿಳಿದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.60ಕ್ಕೂ ಹೆಚ್ಚು ಕಡೆ ಕೈಕೊಟ್ಟ ಮತಯಂತ್ರಮೊದಲ ಹಂತದ ಮತದಾನದ ವೇಳೆ ರಾಜ್ಯದ 60ಕ್ಕೂ ಹೆಚ್ಚು ಕಡೆ ಮತಯಂತ್ರ ಕೈಕೊಟ್ಟು ಕೆಲಕಾಲ ಮತದಾನ ಪ್ರಕ್ರಿಯೆ ವಿಳಂಬವಾದ ಪ್ರಸಂಗ ನಡೆದಿದೆ. ಹಾಸನ ನಗರದ ಸಂತೆಪೇಟೆ ಸರ್ಕಾರಿ ಪಿಯು ಕಾಲೇಜು ಆವರಣದ ಮತಗಟ್ಟೆ ಸಂಖ್ಯೆ ೧೮೯ರಲ್ಲಿ ಎರಡು ಬಾರಿ ಮತಯಂತ್ರ ಕೈಗೊಟ್ಟು ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಅದೇ ರೀತಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನೇರಳೆಕೆರೆಯಲ್ಲಿ ಮತಯಂತ್ರ ಕೈಕೊಟ್ಟ ಕಾರಣ ರಾತ್ರಿ 7.30ರವರೆಗೆ ಮತದಾನ ನಡೆಯಿತು.ಇನ್ನು ಮಂಡ್ಯ ತಾಲೂಕಿನ ವಡಿಯಾಂಡಳ್ಳಿ ಬೂತ್ ನಂ.144, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸುಧಾನ ಶಾಲೆಯ ಮತಗಟ್ಟೆ, ಬಂಟ್ವಾಳ ತಾಲೂಕಿನ ಕರೋಪಾಡಿ, ಚಿಕ್ಕಮಗಳೂರು ಜಿಲ್ಲೆಯ ಎನ್‌.ಆರ್‌.ಪುರ ತಾಲೂಕಿನ ಮೆಣಸೂರು, ಚಾಮರಾಜನಗರದ ತೆರಕಣಾಂಬಿ ಹುಂಡಿ, ತುಮಕೂರಿನ ತುರುವೇಕೆರೆ ತಾಲೂಕಿನ ತಾಳಕೆರೆ ಗ್ರಾಪಂ ಸೇರಿ ಹಲವೆಡೆ ಮತಯಂತ್ರಗಳು ಕೈಕೊಟ್ಟು ಕೆಲಕಾಲ ಮತದಾನ ವಿಳಂಬವಾಯಿತು.ಇನ್ನು ಉಡುಪಿ, ಮೈಸೂರು, ಕೊಡಗು, ಬೆಂಗಳೂರು ಗ್ರಾಮಾಂತರ, ಕೋಲಾರದ ಹಲವೆಡೆಯೂ ಇದೇ ರೀತಿ ಮತಯಂತ್ರಗಳು ಕೈಕೊಟ್ಟು ಮತದಾನ ಪ್ರಕ್ರಿಯೆ ಸುಮಾರು 10 ನಿಮಿಷದಿಂದ ಒಂದುಗಂಟೆಗಳ ಕಾಲ ವಿಳಂಬವಾದ ಘಟನೆ ನಡೆದಿದೆ.ನಾನು ಮತ ಹಾಕಿದವರು ಗೆದ್ದೇ ಗೆಲ್ಲುತ್ತಾರೆ: ರಕ್ಷಿತ್ ಶೆಟ್ಟಿಕನ್ನಡ ಚಿತ್ರರಂಗದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬೆಂಗಳೂರಿನಿಂದ ಆಗಮಿಸಿ, ಉಡುಪಿಯ ಅಲೆವೂರಿನ ಕುಕ್ಕಿಕಟ್ಟೆ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆತ್ತವರ ಜೊತೆ ತೆರಳಿ ಮತದಾನ ಮಾಡಿದರು.ರಕ್ಷಿತ್ ಮನೆಯ ಮುಂಭಾಗದಲ್ಲೇ ಇರುವ ಈ ಶಾಲೆಗೆ ತಂದೆ ಶ್ರೀಧರ್ ಶೆಟ್ಟಿ, ತಾಯಿ ರಂಜನಾ ಶೆಟ್ಟಿ, ಅಣ್ಣ ರಂಜಿತ್ ಶೆಟ್ಟಿ ಜೊತೆಯಾಗಿ ಆಗಮಿಸಿದರು. ನಂತರ ಪತ್ರಕರ್ತರೊಂದಿಗೆ ಮಾತನಾಡಿದ ರಕ್ಷಿತ್, ದೇಶವನ್ನು ಚೆನ್ನಾಗಿ ನಡೆಸಿಕೊಂಡು ಹೋಗುವ ನಾಯಕ ಅಧಿಕಾರಕ್ಕೆ ಬರಬೇಕು, ಅಂಥವರಿಗೆ ನನ್ನ ಮತ. ನಾನು ಮತ ಹಾಕಿದವರು ಶೇ.100 ಗೆಲ್ಲುತ್ತಾರೆ. ಈ ವಿಚಾರದಲ್ಲಿ ಡೌಟೇ ಇಲ್ಲ, ನಾನು ಯಾರಿಗೆ ಮತ ಹಾಕಿದ್ದೇನೆ ಎಂದು ಮುಂದಿನ ವರ್ಷ ಹೇಳುತ್ತೇನೆ ಎಂದು ನಕ್ಕರು.

ನಾನು ಬೆಂಗಳೂರು ಸೇರಿ 18 ವರ್ಷ ಆಗಿದೆ, ಆದರೆ ಪ್ರತಿ ಬಾರಿ ವೋಟಿಗಾಗಿ ನಾನು ಉಡುಪಿಗೆ ಬರುತ್ತೇನೆ. ವೋಟು ನಮ್ಮ ಹಕ್ಕು ನಮ್ಮ ಜವಾಬ್ದಾರಿ. ಮತ ಹಾಕದವರಿಗೆ ಯಾರನ್ನು ದೂರುವ ಹಕ್ಕಿಲ್ಲ. ಕಡ್ಡಾಯ ಮತದಾನ ಬಹಳ ಒಳ್ಳೆಯ ಯೋಚನೆ. ಆದರೆ ಶೇ.100 ಮತದಾನ, ಕಡ್ಡಾಯ ಮತದಾನ ಜಾರಿಗೆ ಸ್ವಲ್ಪ ಕಷ್ಟ ಇದೆ. ಎಲ್ಲ ಜನರನ್ನು ಮತಗಟ್ಟೆಗೆ ತರುವುದು ಕಷ್ಟದ ಕೆಲಸ, ಮುಂದಿನ ಐದು-ಹತ್ತು ವರ್ಷದಲ್ಲಿ ಅದನ್ನು ಜಾರಿಗೆ ತರಬಹುದು. ಅಂತರ್ಜಾಲದ ಮೂಲಕ ಮತ ಹಾಕುವ ವ್ಯವಸ್ಥೆ ಬಂದರೆ ಇದು ಸಾಧ್ಯವಾಗುತ್ತದೆ ಎಂದವರು ಅಭಿಪ್ರಾಯಪಟ್ಟರು. ಮತದಾನ ಮುಗಿಸಿ ಹೊರಬಂದ ರಕ್ಷಿತ್ ಶೆಟ್ಟಿ ಅವರ ಅಭಿಮಾನಿಗಳು ಸುತ್ತುವರಿದು ಸೆಲ್ಫೀ ಕ್ಲಿಕ್ಕಿಸಿಕೊಂಡರು. ರಕ್ಷಿತ್ ಎಲ್ಲ ಅಭಿಮಾನಿಗಳನ್ನು ಮಾತನಾಡಿಸಿ, ಎಲ್ಲರೊಂದಿಗೆ ಫೋಟೊಗೆ ಫೋಸ್ ಕೊಟ್ಟರು.ಕುದುರೆ ಏರಿ ಬಂದು ಮತ ಹಾಕಿದ ಯುವಕಕಾರ್ಕಳ: ಯುವಕನೊಬ್ಬ ಕುದುರೆ ಏರಿ ಬಂದು ಮತದಾನ ಮಾಡುವುದರ ಮೂಲಕ ಸಾರ್ವಜನಿಕರ ಗಮನ ಸೆಳೆದ ಪ್ರಸಂಗ ಕಾರ್ಕಳದಲ್ಲಿ ನಡೆಯಿತು. ಅಂ.ರಾ. ಕ್ರೀಡಾಪಟು ರೋಹಿತ್ ಕುಮಾರ್ ಕಟೀಲ್ ಅವರ ಜೇಷ್ಠ ಪುತ್ರ ಏಕಲವ್ಯ ಆರ್.ಕಟೀಲ್, ತಾನು ಸಾಕಿದ ಕುದುರೆಯನ್ನು ಏರಿ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಆ‌ ಸಂದರ್ಭ ಬೂತ್‌ನಲ್ಲಿ ಇದ್ದ ಪಕ್ಷದ ಕಾರ್ಯಕರ್ತರು ಅವರ ಜೊತೆ ಪೋಟೋ ಕ್ಲಿಕಿಸಿ ಖುಷಿಪಟ್ಟರು. ಮೈಸೂರಲ್ಲೂ ವ್ಯಕ್ತಿಯೊಬ್ಬರು ಕುದುರೆ ಏರಿ ಬಂದು ಮತ ಹಾಕುವ ಮೂಲಕ ಗಮನ ಸೆಳೆದರು.

6 ಅಭ್ಯರ್ಥಿಗಳ ಮತ ಅವರಿಗೇ ಇಲ್ಲ!

ಲೋಕಸಭಾ ಚುನಾವಣೆಯ ರಾಜ್ಯದ ಮೊದಲ ಹಂತದ 14 ಕ್ಷೇತ್ರಗಳ ಪೈಕಿ ಆರು ಮಂದಿ ಅಭ್ಯರ್ಥಿಗಳು ತಾವು ಸ್ಪರ್ಧಿಸಿದ ಕ್ಷೇತ್ರ ಹೊರತುಪಡಿಸಿ ಬೇರೆ ಕ್ಷೇತ್ರಗಳಲ್ಲಿ ತಮ್ಮ ಮತ ಚಲಾಯಿಸಿದ್ದಾರೆ.ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್‌.ಮಂಜುನಾಥ್‌ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ, ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್‌-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ, ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಜೀವ್‌ ಗೌಡ್‌ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ, ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ, ಬೆಂಗಳೂರು ಕೇಂದ್ರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್‌ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮತ ಚಲಾಯಿಸಿದ್ದಾರೆ.

ಸಾವಿಗೂ ಮುನ್ನ ಸಾರ್ಥಕತೆ ಮೆರೆದ ಮತದಾರರು!ರಾಜ್ಯದ 14 ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆದಿದೆ. ಹಲವು ಜನ ಹಿರಿಯ ನಾಗರಿಕರು ಮತದಾನ ಮಾಡಿ ಸಾವನ್ನಪ್ಪಿದ್ದು, ಸಾವಿನ ಮುನ್ನ ಮತದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.

ಮತದಾನ ಮಾಡಿದ ಕೆಲವೇ ಗಂಟೆಗಳಲ್ಲಿ 95ರ ಕುಂದೂರಯ್ಯ ಎನ್ನುವವರುಮೃತಪಟ್ಟಿರುವ ಘಟನೆ ಮದ್ದೂರು ಪಟ್ಟಣದ ಚನ್ನೇಗೌಡನ ದೊಡ್ಡಿಯಲ್ಲಿ ಶುಕ್ರವಾರ ಜರುಗಿದೆ. ಕೆ.ಆರ್.ಪೇಟೆ ತಾಲೂಕಿನ ಅಗ್ರಹಾರಬಾಚಹಳ್ಳಿಯಲ್ಲಿ ಗ್ರಾಪಂ ಮಾಜಿ ಸದಸ್ಯ ಶತಾಯುಷಿ ಸತ್ತೇಗೌಡ ಉರುಫ್ ದೊಡ್ಡೇಗೌಡ (100) ಮತದಾನ ಮಾಡಿದ ನಂತರ ನಿಧನರಾದರು. ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ಬಳಿಕ ಗ್ರಾಮದ ಚಂಡೆ ವಾದಕ ಮನೋಹರ್ (58) ಹೃದಯಾಘಾತದಿಂದ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಿ. ಶೆಟ್ಟಿಗೇರಿಯಲ್ಲಿ ನಡೆದಿದೆ.

ಹಾಗೆಯೇ, ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಳ್ಳಿ ಗ್ರಾಮದಲ್ಲಿ ಮತದಾನ‌ ಮಾಡಿದ ಬಳಿಕ ಮನೆಗೆ ಬಂದ ವೃದ್ಧೆ ಪುಟ್ಟಮ್ಮ (90) ಮೃತಪಟ್ಟವರು. ಅವರಿಗೆ ಹೃದಯಾಘಾತವಾಗಿದೆ ಎನ್ನಲಾಗಿದೆ. ಮತ ಚಲಾಯಿಸಿ ರಸ್ತೆ ದಾಟುತ್ತಿದ್ದ ಪಾದಚಾರಿಗೆ ಬೈಕ್ ಸವಾರ ಅತೀವೇಗದಿಂದ ಬಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಮತ್ತು ಪಾದಚಾರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ತಾಂಡವಪುರ ಬಳಿ ಜರುಗಿದೆ. ಪಾದಾಚಾರಿ ಬಿ. ಶಿವಣ್ಣ (40) ಹಾಗೂ ಬೈಕ್ ಸವಾರ ಚಾಮರಾಜನಗರದ ಮಿಥುನ್ (19) ಮೃತ ದುರ್ದೈವಿಗಳು.

ತುಮಕೂರು ನಗರದ ಎಸ್‌.ಎಸ್‌.ಪುರಂ ನಲ್ಲಿ ಬಟ್ಟೆ ವ್ಯಾಪಾರಿ ರಮೇಶ್‌ (54) ಎಂಬುವವರು ಬೆಳಗ್ಗೆ ಮತದಾನ ಮಾಡಿ, ಮನೆಗೆ ವಾಪಸ್ಸಾಗುತ್ತಿದ್ದಂತೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.ಇನ್ನೂ ಮತದಾನಕ್ಕೆ ಬರುತ್ತಿದ್ದ ಯುವಕನಿಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮದ್ದೂರು ತಾಲೂಕಿನ ಗೆಜ್ಜಲಗೆರೆಯ ಮನ್ಮುಲ್ ಬಳಿ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಜರುಗಿದೆ.ನಂದೀಶ (28) ಮೃತ ವ್ಯಕ್ತಿ.ಚುನಾವಣಾ ಸಿಬ್ಬಂದಿ ನಿಧನಚಳ್ಳಕೆರೆಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲೋಕಸಭಾ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಹಠಾತಾಗಿ ಕುಸಿದು ಬಿದ್ದು ಮಹಿಳಾ ಅಧಿಕಾರಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಶಾಲಾ ಶಿಕ್ಷಕಿ ಯಶೋಧಮ್ಮ(೫೧) ಮೃತಪಟ್ಟ ಮತಗಟ್ಟೆ ಅಧಿಕಾರಿಯಾಗಿದ್ದಾರೆ.ವಿದೇಶದಿಂದ ಬಂದು ಹಕ್ಕು ಚಲಾಯಿಸಿದ ಕನ್ನಡಿಗರು!

ಊರಲ್ಲೇ ಇದ್ದರೂ ಸುಡುವ ಬಿಸಿಲು ಸೇರಿದಂತೆ ನಾನಾ ಕುಂಟು ನೆಪ ಹೇಳಿಕೊಂಡು ಮತದಾನ ಮಾಡಲು ಉದಾಸೀನ ತೋರುವ ಮಂದಿ ನಡುವೆ ವಿದೇಶದಲ್ಲಿದ್ದರೂ ಸಾವಿರಾರು ರುಪಾಯಿ ಖರ್ಚು ಮಾಡಿಕೊಂಡು ಹುಟ್ಟೂರಿಗೆ ಬಂದು ಹಲವರು ತಮ್ಮ ಹಕ್ಕು ಚಲಾಯಿಸಿದ್ದು ವಿಶೇಷ. ಉದ್ಯೋಗ, ಶಿಕ್ಷಣಕ್ಕೆಂದು ವಿದೇಶಕ್ಕೆ ಹೋಗಿದ್ದ ಮಂದಿ ಹುಟ್ಟೂರಲ್ಲಿ ತಮ್ಮ ಮತಚಲಾಯಿಸಿ ಸಂಭ್ರಮಿಸಿದ್ದಾರೆ.ಲಂಡನ್‌ನಲ್ಲಿ ಐಟಿ ಕನ್ಸಲ್ಟೆಂಟ್ ಆಗಿರುವ ಮಂಡ್ಯದ ಕಾಳೇನಹಳ್ಳಿಯ ಸೋನಿಕಾ, ಏಳು ವರ್ಷಗಳಿಂದ ಅಮೆರಿಕದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಮಂಡ್ಯದ ಕೆ.ಎಸ್.ಪ್ರಕೃತಿ ಮತದಾನಕ್ಕಾಗಿಯೇ ಊರಿಗೆ ಬಂದಿದ್ದು, ಹುಟ್ಟೂರಿನ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.ಇನ್ನು ದುಬೈನಲ್ಲಿ ಕೆಲಸದಲ್ಲಿರುವ ಮಂಗಳೂರಿನ ಜೀವಿತಾ ಹುಟ್ಟೂರು ಉಳಾಯಿ ಬೆಟ್ಟಿನ ಗ್ರಾಪಂ ವ್ಯಾಪ್ತಿಯಲ್ಲಿ ಮತದಾನ ಮಾಡಿದರೆ, ಅಮೆರಿಕದಲ್ಲಿ ಉದ್ಯೋಗದಲ್ಲಿರುವ ಅನುಪಮಾ ಮತದಾನಕ್ಕೆಂದೇ ಕೋಲಾರಕ್ಕೆ ಬಂದು ಮಾಸ್ತಿ ಬಡಾವಣೆಯಲ್ಲಿರುವ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಚಿತ್ರದುರ್ಗದ ನಿವೃತ್ತ ಡಿಡಿಪಿಐ ರೇವಣಸಿದ್ದಪ್ಪ ಅವರ ಪುತ್ರ ಲಿಖಿತಾ ಫಿಲಿಫೈನ್ಸ್‌ನಲ್ಲಿ ಮೆಡಿಕಲ್ ವಿದ್ಯಾಭ್ಯಾಸ ಮಾಡುತ್ತಿದ್ದು, ಮತದಾನಕ್ಕೆಂದೇ ಊರಿಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲೂ ಅವರು ಮತ ಚಲಾಯಿಸಿ ಹೋಗಿದ್ದರು. ಇದೇ ರೀತಿ ರಾಜ್ಯದ ಹಲವೆಡೆ ಅನೇಕರು ಮತದಾನಕ್ಕೆಂದೇ ರಜೆಯನ್ನು ಹೊಂದಾಣಿಕೆ ಮಾಡಿಕೊಂಡು ಹುಟ್ಟೂರಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ್ದಾರೆ.ಎನ್‌ಆರ್‌ಐ ಉದ್ಯಮಿ: ಅನಿವಾಸಿ ಭಾರತೀಯ, ಉದ್ಯಮಿ ಪ್ರವೀಣ್‌ ಶೆಟ್ಟಿ ಅವರು ಕೂಡ ಮತದಾನಕ್ಕೆಂದೇ ಕುಟುಂಬ ಸಮೇತ ದುಬೈನಿಂದ ಆಗಮಿಸಿ ಮತ ಚಲಾಯಿಸಿದ್ದಾರೆ. ಉಡುಪಿಯ ವಕ್ವಾಡಿ ಶಾಲೆಯಲ್ಲಿರುವ ಮತಗಟ್ಟೆಯಲ್ಲಿ ಅವರು ತಮ್ಮ ಹಕ್ಕು ಚಲಾಯಿಸಿದ್ದಾರೆ. ನಾನು ಪ್ರತಿ ಚುನಾವಣೆಯ ವೇಳೆಯೂ ಸ್ವದೇಶಕ್ಕೆ ಆಗಮಿಸಿ ತಪ್ಪದೆ ಮತಚಲಾಯಿಸುತ್ತೇನೆ, ದೇಶದ ಹಿತಕ್ಕಾಗಿ ಎಲ್ಲರೂ ತಮ್ಮ ಹಕ್ಕು ಚಲಾಯಿಸಬೇಕು ಎಂದು ಇದೇ ವೇಳೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.ಕೈ ಮಗ್ಗದ ರೇಷ್ಮೇ ಸೀರೆಯುಟ್ಟು ಮತದಾನ ಜಾಗೃತಿ

ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮೀ ಹಾಗೂ ಆಹಾರ ಇಲಾಖೆ ಉಪ ನಿರ್ದೇಶಕಿ ಸವಿತಾ ಅವರು ನಗರದ ಪಿಡಬ್ಲ್ಯುಡಿ ಸಖಿಸೌರಭ ಮತಗಟ್ಟೆಯಲ್ಲಿ ಕೈ ಮಗ್ಗದಿಂದ ನೇಯ್ದಿರುವ ಚುನಾವಣಾ ಪರ್ವ-ದೇಶದ ಗರ್ವ ಎಂಬ ಘೋಷವಾಕ್ಯವುಳ್ಳ ರೇಷ್ಮೆ ಸೀರೆಯುಟ್ಟು ಗಮನ ಸೆಳೆದರು.