ಸಾರಾಂಶ
ವಿರಾಜಪೇಟೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆದು ಅಧ್ಯಕ್ಷರಾಗಿ ದೇಚಮ್ಮ ಕಾಳಪ್ಪ ಮತ್ತು ಉಪಾಧ್ಯಕ್ಷರಾಗಿ ಫಸಿಯಾ ತಬ್ಸುಂ ಆಯ್ಕೆಗೊಂಡರು.
ಕನ್ನಡಪ್ರಭವಾರ್ತೆ ವಿರಾಜಪೇಟೆ
ರಾಜ್ಯ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿರಾಜಪೇಟೆ ಪುರಸಭೆ ವಿಸರ್ಜನೆಗೊಂಡು ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಸೋಮವಾರ ನಡೆದು ಅಧ್ಯಕ್ಷರಾಗಿ ದೇಚಮ್ಮ ಕಾಳಪ್ಪ ಮತ್ತು ಉಪಾಧ್ಯಕ್ಷರಾಗಿ ಫಸಿಯಾ ತಬ್ಸುಂ ಆಯ್ಕೆಗೊಂಡರು.ವಿರಾಜಪೇಟೆ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆ ಚುನಾವಣಾಧಿಕಾರಿ ಮತ್ತು ತಾಲೂಕು ತಹಸೀಲ್ದಾರ್ ರಾಮಚಂದ್ರ ಮತ್ತು ಸಹಾಯಕ ಚುನಾವಣಾಧಿಕಾರಿಗಳಾದ ಚಂದ್ರಕುಮಾರ್ ಉಪಸ್ಥಿತಿಯಲ್ಲಿ ಪುರಭವನ ಸಭಾಂಗಣದಲ್ಲಿ ನಡೆಯಿತು.ಬೆಳಗ್ಗೆ 11 ಗಂಟೆಗೆ ಚುನಾವಣಾ ಪ್ರಕ್ರಿಯೆಗಳು ಆರಂಭವಾಯಿತು. ಬಿಜೆಪಿ ಪರವಾಗಿ ಅಧ್ಯಕ್ಷ ಸ್ಥಾನಕ್ಕೆ ಬೊಪ್ಪಂಡ ಸುನಿತಾ ಜೂನಾ ಉಪಾಧ್ಯಕ್ಷ ಸ್ಥಾನಕ್ಕೆ ಬೋವಿರಿಯಂಡ ಆಶಾ ಸುಬ್ಬಯ್ಯ ಅವರು ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಪಕ್ಷದ ಪರವಾಗಿ ಶಾಸಕ ಎ.ಎಸ್. ಪೊನ್ನಣ್ಣ ಅವರೊಂದಿಗೆ ಅಧ್ಯಕ್ಷ ಸ್ಥಾನಕ್ಕೆ ದೇಚಮ್ಮ ಕಾಳಪ್ಪ ಉಪಾಧ್ಯಕ್ಷ ಸ್ಥಾನಕ್ಕೆ ಫಸಿಯಾ ತಬ್ಸುಂ ಅವರು ನಾಮಪತ್ರ ಸಲ್ಲಿಸಿದರು.
12 ಗಂಟೆಯ ವರೆಗೆ ನಾಮ ಪತ್ರ ಸಲ್ಲಿಸಲು ಸಮಯ ನಿಗದಿಗೊಳಿಸಲಾಗಿತ್ತು. ಬಳಿಕ ನಾಮ ಪತ್ರ ಪರಿಶೀಲನೆ, ನಾಮ ಪತ್ರ ಹಿಂಪಡೆಯುವುದು ಪ್ರಕ್ರಿಯೆಗಳು ನಡೆದವು. ಶಾಸಕರು, ಸಂಸದರು, ಮತ್ತು ವಿಧಾನ ಪರಿಷತ್ ಸದಸ್ಯರು ಸೇರಿದಂತೆ ವಿರಾಜಪೇಟೆ ಪುರಸಭೆಯ 18 ವಾರ್ಡಗಳ ಚುನಾಯಿತ ಪ್ರತಿನಿಧಿಗಳಿಂದ ಒಟ್ಟು 21 ಮತಗಳು ಚುನಾವಣೆಗೆ ಅರ್ಹವಾಗಿತ್ತು. ಮತದಾನದ ವೇಳೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಇರ್ವರು ನಾಮ ನಿರ್ದೇಶಿತ ಸದಸ್ಯರು ಮತ್ತು ಶಾಸಕರು ಸೇರಿದಂತೆ ಒಟ್ಟು 15 ಮತಗಳು ಲಭ್ಯವಾಯಿತು. ಬಿಜೆಪಿ ಅಭ್ಯರ್ಥಿಗಳ ಪರವಾಗಿ ಒಟ್ಟು 06 ಮತಗಳನ್ನು ಪಡೆದುಕೊಂಡರು. ಕಾಂಗ್ರೆಸ್ ಅಭ್ಯರ್ಥಿಗಳು ವಿಜಯಿಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಘೋಷಣೆ ಮಾಡಿದರು. ಎಂಟು ಸದಸ್ಯರನ್ನೊಂದಿದ್ದ ಬಿಜೆಪಿಗೆ ಆರು ಮತಗಳು ಮಾತ್ರ ಲಬಿಸಿದ್ದು ಎರಡು ಸದಸ್ಯರು ಅಡ್ಡ ಮತದಾನ ಮಾಡಿದ್ದಾರೆ ಎಂದು ಬಿರುಸಿನ ಚರ್ಚೆಯಾಯಿತು.15 ವರ್ಷಗಳ ಬಳಿಕ ಕಾಂಗ್ರೆಸ್‌ಗೆ ಚುಕ್ಕಾಣಿ: ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಸುಮಾರು 15 ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷ ಆಡಳಿತ ಚುಕ್ಕಾಣಿ ಹಿಡಿದಿರುವುದು ಸಂತಸ ತಂದಿದೆ ಎಂದರು.
ವಿರಾಜಪೇಟೆ ಪಟ್ಟಣ ಪಂಚಾಯಿತಿಯಿಂದ ಪುರಸಭೆಗೆ ಮೇಲ್ದರ್ಜೆಗೆ ಏರಿಕೆ ಕಂಡಿದೆ. ಚುನಾಯಿತ ಜನ ಪತ್ರಿನಿಧಿಗಳು ವಿರಾಜಪೇಟೆ ನಗರದ ಅಭಿವೃದ್ಧಿಗೆ ಒತ್ತು ನೀಡಿ ತನ್ನ ಕರ್ತವ್ಯ ನಿರ್ವಹಿಸಬೇಕು ಎಂದು ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರಿಗೆ ಕಿವಿ ಮಾತು ಹೇಳಿದರು.ಚುನಾವಣೆಗೆ ವಿರಾಜಪೇಟೆ ಉಪ ವಿಭಾಗ ಡಿ.ವೈಎಸ್ಪಿ ಮೋಹನ್ ಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸು ಬಂದೋಬಸ್ತು ಕಲ್ಪಿಸಲಾಗಿತ್ತು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಧರ್ಮಜಾ ಉತ್ತಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ, ವಿರಾಜಪೇಟೆ ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಸಯ್ಯದ್ ಶಬೀರ್, ಸರ್ಕಾರದ ನಾಮ ನಿರ್ದೇಶಿತ ಸದಸ್ಯರು, ಪಕ್ಷದ ಪ್ರಮುಖರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಣೆ ಮಾಡಿದರು.