ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಕನ್ನಡಸಿರಿ ಸ್ನೇಹ ಬಳಗದ ವತಿಯಿಂದ ಸರ್ಕಾರಿ ಎಂಜಿನಿಯರ್ ಕಾಲೇಜಿನಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಮತ್ತು ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಜನ್ಮ ಶತಮಾನೋತ್ಸವ ಅಂಗವಾಗಿ ಹಾರಂಗಿ ಜಲಾಶಯದ ಬಗ್ಗೆ ಸಂವಾದ ನಡೆಸಲಾಯಿತು.ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಐದು ದಶಕಗಳ ಹಿಂದೆ ನಿರ್ಮಾಣವಾದ ಹಾರಂಗಿ ಅಣೆಕಟ್ಟೆಯಿಂದ ಐದು ಸಾವಿರ ಎಕರೆ ಪ್ರದೇಶ ಮುಳುಗಡೆಯಾಗಿದೆ. ಜಮೀನು ಕಳೆದುಕೊಂಡವರಿಗೆ ಸರ್ಕಾರ ಪರಿಹಾರ ನೀಡಿ ಪುನರ್ವಸತಿ ಕಲ್ಪಿಸಿದೆ ಎಂದರು.ಅಣೆಕಟ್ಟುಗಳ ಪ್ರಾಮುಖ್ಯತೆ ತುಂಬಾ ಹೆಚ್ಚಾಗಿದೆ. ಪ್ರವಾಹವನ್ನು ತಡೆಗಟ್ಟಲು, ಜೀವಗಳ ಮತ್ತು ಆಸ್ತಿ ಹಾನಿಗಳಿಗೆ ಕಡಿವಾಣ ಹಾಕಲು ತುಂಬ ಅನುಕೂಲವಾಗಿದೆ ಎಂದರು.
ಎಂಜಿನಿಯರ್ ವಿದ್ಯಾರ್ಥಿಗಳಿಗೆ ಜಲಾಶಯ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕು. ಅಣೆಕಟ್ಟೆಯ ಉಪಯೋಗಗಳ ಬಗ್ಗೆ ತಿಳಿಸಿಕೊಡುವ ಕೆಲಸವನ್ನು ನೀರಾವರಿ ಅಧಿಕಾರಿಗಳು ಮಾಡಿಕೊಡಬೇಕು ಎಂದು ಸಲಹೆ ನೀಡಿದರು.ಸರ್ಕಾರಿ ಎಂಜಿನಿಯರ್ ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್ ಮಾತನಾಡಿ, ಕಾಲೇಜು ಅಭಿವೃದ್ಧಿಗೆ ಶಾಸಕರ ಸಹಕಾರದಿಂದ ರು.2 ಕೋಟಿ ಅನುದಾನ ಮಂಜೂರು ಆಗಿದೆ. ಈ ಅನುದಾನದಲ್ಲಿ ಸಂಸ್ಥೆಯ ಸುತ್ತಲು ಕಾಂಪೌಂಡ್ ಹಾಗೂ ಪ್ರವೇಶ ದ್ವಾರದಲ್ಲಿ ಕಮಾನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
ಕನ್ನಡಸಿರಿ ಬಳಗದ ಸಂಚಾಲಕ ಲೋಕೇಶ್ ಸಾಗರ್ ಮಾತನಾಡಿ, ಹಾರಂಗಿ ಜಲಾಶಯ ನಿರ್ಮಾಣವಾಗಲು ಕಾರಣಕರ್ತರಾದ ಮಾಜಿ ಮುಖ್ಯಂಮತ್ರಿ ವೀರೇಂದ್ರ ಪಾಟೀಲ್ ಅವರನ್ನು ಸ್ಮರಿಸಬೇಕಾಗಿದೆ ಎಂದರು.ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಸಿದ್ದರಾಜು, ಕಿರಣ್, ಇಡಿಸಿಎಲ್ ವಿದ್ಯುತ್ ಉತ್ಪಾದನಾ ಘಟಕದ ವ್ಯವಸ್ಥಾಪಕ ಶಿವ ಸುಬ್ರಮಣ್ಯಂ, ಕೊಡಗು ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕರ ಸಂಘದ ಕಾರ್ಯದರ್ಶಿ ಹಂಡ್ರಂಗಿ ನಾಗರಾಜು ಮತ್ತಿತರರು ಇದ್ದರು.