ಸಾರಾಂಶ
ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನದಿಂದ ಸಂಸ್ಕೃತಿ ಉತ್ಸವ ಅಂಗವಾಗಿ ಇಲ್ಲಿನ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಪ್ರಭಾವತಿ ಮತ್ತು ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿತ ವಿಶ್ವ ಪ್ರಭಾ ಪುರಸ್ಕಾರವನ್ನು ಸಾಹಿತಿ ಜಯಂತ ಕಾಯ್ಕಿಣಿ ಅವರಿಗೆ ಪ್ರದಾನ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಸಂಸ್ಕೃತಿ ವಿಶ್ವ ಪ್ರತಿಷ್ಠಾನದಿಂದ ಸಂಸ್ಕೃತಿ ಉತ್ಸವ ಅಂಗವಾಗಿ ಇಲ್ಲಿನ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಪ್ರಭಾವತಿ ಮತ್ತು ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿತ ವಿಶ್ವ ಪ್ರಭಾ ಪುರಸ್ಕಾರವನ್ನು ಸಾಹಿತಿ ಜಯಂತ ಕಾಯ್ಕಿಣಿ ಅವರಿಗೆ ಪ್ರದಾನ ಮಾಡಲಾಯಿತು.ಈ ಸಂದರ್ಭ ಮಾತನಾಡಿದ ಅವರು, ಕಲೆ ಮತ್ತು ಸಾಹಿತ್ಯ ಬದುಕಿನ ಅನುಭವದಿಂದ ಹುಟ್ಟುವಂತಹದ್ದು, ವ್ಯಕ್ತದಿಂದ ಅವ್ಯಕ್ತ, ದೃಶ್ಯದಿಂದ ಅದೃಶ್ಯ, ಶ್ರಾವ್ಯದಿಂದ ಅಶ್ರಾವ್ಯ ಲೋಕದತ್ತ ನಮ್ಮೆಲ್ಲರನ್ನು ಕರೆದೊಯ್ಯುವ ಮಾಧ್ಯಮವೇ ಕಲೆ, ಸಾಹಿತ್ಯ ಎಂದರು.
ಇಂದು ಮನುಷ್ಯನನ್ನು ಮನುಷ್ಯನಿಂದ ದೂರ ಮಾಡುವ ವ್ಯವಸ್ಥೆಯಲ್ಲಿ ಕಲೆ, ಸಾಹಿತ್ಯಗಳು ಮಾತ್ರವೇ ಮನುಷ್ಯರನ್ನು ಹತ್ತಿರ ತರಬಲ್ಲವು, ಮನುಷ್ಯನ ಯಾತನೆಯನ್ನು ಕಡಿಮೆ ಮಾಡಬಲ್ಲವು ಎಂದರು.ನಾಡೋಜ ಕೆ.ಪಿ.ರಾವ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಅಭಿನಂದನಾ ಭಾಷಣ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಹರೀಶ್ಚಂದ್ರ, ಗಿಲಿಗಿಲಿ ಮ್ಯಾಜಿಕ್ ಸಂಸ್ಥೆಯ ಪ್ರೊ.ಶಂಕರ್, ಉದ್ಯಮಿ ಉಡುಪಿ ವಿಶ್ವನಾಥ ಶೆಣೈ, ಪ್ರಭಾವತಿ ವಿ.ಶೆಣೈ ಹಾಜರಿದ್ದರು.
ಅವಿನಾಶ್ ಕಾಮತ್ ನಿರೂಪಣೆಯಲ್ಲಿ ಕಾಯ್ಕಿಣಿಯವರ ಹಾಡುಗಳ ಗಾಯನ ನಡೆಯಿತು. ಶಿಲ್ಪಾ ಜೋಷಿ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ.ಸ್ವಾಗತಿಸಿದರು.