ಜಿಲ್ಲೆಯಲ್ಲಿ ದಶಕಗಳಿಂದಲೂ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಲ್ಲಿ ಒಂದಾದ ಕಾಡಾನೆ ಮಾನವ ಸಂಘರ್ಷಕ್ಕೆ ಜನಜಾಗೃತಿ ಮೂಡಿಸುವ ಸಲುವಾಗಿ ಅರಣ್ಯ ಇಲಾಖೆ ಜನಜಾಗೃತಿ ಪೋಸ್ಟರ್ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ವಿರಾಜಪೇಟೆ: ಜಿಲ್ಲೆಯಲ್ಲಿ ದಶಕಗಳಿಂದಲೂ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಲ್ಲಿ ಒಂದಾದ ಕಾಡಾನೆ ಮಾನವ ಸಂಘರ್ಷಕ್ಕೆ ಜನಜಾಗೃತಿ ಮೂಡಿಸುವ ಸಲುವಾಗಿ ಅರಣ್ಯ ಇಲಾಖೆ ಜನಜಾಗೃತಿ ಪೋಸ್ಟರ್ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.ವಿರಾಜಪೇಟೆ ಉಪ ವಲಯ ಅರಣ್ಯ ಸಂರಕ್ಷಣಾ ಅಧಿಕಾರಿಗಳ ವಿವೇಚನೆಯಿಂದ ಮೂಡಿಬಂದ ಜನಜಾಗೃತಿ ಪೋಸ್ಟರ್ ಮತ್ತು ರಿಪ್ಲೇಕ್ಟರ್ ಅಳವಡಿಸುವ ಕಾರ್ಯಕ್ಕೆ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಗಳಾದ ವಿನೂತ ಎಸ್ ಚೌಹಾನ್ ಅವರು ಅರಣ್ಯ ವಲಯ ಘಟ್ಟಗಳಲ್ಲಿ ಜಾಗೃತಿ ಪೋಸ್ಟರ್ ಅಳವಡಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅರಣ್ಯ ಸಂರಕ್ಷಣಾ ಅಧಿಕಾರಿಗಳು ಜಿಲ್ಲೆಯಲ್ಲಿ ಅವ್ಯಾಹತವಾಗಿ ಕಾಡಾನೆ ಮಾನವ ಸಂಘರ್ಷ ನಡೆಯುತ್ತಾ ಬಂದಿದೆ. ಇಲಾಖೆಯು ಪ್ರಾಯೋಗಿಕವಾಗಿ ವನ್ಯಜೀವಿಗಳ ದಾಳಿಗಳನ್ನು ತಡೆಗಟ್ಟಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಕಾಡಾನೆ ಮಾನವ ಸಂಘರ್ಷ ಕೊನೆಯಾಗಲಿಲ್ಲ. ಸಂಘರ್ಷ ತಡೆಗಟ್ಟಲು ಹಂತ ಹಂತವಾಗಿ ವೈಜ್ಞಾನಿಕ ಪದ್ಧತಿ ಹಾಗೂ ವನ್ಯಜೀವಿಗಳ ದಾಳಿಗೆ ಕಾರಣ ತಿಳಿದುಕೊಳ್ಳಲು ಪ್ರಯತ್ನಸುತ್ತಾ. ಜನಜಾಗೃತಿ ಮೂಡಿಸುವ ಪೋಸ್ಟರ್ ಬಳಕೆಗೆ ಮುಂದಾಗಿದೆ ಎಂದರು.ಜನ ಜಂಗುಳಿ ಇರುವ ಸ್ಥಳಗಳಲ್ಲಿ, ಶಾಲೆ ಕಾಲೇಜು, ಸಾರ್ವಜನಿಕರು ಸೇರುವ ಸ್ಥಳಗಳು, ತಂಗುದಾಣ, ಬಸ್ಸು ನಿಲ್ದಾಣಗಳಲ್ಲಿ ಜಾಗೃತಿ ಪೋಸ್ಟರ್ ಅಳವಡಿಸಲಾಗುತ್ತಿದೆ. ಕಾಡಾನೆಗಳ ಉಪಟಳ ಹಾಗೂ ಕಾಡಾನೆಗಳ ಸಂಚಾರ ಹೆಚ್ಚು ಇರುವ ಸ್ಥಳಗಳಲ್ಲಿ ಇಲಾಖೆ ವತಿಯಿಂದ ಪೋಸ್ಟರ್ ಅಳವಡಿಸಲಾಗುತ್ತಿದೆ. ಕಾಡಾನೆಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಕ್ರಮಗಳ ಬಗ್ಗೆ ವಿವಿಧ ಹಂತದ ಮಾಹಿತಿ ಫಲಕದಲ್ಲಿ ಉಲ್ಲೇಖವಿದೆ. ಕಾಡಾನೆಗಳ ದಾಳಿಯನ್ನು ತಡೆಗಟ್ಟಲು ಮತ್ತು ಪ್ರಾಣ ಹಾನಿಗೆ ಮುಂದಾಗುವ ಮೊದಲು ಕೆಲವು ನಿರ್ದೇಶನಗಳನ್ನು ಪಾಲನೆ ಮಾಡಲು ಸಾರ್ವಜನಿಕರು ಮಾಹಿತಿ ಗ್ರಹಿಸಿ ಗ್ರಾಮಸ್ಥರಿಗೆ ತಿಳಿಹೇಳಬೇಕು ಅಲ್ಲದೆ ಅರಣ್ಯ ಇಲಾಖೆಯೊಂದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ವನ್ಯಜೀವಿ ಪರಿಣಿತರಾದ ರುದ್ರ ಅವರು ಮಾತನಾಡಿ ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳದೊಂದಿಗೆ ಪ್ರಾಣ ಹಾನಿ ಬೆಳೆಹಾನಿ ಸಂಭವಿಸಿದೆ. ವನ್ಯಜೀವಿಗಳ ಚಲನವಲನ, ದಾಳಿಯ ಸನ್ನಿವೇಶ, ದಾಳಿಯ ಮುಂದಿರುವ ಕಾರಣ ಹೀಗೆ ಹಲವಾರು ಆಯಾಮಗಳ ಮೂಲಕ ಅಧ್ಯಯನ ನಡೆಸಬೇಕಾಗುತ್ತದೆ. ಇಂದು ಜನ ಜಾಗೃತಿ ಪೋಸ್ಟರ್ ಅಳವಡಿಸಲು ಇಲಾಖೆ ಮುಂದಾಗಿದೆ ಎಂದು ತಿಳಿಸಿದರು.
ವಲಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶಿವರಾಮ್, ಮನೋಜ್ ಶ್ರೀನಿವಾಸ್ ಪ್ರಶಾಂತ್ ಹಾಗೂ ಅರ್.ಆರ್.ಟಿ. ತಂಡದ ಸಿಬ್ಬಂದಿ, ಅರಣ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.