ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ರಾಜ್ಯ ಸರ್ಕಾರದಿಂದ ಕನ್ನಡದ ಅಪರೂಪದ ನಟ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರಿಗೆ ಅತ್ಯುನ್ನತ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ನಗರದಲ್ಲಿ ಅಭಿಮಾನಿಗಳು ಸಂಭ್ರಮಿಸಿದರು.ನಗರದ ಸಾಲಗಾಮೆ ರಸ್ತೆಯ ಸರಸ್ವತಿ ದೇವಾಲಯ ವೃತ್ತದ ಬಳಿಯ ವಿಷ್ಣುವರ್ಧನ್ ಪ್ರತಿಮೆ ಮುಂದೆ ವಿಷ್ಣುಸೇನಾ ಸಂಘಟನೆಯ ಅಭಿಮಾನಿಗಳು ಸೇರುತ್ತ, ಪುಷ್ಪನಮನ ಸಲ್ಲಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತೋಷ ವ್ಯಕ್ತಪಡಿಸಿದರು.
ವಿಷ್ಣುಸೇನಾ ಜಿಲ್ಲಾ ಅಧ್ಯಕ್ಷ ಮಹಂತೇಶ್ ಮಾತನಾಡಿ, “ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿರುವುದು ಇಡೀ ರಾಜ್ಯದ ಅಭಿಮಾನಿಗಳಿಗೆ ಹಬ್ಬದ ಕ್ಷಣವಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು. ೨೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಸಾಹಸಸಿಂಹರ ಪ್ರತಿಯೊಂದು ಚಿತ್ರವೂ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದೆ. ಬೆಂಗಳೂರಿನಲ್ಲಿ ೧೦ ಗುಂಟೆ ಜಾಗ ನೀಡುವುದಾಗಿ ಸರ್ಕಾರ ಹೇಳಿರುವುದು ಸಂತೋಷದ ವಿಚಾರ. ಅದರ ಪೂರ್ಣತೆಗೆ ಎಲ್ಲ ಅಭಿಮಾನಿಗಳು ಒಗ್ಗಟ್ಟಾಗಿ ಹೋರಾಡೋಣ ಎಂದು ಹೇಳಿದರು.ಕಲಾವಿದರ ಸಂಘದ ಅಧ್ಯಕ್ಷ ಕುಮಾರ್ ಮಾತನಾಡಿ, ವಿಷ್ಣುವರ್ಧನ್ ಎಂದರೆ ಸಂಸ್ಕಾರದ ವ್ಯಕ್ತಿತ್ವ. ಪರದೆ ಮೇಲೆ ಹೇಗೆ ಯಜಮಾನನಾಗಿ, ಕರುಣಾಮಯಿಯಾಗಿ, ಕರ್ಣನಾಗಿ ನಟಿಸಿದ್ದಾರೋ, ನಿಜ ಜೀವನದಲ್ಲಿಯೂ ಅದೇ ರೀತಿಯ ಸಜ್ಜನಿಕೆಯ ಬದುಕು ನಡೆಸಿದರು. ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವವಾದ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ವಿಷ್ಣುಸೇನಾ ಮುಂದಿನ ದಿನಗಳಲ್ಲಿ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲಿ, ಅವರ ಸ್ಮರಣೆ ಚಿರಶಾಶ್ವತವಾಗಿರಲಿ ಎಂದು ಹರ್ಷ ವ್ಯಕ್ತಪಡಿಸಿದರು.
ಅಡಿಗಲ್ಲ ಚಂದ್ರು ಮಾತನಾಡಿ, ನಟಿಸಿದಂತೆ ಇನ್ನೂ ಯಾರೂ ನಟಿಸಿಲ್ಲ. ಎಲ್ಲಾ ಪಾತ್ರಗಳಲ್ಲೂ ಜೀವ ತುಂಬಿದವರು. ಅಪಾರ ಹೃದಯವಂತರು. ಕರ್ನಾಟಕ ರತ್ನ ಪ್ರಶಸ್ತಿ ಸಿಕ್ಕಿರುವುದು ರಾಜ್ಯಕ್ಕೆ ಗೌರವದ ವಿಷಯ. ಈ ನಿರ್ಧಾರಕ್ಕೆ ಸರ್ಕಾರಕ್ಕೆ ಧನ್ಯವಾದಗಳು ಎಂದು ಹೇಳಿದರು.ಈ ಸಂದರ್ಭದಲ್ಲಿ ವಿಷ್ಣುಸೇನೆಯ ಹಿರಿಯ ಕಲಾವಿದರು ಯಲಗುಂದ ಶಾಂತಕುಮಾರ್, ರಘು ನಂದನ್, ತಮ್ಲಾಪುರ ಗಣೇಶ್, ಸುಧಾಕರ್, ಸಮಾಜಸೇವಕ ವಿಜಯಕುಮಾರ್ ಹಾಗೂ ಹಲವಾರು ಅಭಿಮಾನಿಗಳು ಉಪಸ್ಥಿತರಿದ್ದು, ವಿಷ್ಣುವರ್ಧನ್ ನಮ್ಮ ಹೃದಯಗಳಲ್ಲಿ ಸದಾ ಜೀವಂತ. ಸರ್ಕಾರದ ಈ ನಿರ್ಧಾರ ಅಭಿಮಾನಿಗಳಿಗೆ ಆನಂದದ ಹಬ್ಬ ಎಂದು ಘೋಷಿಸಿದರು.