ವಿರೂಪಾಕ್ಷಪ್ಪ ದೇವಲಾಪುರ ತಬಲಾ ಸೋಲೋ ಕಾರ್ಯಕ್ರಮ ಯಶಸ್ವಿ

| Published : Aug 30 2025, 01:01 AM IST

ವಿರೂಪಾಕ್ಷಪ್ಪ ದೇವಲಾಪುರ ತಬಲಾ ಸೋಲೋ ಕಾರ್ಯಕ್ರಮ ಯಶಸ್ವಿ
Share this Article
  • FB
  • TW
  • Linkdin
  • Email

ಸಾರಾಂಶ

ಬಳ್ಳಾರಿ ನಗರದ ಹವಾಂಭಾವಿ ಪ್ರದೇಶ ವಿರಾಟನಗರದ ಗಾನಯೋಗಿ ಕಲಾ ಕೇಂದ್ರದಲ್ಲಿ ಅಮರಾಪುರದ ಇಂಚರ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಡಿ. ವಿರೂಪಾಕ್ಷಪ್ಪ ದೇವಲಾಪುರ ಅವರಿಂದ ತಬಲಾ ಸೋಲಾ ಕಾರ್ಯಕ್ರಮ ಜರುಗಿತು.

ಬಳ್ಳಾರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜನೆಯಡಿ ನಗರದ ಹವಾಂಭಾವಿ ಪ್ರದೇಶ ವಿರಾಟನಗರದ ಗಾನಯೋಗಿ ಕಲಾ ಕೇಂದ್ರದಲ್ಲಿ ಅಮರಾಪುರದ ಇಂಚರ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಡಿ. ವಿರೂಪಾಕ್ಷಪ್ಪ ದೇವಲಾಪುರ ಅವರಿಂದ ತಬಲಾ ಸೋಲಾ ಕಾರ್ಯಕ್ರಮ ಜರುಗಿತು.

ಉದ್ಘಾಟಿಸಿ ಮಾತನಾಡಿದ ಹಿರಿಯ ರಂಗಭೂಮಿ ಕಲಾವಿದೆ ಆದವಾನಿ ಬಿ. ವೀಣಾಕುಮಾರಿ ಅವರು, ತಬಲಾ ಕಲಾವಿದ ವಿರೂಪಾಕ್ಷಪ್ಪ ಅವರ ಪ್ರತಿಭೆ ಹಾಗೂ ಈ ವರೆಗೆ ನೀಡಿರುವ ಕಲಾಸೇವೆ ಪ್ರಶಂಸಿದರು. ವಾದ್ಯ ಕಲಾವಿದರನ್ನು ಗುರುತಿಸುವುದು ಅತ್ಯಂತ ಕಾಳಜಿಯ ಕೆಲಸವಾಗಿದೆ. ಮುಖ್ಯವಾಹಿನಿಯ ಕಲಾವಿದರ ಜತೆಗೆ ವಾದ್ಯ ಕಲಾವಿದರನ್ನು ಸಹ ಗುರುತಿಸಿ, ಪ್ರೋತ್ಸಾಹಿಸುವಂತಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಹಿಂದುಸ್ತಾನಿ ಗಾಯಕ ಹಾಗೂ ಗಾನಯೋಗಿ ಕಲಾಕೇಂದ್ರದ ಮುಖ್ಯಸ್ಥ ದೊಡ್ಡಬಸವ ಗವಾಯಿ ಡಿ. ಕಗ್ಗಲ್ ಮಾತನಾಡಿ, ವಿರೂಪಾಕ್ಷಪ್ಪ ದೇವಲಾಪುರ ಅವರು ಬಳ್ಳಾರಿ ಜಿಲ್ಲೆ ಸೇರಿದಂತೆ ರಾಜ್ಯ, ದೇಶ, ವಿದೇಶಗಳಲ್ಲೂ ತಬಲಾ ನುಡಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. 1987ರಲ್ಲಿ ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ತಬಲಾ ವಾದನ ಗುರುಗಳಾದ ಸದಾಶಿವ ಪಾಟೀಲ್ ಗುರು ಸಂಗಪ್ಪ ಗಂಜಾಳ್ ಗುತ್ತರಗಿ ಶರಣಪ್ಪನವರ ಬಳಿ ಅನೇಕ ವರ್ಷಗಳ ಕಾಲ ಅಭ್ಯಾಸ ಮಾಡಿದ ವಿರೂಪಾಕ್ಷಪ್ಪನವರು ಜೂನಿಯರ್, ಸೀನಿಯರ್, ವಿದ್ವತ್ ತಬಲಾ ಅಭ್ಯಾಸ ಮಾಡಿ ಆನಂತರ ಮಠದಿಂದ ಹಿಂದುರುಗಿ ನಾಟಕ, ಬಯಲಾಟ, ಸುಗಮ ಸಂಗೀತ, ವಚನ ಗಾಯನ, ಜಾನಪದ ಹಾಡುಗಾರರಿಗೆ ತಬಲಾ ನುಡಿಸಿ ನಾಡಿನಾದ್ಯಂತ ಮನೆಮಾತಾಗಿದ್ದಾರೆ ಎಂದು ತಿಳಿಸಿದರು. ರಂಗಭೂಮಿ ಕಲಾವಿದ ಎಚ್‌. ತಿಪ್ಪೇಸ್ವಾಮಿ ಮುದ್ದಟನೂರು ಉಪಸ್ಥಿತರಿದ್ದರು. ವಿರಾಟನಗರ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.