ಮೂಕಪ್ಪ ಶಿವಯೋಗಿ ಮಠದ ವಿರೂಪಾಕ್ಷ ಮಹಾಸ್ವಾಮೀಜಿ ಲಿಂಗೈಕ್ಯ

| Published : Sep 28 2024, 01:24 AM IST

ಮೂಕಪ್ಪ ಶಿವಯೋಗಿ ಮಠದ ವಿರೂಪಾಕ್ಷ ಮಹಾಸ್ವಾಮೀಜಿ ಲಿಂಗೈಕ್ಯ
Share this Article
  • FB
  • TW
  • Linkdin
  • Email

ಸಾರಾಂಶ

ರಟ್ಟೀಹಳ್ಳಿ ತಾಲೂಕಿನ ತಿಪ್ಪಾಯಿಕೊಪ್ಪದ ಮೂಕಪ್ಪ ಶಿವಯೋಗಿ ಮಠದ ಹಿರಿಯ ಪೀಠಾಧಿಪತಿ ವಿರೂಪಾಕ್ಷ ಮಹಾಸ್ವಾಮಿಗಳು (73) ಗುರುವಾರ ಮುಂಜಾನೆ ಲಿಂಗೈಕ್ಯರಾದರು.

ರಟ್ಟೀಹಳ್ಳಿ: ತಾಲೂಕಿನ ತಿಪ್ಪಾಯಿಕೊಪ್ಪದ ಮೂಕಪ್ಪ ಶಿವಯೋಗಿ ಮಠದ ಹಿರಿಯ ಪೀಠಾಧಿಪತಿ ವಿರೂಪಾಕ್ಷ ಮಹಾಸ್ವಾಮಿಗಳು (73) ಗುರುವಾರ ಮುಂಜಾನೆ ಲಿಂಗೈಕ್ಯರಾದರು.

ಶ್ರೀ ಮಠದ ಆವರಣದಲ್ಲಿ ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆ ತಾಲೂಕುಗಳಿಂದ ಬಂದ ಸಾವಿರಾರು ಭಕ್ತರು ಅಂತಿಮ ದರ್ಶನ ಪಡೆದರು. ನಂತರ ಶುಕ್ರವಾರ ಮುಂಜಾನೆ 8 ಗಂಟೆಯಿಂದ ತಿಪ್ಪಾಯಿಕೊಪ್ಪ, ಮಾಸೂರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪೂಜ್ಯರ ಪಾರ್ಥಿವ ಶರೀರದ ಮೆರವಣಿಗೆ ಜರುಗಿತು.

ಕ್ರಿಯಾ ಸಮಾಧಿ: ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಗಳ ಅಂತಿಮ ಯಾತ್ರೆ ನಂತರ ಶ್ರೀ ಮಠದಲ್ಲಿ ಕ್ರಿಯಾ ಸಮಾಧಿ ಕಾರ್ಯ ನೆರವೇರಿತು. ರಟ್ಟೀಹಳ್ಳಿ ಶ್ರೀಗಳು, ಹಾವೇರಿಯ ಹುಕ್ಕೇರಿ ಮಠದ ಶ್ರೀಗಳು, ಬೆಕ್ಕಿನಕಲ್ಮಠದ ಜಗದ್ಗುರು ಹಾಗೂ ವಿವಿಧ ಶ್ರೀಗಳು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಮೂಕಪ್ಪ ಶಿವಯೋಗಿಗಳು ಲಿಂಗೈಕ್ಯರಾದ ನಂತರ ವಿರೂಪಾಕ್ಷ ಮಹಾಸ್ವಾಮಿಗಳು ಪೀಠಾಧಿಪತಿಯಾಗಿ ಬಂದರು. ಕಾಯಕ ನಿಷ್ಠೆ, ಬಹುಭಾಷಾ ಪಂಡಿತರು ಆಗಿದ್ದ ಶ್ರೀ ಗಳು 1951ರ ಮಾ. 6ರಂದು ಜನಿಸಿದರು.

ಶಿರಸಿ ಬಣ್ಣದಮಠದ ಗುರುಸಿದ್ದ ಸ್ವಾಮೀಜಿ ಅವರ ಆಶೀರ್ವಾದ ಪಡೆದು ಹಾವೇರಿಯ ಸಿಂದಗಿ ಮಠದ ಶಾಂತವೀರ ಶ್ರೀಗಳಿಂದ ಲಿಂಗ ದೀಕ್ಷೆ ಪಡೆದು ಹುಬ್ಬಳ್ಳಿಯ ಹೊಸಮಠದ ಶಿವಬಸವ ಶ್ರೀಗಳಿಂದ ಆಧ್ಯಾತ್ಮ ವಿದ್ಯೆ ಬಳಿಕ 1985ರಲ್ಲಿ ರಟ್ಟೀಹಳ್ಳಿ ತಾಲೂಕಿನ ತಿಪ್ಪಾಯಿಕೊಪ್ಪ ಗ್ರಾಮದ ಮೂಕಪ್ಪ ಮಠ ಪ್ರವೇಶಿಸಿದರು.

ಅಂದು 6 ತಗಡುಗಳಿಂದ ಕೂಡಿದ ಮಠ ಇಂದು ಭಕ್ತರ ನೆರವಿನ ಹಸ್ತದಿಂದ ಹತ್ತಾರು ಕೋಟಿ ಮೌಲ್ಯದ ಬೃಹತ್ ಕಟ್ಟಡ ಹೊಂದಿದೆ. ಅಂದಿನಿಂದ ಇಂದಿನವರೆಗೂ ಶ್ರೀಗಳ ಕೃಪಾಶೀರ್ವಾದದಿಂದ ನಿತ್ಯ ಅನ್ನದಾಸೋಹ ಜರುಗುತ್ತ ಬಂದಿದೆ.

ಅಂತಿಮ ದರ್ಶನ: ಉಜ್ಜಯನಿ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ರಟ್ಟೀಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ಅಕ್ಕಿಆಲೂರಿನ ಶ್ರೀ ಶಿವಬಸವ ಸ್ವಾಮೀಜಿ, ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಸ್ವಾಮಿಗಳು, ನಾಗವಂದದ ಶಿವಯೋಗಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಕೂಡಲದ ಗುರುಮಹೇಶ್ವರ ಸ್ವಾಮೀಜಿ, ಬಿಜಕಲ್ ವಿರಕ್ತಮಠದ ಶಿವಲಿಂಗ ಸ್ವಾಮಿಗಳು, ವೀರಭದ್ರ ಸ್ವಾಮಿಗಳು ರಾಜಕೀಯ ನಾಯಕರು ಅಂತಿಮ ದರ್ಶನ ಪಡೆದರು.

ಗಣ್ಯರ ಸಂತಾಪ: ಹೈಕೋರ್ಟ್‌ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ಬಿ.ವೈ. ರಾಘವೇಂದ್ರ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಯು.ಬಿ. ಬಣಕಾರ, ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ್, ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಪಾಲಾಕ್ಷಗೌಡ ಪಾಟೀಲ್, ಎಸ್.ಎಸ್. ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಶ್ರೀ ಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.