ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ
ರಾಜ್ಯದಲ್ಲಿ ನಡೆಯುತ್ತಿರುವ ಗೋಹತ್ಯೆ ಮತ್ತು ಗೋವಿನ ವಿರುದ್ಧದ ಹಿಂಸೆಯನ್ನು ಖಂಡಿಸಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ಶನಿವಾರ ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ ಮತ್ತು ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಯಿತು.ಪೇಜಾವರ ಶ್ರೀಗಳು ನೀಡಿದ ಕರೆಗೆ ಸ್ಪಂದಿಸಿ ಶ್ರೀ ರಾಮಚಂದ್ರಾಪುರ ಮಠದ ಹವ್ಯಕ ಮಹಾಮಂಡಲ, ಮಾಣಿ ಮಠ ಸೇವಾ ಸಮಿತಿ ಮತ್ತು ಓಂ ಶ್ರೀ ಹರಿಃ ಓಂ ತತ್ಸತ್ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಮಧ್ಯಾಹ್ನ ವರೆಗೆ 108ಕ್ಕೂ ಹೆಚ್ಚು ಮಂದಿ ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ ಕೈಗೊಂಡರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಮನುಕುಲದ ಸುರಕ್ಷೆಗೆ ಗೋಮಾತೆಯ ರಕ್ಷಣೆ ಅನಿವಾರ್ಯ. ಗೋವಿನ ಮೇಲೆ ನಡೆಯುತ್ತಿರುವ ಪೈಶಾಚಿಕ ಕೃತ್ಯಗಳನ್ನು ತಡೆಯುವುದು ಸಮಸ್ತ ಮನುಕುಲದ ಹೊಣೆ. ಗೋಮಾತೆಯ ಹಾಲಿನ ಋಣ ತೀರಿಸುವ ಪುಟ್ಟ ಪ್ರಯತ್ನ ಗೋಮಾತೆಯ ಮಕ್ಕಳೆಲ್ಲ ಸೇರಿ ಆಕೆಗಾಗಿ ಒಂದು ದಿನ ಉಪವಾಸ ಕೈಗೊಂಡು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಈ ಮೂಲಕ ಸಮಸ್ತ ಹಿಂದೂ ಸಮುದಾಯದ ಸಾತ್ವಿಕ ಸಿಟ್ಟನ್ನು ಅಳುವವರಿಗೆ ತಲುಪಿಸಲಾಗುತ್ತಿದೆ ಎಂದು ಹೇಳಿದರು.ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಉದಯಶಂಕರ ನೀರ್ಪಾಜೆ ಮಾತನಾಡಿ, ಗೋಸಂರಕ್ಷಣೆ ಮತ್ತು ಗೋಜಾಗೃತಿಯಲ್ಲಿ ರಾಮಚಂದ್ರಾಪುರ ಮಠ ಸದಾ ಮುಂಚೂಣಿಯಲ್ಲಿ ನಿಂತಿದೆ. ಸಾಮೂಹಿಕ ವಿಷ್ಣು ಸಹಸ್ರನಾಮ ಸಾಮೂಹಿಕ ಪಠಣದಂಥ ಕಾರ್ಯಕ್ರಮದ ಮೂಲಕ ಅಹಿಂಸಾ ಮಾರ್ಗದಲ್ಲಿ ಪ್ರತಿಭಟನೆ ನಡೆಸುತ್ತಿರುವುದು ಔಚಿತ್ಯಪೂರ್ಣ ಎಂದು ಅಭಿಪ್ರಾಯಪಟ್ಟರು.ಮನುಕುಲದ ಉಳಿವಿಗೆ ಗೋಕುಲದ ಸಂರಕ್ಷಣೆ ಅನಿವಾರ್ಯ. ಗೋವಿಗೆ ಕಷ್ಟ ಬಂದಾಗ ಸ್ಪಂದಿಸಬೇಕಾದ್ದು ಸಮಸ್ತರ ಹೊಣೆ ಎಂದು ಮಾತೃತ್ವಮ್ ಸಂಘಟನೆ ಅಧ್ಯಕ್ಷೆ ಈಶ್ವರಿ ಬೇರ್ಕಡವು ಹೇಳಿದರು.ಹೊಸನಗರ ಗೋವರ್ಧನಗಿರಿಧಾರಿ ಗೋಪಾಲಕೃಷ್ಣ ದೇವಾಲಯ ಹಮ್ಮಿಕೊಂಡಿರುವ ವಿಷ್ಣುಸಹಸ್ರನಾಮ ಲೇಖನಯಜ್ಞದ ಜಿಲ್ಲಾ ಸಂಚಾಲಕಿ ಸ್ವರ್ಣಗೌರಿ ಸಾಯ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಮಾಣಿಮಠ ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್, ಗೋವಿನ ವಿರುದ್ಧ ಕ್ರೌರ್ಯ ಮೆರೆದಾಡುವಾಗಲೆಲ್ಲ ಸಾತ್ವಿಕರು ಒಟ್ಟಾಗಿ ಅದನ್ನು ಪ್ರತಿಭಟಿಸಬೇಕು. ಪ್ರತಿಭಟನೆ ಎಂದರೆ ಬೀದಿಗಳಿದು ಹೋರಾಟ ನಡೆಸುವುದು ಮಾತ್ರವಲ್ಲ, ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ಮತ್ತು ಉಪವಾಸ ವ್ರತ ಕೈಗೊಳ್ಳುವ ಮೂಲಕ ಗೋವಿನ ಜತೆಗೆ ನಾವಿದ್ದೇವೆ ಎನ್ನುವುದನ್ನು ಇಂದಿನ ಕಾರ್ಯಕ್ರಮ ಸಾರಿದೆ. ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವ ದೃಷ್ಟಿಯಿಂದಲೂ ಇಂಥ ಕಾರ್ಯಕ್ರಮಗಳು ಅರ್ಥಪೂರ್ಣ ಎಂದರು.
ಶ್ರೀಮಠದ ಡಾ.ವೈ.ವಿ. ಕೃಷ್ಣಮೂರ್ತಿ ಸಮಾರೋಪ ಭಾಷಣ ಮಾಡಿದರು. ಹವ್ಯಕ ಮಹಾಮಂಡಲ ಉಪಾಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲೆ, ಮುಳ್ಳೇರಿಯಾ ಮಂಡಲ ಪ್ರಧಾನ ಗುರಿಕ್ಕಾರರಾದ ಎಂ.ಜಿ.ಸತ್ಯನಾರಾಯಣ, ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್, ಮಂಗಳೂರು ಮಂಡಲ ಕಾರ್ಯದರ್ಶಿ ರಮೇಶ್ ಭಟ್ ಸರವು, ಪುತ್ತೂರು ವಲಯ ಅಧ್ಯಕ್ಷ ವೇಣುಗೋಪಾಲ ಮಾಂಬಾಡಿ, ಉರುವಾಲು ವಲಯ ಅಧ್ಯಕ್ಷ ಹತ್ತೊಕ್ಲು ಕೃಷ್ಣ ಜೋಯಿಸ, ಮಾತೃತ್ವಮ್ ಪ್ರಾಂತ್ಯ ಅಧ್ಯಕ್ಷೆ ಸುಮಾ ರಮೇಶ್ ಮತ್ತಿತರರು ಭಾಗವಹಿಸಿದ್ದರು. ಗೋಪೂಜೆಯೊಂದಿಗೆ ಆರಂಭವಾದ ಕಾರ್ಯಕ್ರಮ, ಗೋಸಂರಕ್ಷಣಾ ಪ್ರತಿಜ್ಞೆಯೊಂದಿಗೆ ಮುಕ್ತಾಯವಾಯಿತು.ಜನವರಿ 29 ರಿಂದ 31ರವರೆಗೆ ಮಾಣಿಮಠದ ವಾರ್ಷಿಕೋತ್ಸವ ಅಂಗವಾಗಿ ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರು ಮತ್ತು ಶಕಟಪುರದ ಶ್ರೀ ಕೃಷ್ಣಾನಂದ ತೀರ್ಥ ಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಆಯೋಜನೆಯಾಗಿದೆ.
ಜ. 29 ರಂದು ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ, ಭಜನೆ, ಮಾತೆಯರಿಂದ ಕುಂಕುಮಾರ್ಚನೆ, ಜ.30 ರಂದು 60 ವರ್ಷ ದಾಟಿದ 170ಕ್ಕೂ ಹೆಚ್ಚು ದಂಪತಿಗಳು ಭಾಗವಹಿಸುವ ಅಪೂರ್ವ ಸಂಧ್ಯಾಮಂಗಲ ಕಾರ್ಯಕ್ರಮ, 31ರಂದು ವಾರ್ಷಿಕೋತ್ಸವ ನಡೆಯಲಿದೆ.---------------
;Resize=(128,128))
;Resize=(128,128))
;Resize=(128,128))
;Resize=(128,128))