ಸಾರಾಂಶ
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಈ ಬಾರಿ ಆಯೋಜಿಸಲು ಉದ್ದೇಶಿಸಲಾಗಿರುವ 15ನೇ ವರ್ಷದ ಜಿಲ್ಲಾ ಮಟ್ಟದ ಜಮಾಅತ್‌ವಾರು ಹೊನಲು ಬೆಳಕಿನ ಪಂದ್ಯಾವಳಿ ಮುಸ್ಲಿಂ ಕಪ್ ವಾಲಿಬಾಲ್ -2024 ಇದೇ ತಿಂಗಳ 19 ರಿಂದ 21ರ ವರೆಗೆ ವಿರಾಜಪೇಟೆಯ ತಾಲೂಕು ಮೈದಾನದಲ್ಲಿ ಜರುಗಲಿದೆ. ಶುಕ್ರವಾರದಿಂದ ಭಾನುವಾರದವರೆಗೆ ಒಟ್ಟು 3 ದಿನಗಳ ಕಾಲ ನಡೆಯಲಿರುವ ಈ ಪಂದಾವಳಿಯ ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗುತ್ತಿದೆ ಎಂದು ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಪಿ.ಎ. ಹನೀಫ್ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 25 ಲಕ್ಷ ರು. ವೆಚ್ಚದಲ್ಲಿ ಈ ಪಂದ್ಯಾವಳಿಯನ್ನು ವ್ಯವಸ್ಥಿತ ರೀತಿಯಲ್ಲಿ ನಡೆಸಲು ಅಗತ್ಯ ಏರ್ಪಾಡುಗಳನ್ನು ಮಾಡಿಕೊಳ್ಳಲಾಗಿದೆ. ಜಿಲ್ಲೆಯ ವಿವಿಧೆಡೆಯ ದಾನಿಗಳ ಮತ್ತು ಕ್ರೀಡಾಪ್ರೇಮಿಗಳ ಆರ್ಥಿಕ ನೆರವಿನಿಂದ ಈ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ. ಪಂದ್ಯಾವಳಿಗೆ ಸಂಬಂಧಿಸಿದಂತೆ ಕ್ರೀಡಾಪಟುಗಳಿಂದ ಉತ್ತಮ ಸ್ಪಂದನೆ ದೊರೆತಿದ್ದು, ಈ ಪಂದ್ಯಾವಳಿಗಾಗಿ ಈಗಾಗಲೇ 30 ತಂಡಗಳು ತಮ್ಮ ಹೆಸರು ನೋಂದಾಯಿಸಿಕೊಂಡಿದೆ ಎಂದು ಮಾಹಿತಿ ನೀಡಿದ ಹನೀಫ್, ಮೊದಲೇ ನಿರ್ಧರಿಸಿರುವಂತೆ ನೋಂದಾಯಿತ ಜಮಾಅತ್ ತಂಡಗಳಲ್ಲಿ ಆಯಾ ಜಮಾಅತ್ ವ್ಯಾಪ್ತಿಯ ಸದಸ್ಯರನ್ನು ಹೊರತುಪಡಿಸಿದರೆ ಬೇರೆ ಯಾವುದೇ ಆಟಗಾರರಿಗೆ ಪಂದ್ಯಾವಳಿಯಲ್ಲಿ ಆಡಲು ಅವಕಾಶವಿರುವುದಿಲ್ಲ ಎಂದು ಹೇಳಿದರು.
ಪಂದ್ಯಾವಳಿ ನಡೆಯುವ ವಿರಾಜಪೇಟೆಯ ತಾಲೂಕು ಮೈದಾನವನ್ನು ಇದೀಗ ಪೂರ್ಣ ರೂಪದಲ್ಲಿ ಸಜ್ಜುಗೊಳಿಸುವ ಕಾರ್ಯ ನಡೆಯುತ್ತಿದೆ. ಜ. 19ರಂದು ಶುಕ್ರವಾರ ಮಧ್ಯಾಹ್ನದ ನಂತರ 4ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಪಂದ್ಯಾವಳಿಯನ್ನು ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಎಂ.ಎಚ್. ಅಬ್ದುಲ್ ರಹಿಮಾನ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ಡಿ.ಎಚ್. ಸೂಫಿ ಹಾಜಿ, ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಪಿ.ಎಂ. ಹಕೀಂ, ಮಡಿಕೇರಿಯ ವಕೀಲ ಕೆ.ಎಂ. ಕುಂಜಬ್ದುಲ್ಲ ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.ಜ.21 ರಂದು ರಾತ್ರಿ 7 ಗಂಟೆಗೆ ನಡೆಯುವ ಪಂದ್ಯಾವಳಿಯ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭವನ್ನು ವಿರಾಜಪೇಟೆ ಶಾಸಕರು ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು, ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮೈಸೂರಿನ ಆರ್. ಲಕ್ಷ್ಮಣ್ ಸೇರಿದಂತೆ ರಾಜಕೀಯ,ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಹನೀಫ್ ವಿವರಿಸಿದರು. ಉದ್ಘಾಟನಾ ಕಾರ್ಯಕ್ರಮದಂದು ಪಂದ್ಯಾವಳಿಯ ನೋಂದಾಯಿತ ಎಲ್ಲ ತಂಡಗಳ ಆಟಗಾರರು ತಮ್ಮ ಸಮವಸ್ತ್ರ ಸಹಿತವಾಗಿ ಮೈದಾನದಲ್ಲಿ ಹಾಜರಿರಬೇಕು ಎಂದು ಹನೀಫ್ ಕೋರಿದರು. ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ.ಎಂ. ಇಸ್ಮಾಯಿಲ್ ಮಾತನಾಡಿ, 3 ದಿನಗಳ ಕಾಲವೂ ನಾಕ್ ಔಟ್ ಮಾದರಿಯಲ್ಲಿ ಈ ಪಂದ್ಯಾವಳಿ ನಡೆಯಲಿದೆ. ಪಂದ್ಯಾವಳಿ ವೇಳೆ ಯಾವುದೇ ತಾಂತ್ರಿಕ ಲೋಪ ಎದುರಾಗದಂತೆ ಮುಂಜಾಗ್ರತೆ ವಹಿಸಲು ಈಗಾಗಲೇ ಸಂಸ್ಥೆಯ ಅಧೀನದಲ್ಲಿ ತಾಂತ್ರಿಕ ಸಮಿತಿಯೊಂದನ್ನು ರಚಿಸಲಾಗಿದೆ. ಪಂದ್ಯಾವಳಿಯ ಯಶಸ್ವಿಗಾಗಿ ಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳನ್ನು ಒಳಗೊಂಡ ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದ್ದು, ಈ ಸಮಿತಿಗಳು ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದರು.
ಶೀಘ್ರದಲ್ಲೇ ಪಂದ್ಯಾವಳಿಯ ಟೈಸ್ ಕಾರ್ಡನ್ನು ಬಿಡುಗಡೆಗೊಳಿಸಲಾಗುವುದು. ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಪಡೆದ ತೀರ್ಪುಗಾರರು ಈ ಪಂದ್ಯಾವಳಿಯ ತೀರ್ಪುಗಾರಿಕೆಯನ್ನು ನಿರ್ವಹಿಸಲಿದ್ದಾರೆ. ಪಂದ್ಯಾವಳಿಯನ್ನು ವೀಕ್ಷಿಸಲು 5,000 ಜನರ ಸಾಮರ್ಥ್ಯದ ತಾತ್ಕಾಲಿಕ ಗ್ಯಾಲರಿಯನ್ನು ನಿರ್ಮಾಣ ಮಾಡುವ ಕೆಲಸ ಪ್ರಗತಿಯಲ್ಲಿದೆ. ಪಂದ್ಯಾವಳಿಯಲ್ಲಿ ವಿಜೇತರಾಗುವ ಪ್ರಥಮ, ದ್ವಿತೀಯ ಮತ್ತು ತೃತೀಯ ತಂಡಗಳಿಗೆ ಆಕರ್ಷಕ ನಗದು ಬಹುಮಾನದೊಂದಿಗೆ ವಿನೂತನ ಪಾರಿತೋಷಕ ನೀಡಲಾಗುವುದು ಎಂದು ಎಂ. ಎಂ. ಇಸ್ಮಾಯಿಲ್ ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಪದಾಧಿಕಾರಿಗಳಾದ ಕರೀಂ ಕಡಂಗ, ಮೊಹಮ್ಮದ್ ರಾಫಿ, ಕೋಳುಮಂಡ ರಫೀಕ್, ಅಬ್ದುಲ್ ರಹಿಮಾನ್ (ಅಂದಾಯಿ) ಹಾಜರಿದ್ದರು.