ಸಾರಾಂಶ
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪುರುಷರ 50 ವರ್ಷ ಮೇಲ್ಪಟ್ಟ 5+2 ಕಾಲ್ಚೆಂಡು ಪಂದ್ಯಾಟಗಳು ನ. 30 ಮತ್ತು ಡಿ.1ರಂದು ನಗರದಲ್ಲಿ ಆಯೋಜನೆಗೊಳ್ಳಲಿದೆ ಎಂದು ವಿ.ಲೇಜೆಂಡ್ಸ್ ಸಂಸ್ಥೆ ಪ್ರಮುಖರು ತಿಳಿಸಿದ್ದಾರೆ.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯೋಜಕ ಮತ್ತು ಹಿರಿಯ ಕ್ರೀಡಾ ಪಟು ಎಲ್.ಜಿ. ಬಾಸ್ಕರ್, ವಿರಾಜಪೇಟೆ ನಗರದಲ್ಲಿ 70, 80 ರ ದಶಕದಲ್ಲಿ ಹಲವಾರು ಕಾಲ್ಚೆಂಡು ಕ್ರೀಡಾ ಪಟುಗಳು ತಮ್ಮ ಉತ್ತಮ ಪ್ರದರ್ಶನ ತೋರಿದ್ದರು. ಈ ಹಿಂದಿನ ಪಂದ್ಯಾಟದ ಮೂಲಕ ಹಿರಿಯ ಕ್ರೀಡಾಪಟುಗಳ ಸಮಾಗಮಕ್ಕೆ ವೇದಿಕೆ ಸೃಷ್ಟಿಗೊಳಿಸುವ ಸದುದ್ದೇಶದಿಂದ ಈ ಪಂದ್ಯಾಟ ಅಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ನಗರದ ತಾಲೂಕು ಮೈದಾನದಲ್ಲಿ ಎರಡು ದಿನಗಳ ಕಾಲ ಹೊನಲು ಬೆಳಕಿನಲ್ಲಿ ಪಂದ್ಯಾಟಗಳು ನಡೆಯಲಿದೆ. ಪಂದ್ಯಾಟದ ಅಂಗವಾಗಿ ಕಾಲ್ಚೆಂಡು ಪಂದ್ಯಾಟವನ್ನಾಡಿ ಕಣ್ಮರೆಯಾದ ಕ್ರೀಡಾ ಪಟುಗಳ ಗೌರವಾರ್ಥ ಕುಟುಂಬದ ಸದಸ್ಯರಿಗೆ ಗೌರವಿಸಲಾಗುತ್ತದೆ ಎಂದು ಹೇಳಿದರು.
ಹಿರಿಯ ಆಟಗಾರ ಸಿ.ಕೆ. ಪೃಥ್ವಿನಾಥ್ ಮಾತನಾಡಿ ಈಗಾಗಲೇ ಒಟ್ಟು ಆರು ತಂಡಗಳು ನೋಂದಾಯಿಸಿಕೊಂಡಿದ್ದು ಸಂಸ್ಥೆಯ ವತಿಯಿಂದ ಅಂತಿಮ ನಿಗದಿಗೊಳಿಸಿದ ಬಳಿಕ ಎರಡು ತಂಡಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಪಂದ್ಯಾಟದಲ್ಲಿ ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ನಗದು ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ. ಅಲ್ಲದೆ ವೈಯುಕ್ತಿ ಬಹುಮಾನಗಳು ನೀಡಲಾಗುತ್ತದೆ ಎಂದು ವಿವರಿಸಿದರು.ವಿರಾಜಪೇಟೆ ನಗರ ಸೇರಿದಂತೆ ಒಟ್ಟು 6 ಕಿ.ಮೀ. ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಗಳ ಕ್ರೀಡಾಪಟುಗಳಿಗೆ ಸೀಮಿತಗೊಳಿಸಲಾಗಿದೆ. ಆಟಗಾರರನ್ನು ಬಿಡ್ ಮೂಲಕ ತಂಡಗಳಿಗೆ ಆಯ್ಕೆ ಮಾಡಲಾಗುತ್ತಿದೆ. ಪ್ರತಿಯೊಬ್ಬ ಕ್ರೀಡಾಪಟುವಿಗೆ ಸಮಾನಂ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ 9880502631, 9972959156 ಮತ್ತು 9448422383 ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ವಿ. ಲೇಜೇಂಡ್ಸ್ ಆಯೋಜಕರಾದ ಮರ್ವಿನ್ ಲೋಬೊ, ಕೆ.ಎನ್. ಉಪೇಂದ್ರ, ಎಂ.ಪಿ. ಆಲ್ತಾಫ್, ಡಿ.ಜಿ. ಕೇಶವ, ಜಿ.ಜಿ. ಮೋಹನ್ ಕುಮಾರ್, ಜನಾರ್ದನ ಮತ್ತು ಪ್ರಕಾಶ್ ಹಾಜರಿದ್ದರು.