ಸಾರಾಂಶ
ಯಲ್ಲಾಪುರ: ಚಂದಗುಳಿಯ ಸಿದ್ಧಿವಿನಾಯಕನಿಗೆ ಭವ್ಯವಾದ ಆಲಯ ನಿರ್ಮಾಣಗೊಂಡಿದೆ. ಆಗಮ ಶಾಸ್ತ್ರದಂತೆ ಅಷ್ಟಬಂಧಯುಕ್ತ ಪುನರ್ ಪ್ರತಿಷ್ಠೆಯನ್ನು ವಿದ್ಯುಕ್ತವಾಗಿ ನೆರವೇರಿಸಲಾಗಿದೆ. ಈ ಗುಡಿಯಲ್ಲಿ ಜಗತ್ತಿನಲ್ಲಿ ಎಲ್ಲ ಪ್ರಾಚೀನ ಗಣಪತಿಯ ದರ್ಶನ ಪಡೆಯಬಹುದು. ಇಲ್ಲಿಗೆ ಆಗಮಿಸುವ ಭಕ್ತರಿಗೆ ವಿಶ್ವ ಗಣಪತಿಯ ದರ್ಶನ ಪಡೆದಂತಾಗುತ್ತದೆ ಎಂದು ಗೋಕರ್ಣದ ಆಗಮ ಶಾಸ್ತ್ರಜ್ಞ ಗಜಾನನ ಭಟ್ಟ ಹಿರೇ ಹೇಳಿದರು. ಅವರು ತಾಲೂಕಿನ ಚಂದಗುಳಿಯ ಘಂಟೆ ಗಣಪತಿ ದೇವಸ್ಥಾನದಲ್ಲಿ ಅಷ್ಟಬಂಧ ಮಹೋತ್ಸವ, ಶಿಖರ, ಧ್ವಜ ಪ್ರತಿಷ್ಠೆ, ನೂತನ ದೇವಾಲಯ, ಯಾಗಶಾಲೆ, ಗುರುಭವನ ಲೋಕಾರ್ಪಣೆ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಶಾಸ್ತ್ರದಂತೆ ಭಕ್ತಿಪೂರ್ವಕವಾಗಿ ಯೋಗದ ಮೂಲಕ ನಿತ್ಯ ಪೂಜೆ ಸಲ್ಲಬೇಕು. ಅದು ಅರ್ಚಕನ ಕರ್ತವ್ಯ. ಅಲ್ಲದೇ ಈ ಕ್ಷೇತ್ರದಲ್ಲಿ ಸದಾ ವೇದ ಪಾರಾಯಣ, ಜಪ, ಮಂತ್ರ ನಿರಂತರ ನಡೆಯುವಂತಾಗಬೇಕು. ವೈದಿಕರ ಸಿದ್ಧಿಯಿಂದ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗುತ್ತದೆ. ಗುಡಿಯ ಸುತ್ತಲೂ ಕಾಷ್ಟದ ಮೂಲಕ ಮುದ್ಗಲ ಪುರಾಣದಲ್ಲಿ ಉಲ್ಲೇಖಿಸಿದಂತೆ ೩೨ಗಣಪತಿಯ ಮೂರ್ತಿ ಕೆತ್ತಲಾಗಿದೆ. ಪೂಜೆಗೆ ಅಗತ್ಯಮುದ್ರೆಗಳನ್ನು, ೧೦೮ ನೃತ್ಯ ಭಂಗಿಯ ಹಸೆಚಿತ್ರಗಳನ್ನು ಕೆತ್ತಲಾಗಿದೆ. ಅಷ್ಟು ಭವ್ಯವಾಗಿ ಈ ಗುಡಿ ನಿರ್ಮಾಣಗೊಂಡಿದೆ.ಇಲ್ಲಿನ ಜನರ ತೀವ್ರ ಪ್ರಯತ್ನದಿಂದ ಇದು ಪವಿತ್ರ ಕ್ಷೇತ್ರವಾಗಿ ನಿರ್ಮಾಣಗೊಂಡಿದೆ. ಎಲ್ಲಿ ಸದಾ ಅನ್ನದಾನ ನಡೆಯುತ್ತದೆಯೋ, ಆ ಕ್ಷೇತ್ರ ವೃದ್ಧಿಸುತ್ತದೆ. ಇಲ್ಲಿ ೧೦೦೯ ಕಲಶ ಸ್ಥಾಪಿಸಿ ಕುಂಭಾಭಿಷೇಕ ಮಾಡಲಾಗಿದೆ. ಯಾವುದೇ ಕಾರಣಕ್ಕೂ ದೇವಸ್ಥಾನದ ಆವಾರದಲ್ಲಿ ಆಹಾರ ಸೇವನೆ ಸೇರಿದಂತೆ ಅಪವಿತ್ರ ಕ್ರಿಯೆಗಳು ನಡೆಯದಂತೆ ಅರ್ಚಕರು ಮತ್ತು ಸಮಿತಿಯವರು ನೋಡಿಕೊಳ್ಳುವುದು ಮಹತ್ವದ್ದಾಗಿದೆ ಎಂದರು. ಪುರೋಹಿತ ಗಣಪತಿ ಭಟ್ಟ ಬೆಳಖಂಡ ತಮ್ಮ ಆಶೀರ್ವಚನದಲ್ಲಿ ಚಂದಗುಳಿಯ ಗಣಪತಿ ರಾಜ್ಯ,ರಾಷ್ಟ್ರವ್ಯಾಪಿಯಾಗುತ್ತಿದ್ದಾನೆ. ಇಲ್ಲಿ ಒಂದು ಅಪೂರ್ವ ಶಕ್ತಿಯಿದೆ. ಇಷ್ಟಾರ್ಥ ಸಿದ್ಧಿ ದೇವತೆಯಾಗಿ ಇಲ್ಲಿ ವಿಜೃಂಭಿಸಿದ್ದಾನೆ. ಎಲ್ಲ ವೇದೋಕ್ತ ಕಾರ್ಯ ಸಾಂಗವಾಗಿ ನೆರವೇರಿಸಿದ್ದೇವೆ ಎಂದರು.ವಿದ್ವಾನ್ ನಾರಾಯಣ ಭಟ್ಟ ಮೊಟ್ಟೆಪಾಲ ಮಾತನಾಡಿ, ದೇವತಾ ಶಕ್ತಿ ವೃದ್ಧಿಸಲು ಪೂಜಾ ವಿಧಿವಿಧಾನಗಳು ಸದಾ ನಡೆಯಬೇಕು. ತನ್ಮೂಲಕ ದೇವರು ನಮಗೆ ನಮ್ಮ ಇಷ್ಟಾರ್ಥ ಒದಗಿಸಿಕೊಡುತ್ತಾನೆ. ಆ ನೆಲೆಯಲ್ಲಿ ನಾವು ಪರಿಪೂರ್ಣ ಕಾರ್ಯಕ್ರಮ ಪೂರೈಸಿದ್ದೇವೆ ಎಂದರು.ದೇವಸ್ಥಾನದ ಅಧ್ಯಕ್ಷ,ಸ್ವಾಗತ ಸಮಿತಿಯ ಅಧ್ಯಕ್ಷರೂ ಆದ ವಿದ್ವಾನ್ ಲಕ್ಷ್ಮೀ ನಾರಾಯಣ ಭಟ್ಟ ತಾರೀಮಕ್ಕಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಾ. ಮಹೇಶ ಭಟ್ಟ ಇಡಗುಂದಿ, ಚಂದ್ರಕಲಾ ಭಟ್ಟ ನಿರ್ವಹಿಸಿದರು. ಗಣಪತಿ ಭಟ್ಟ ಕೋಲಿಬೇಣ ವೇದಮಂತ್ರಗಳೊಂದಿಗೆ ಅಷ್ಟಕ ಪ್ರಸ್ತುತಪಡಿಸಿದರು. ಸ್ವಾಗತ ಸಮಿತಿ ಉಪಾಧ್ಯಕ್ಷ ಡಿ.ಶಂಕರ ಭಟ್ಟ ವಂದಿಸಿದರು.