ವಿರೂಪಾಕ್ಷಪ್ಪ ಹಾವನೂರಗೆ ರಾಜ್ಯೋತ್ಸವದ ಗರಿ

| Published : Oct 31 2024, 12:49 AM IST / Updated: Oct 31 2024, 12:50 AM IST

ಸಾರಾಂಶ

ಇಲ್ಲಿಯ ಹಾವನೂರು ಪ್ರತಿಷ್ಠಾನದ ವಿರೂಪಾಕ್ಷಪ್ಪ ಹಾವನೂರ ಅವರು ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹಾವೇರಿ: ಇಲ್ಲಿಯ ಹಾವನೂರು ಪ್ರತಿಷ್ಠಾನದ ವಿರೂಪಾಕ್ಷಪ್ಪ ಹಾವನೂರ ಅವರು ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಶಸ್ತಿಯ ಸಂಕೀರ್ಣ ವಿಭಾಗದಲ್ಲಿ ಇವರನ್ನು ಆಯ್ಕೆ ಮಾಡಲಾಗಿದೆ. ನಗರದ ದ್ಯಾಮವ್ವದೇವಿಗುಡಿ ಓಣಿಯ ನಿವಾಸಿಯಾಗಿರುವ ವಿರೂಪಾಕ್ಷಪ್ಪ ಹಾವನೂರ ಮುದ್ರಣಯಂತ್ರ ನಡೆಸುವ ಮೂಲಕ ಜೀವನ ಕಟ್ಟಿಕೊಂಡಿದ್ದು, ಜೊತೆಗೆ ಹಾವನೂರು ಪ್ರತಿಷ್ಠಾನ ಸ್ಥಾಪಿಸುವ ಮೂಲಕ ಸಾಹಿತ್ಯಿಕ ಪರಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಸುಮಾರು 25 ವರ್ಷಗಳಿಂದ ನಿರಂತರವಾಗಿ ಸಾಹಿತ್ಯಿಕ ಚಟುವಟಿಕೆ ನಡೆಸುತ್ತ ಬಂದಿರುವ ಇವರು, ಪ್ರತಿ ವರ್ಷ ಪ್ರಕಟವಾಗುವ ಕಾದಂಬರಿಗಳನ್ನು ಆಹ್ವಾನಿಸಿ ಅವುಗಳಿಗೆ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ.

ಹಾವನೂರು ಪ್ರತಿಷ್ಠಾನದ ಮೂಲಕ ನಿರಂತರವಾಗಿ ಸಾಹಿತ್ಯಪೂರಕ ಚಟುವಟಿಕೆಗಳನ್ನು ಆಯೋಜಿಸಿ ಗಮನ ಸೆಳೆದಿದ್ದಾರೆ. ದಾರ್ಶನಿಕರಾದ ಕನಕದಾಸರು, ಶರೀಫ ಸಾಹೇಬರು, ಜನಕವಿ ಸರ್ವಜ್ಞ, ಕಾದಂಬರಿ ಪಿತಾಮಹ ಗಳಗನಾಥರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ವಿ.ಕೃ. ಗೋಕಾಕ, ಸು.ರಂ. ಯಕ್ಕುಂಡಿ, ಆಧುನಿಕ ವಚನಕಾರ ಮಹದೇವ ಬಣಕಾರ, ನಾಡೋಜ ಪಾಟೀಲ ಪುಟ್ಟಪ್ಪ ಹಾಗೂ ಚಂದ್ರಶೇಖರ ಪಾಟೀಲರ ಕುರಿತು ವಿಚಾರ ಸಂಕಿರಣಗಳನ್ನು ಪ್ರತಿಷ್ಠಾನದ ಮೂಲಕ ಆಯೋಜಿಸಿರುವುದು ವಿಶೇಷವಾಗಿದೆ.ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದರ್ಶಿಯಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಕ್ರಿಯಾ ಸಮಿತಿ ಸದಸ್ಯರಾಗಿ, ನಗರಸಭೆ ಸದಸ್ಯರಾಗಿ, ಹಾವೇರಿಯ ಸಿ.ಎಂ.ಸಿ. ಬ್ಯಾಂಕ್ ನಿರ್ದೇಶಕರಾಗಿ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ಮುಂತಾದ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದನ್ನು ಗುರುತಿಸಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಪ್ರೋತ್ಸಾಹ

ಹಾವನೂರ ಪ್ರತಿಷ್ಠಾನದ ಮೂಲಕ ಕಳೆದ ೨೮ ವರ್ಷಗಳಿಂದ ಸಲ್ಲಿಸಿದ ಸಾಹಿತ್ಯಿಕ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ ಗೌರವ ಸಂದಿರುವುದು ಸಂತೃಪ್ತ ಭಾವ ಮೂಡಿಸಿದೆ. ಮುಂದಿನ ದಿನಗಳಲ್ಲಿ ಸಾಹಿತ್ಯಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಮತ್ತಷ್ಟು ಪ್ರೋತ್ಸಾಹ ಸಿಕ್ಕಂತಾಗಿದೆ.