ಮೇಲು ಕೀಳೆಂಬ ಭಾವವನ್ನು ತೊರೆದು ಎಲ್ಲರೂ ಒಂದೇ ಎಂಬ ಐಕ್ಯಮಂತ್ರವನ್ನು ಜಗತ್ತಿಗೆ ವಚನಗಳ ಮೂಲಕ ಸಾರಿ ಹೇಳಿದ ಬಸವಣ್ಣರ ಸಾಮಾಜಿಕ ಕ್ರಾಂತಿಯನ್ನು ಪ್ರತಿಯೊಬ್ಬರೂ ಅರಿತು ಬಾಳಬೇಕು. ಅವರ ಹೋರಾಟವನ್ನು ಅರಿತರೆ ಮಹಿಳೆಯರು ಸ್ವಾಭಿಮಾನದ ಬದುಕು ಕಂಡುಕೊಂಡು ಸಾಮರಸ್ಯದಿಂದ ಬದುಕಲು ಸಾಧ್ಯವಾಗುತ್ತದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
12ನೇ ಶತಮಾನದಲ್ಲಿ ಸರ್ವರನ್ನೂ ಸಮಭಾವದಿಂದ ಕಂಡು ಅನುಭವ ಮಂಪಟ ಕಟ್ಟಿದ ಶ್ರೇಷ್ಠ ಸಂತ ವಿಶ್ವಗುರು ಬಸವಣ್ಣನವರ ಆದರ್ಶ ಪ್ರತಿಯೊಬ್ಬರಿಗೂ ದಾರಿ ದೀಪ ಎಂದು ಬೇಬಿಬೆಟ್ಟ ಮಠದ ಶಿವಬಸವ ಸ್ವಾಮಿಗಳು ಹೇಳಿದರು.ಪಟ್ಟಣದ ಶ್ರೀಜಗಜ್ಯೋತಿ ಬಸವೇಶ್ವರಸ್ವಾಮಿ ಸಂಘದಿಂದ ಶ್ರೀಕೂಡಲಸಂಗ ದೇವಾಲಯದ ಆವರಣದಲ್ಲಿ ನಡೆದ ಶ್ರೀಬಸವೇಶ್ವರರ ಜಯಂತಿ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಮೇಲು ಕೀಳೆಂಬ ಭಾವವನ್ನು ತೊರೆದು ಎಲ್ಲರೂ ಒಂದೇ ಎಂಬ ಐಕ್ಯಮಂತ್ರವನ್ನು ಜಗತ್ತಿಗೆ ವಚನಗಳ ಮೂಲಕ ಸಾರಿ ಹೇಳಿದ ಬಸವಣ್ಣರ ಸಾಮಾಜಿಕ ಕ್ರಾಂತಿಯನ್ನು ಪ್ರತಿಯೊಬ್ಬರೂ ಅರಿತು ಬಾಳಬೇಕು. ಅವರ ಹೋರಾಟವನ್ನು ಅರಿತರೆ ಮಹಿಳೆಯರು ಸ್ವಾಭಿಮಾನದ ಬದುಕು ಕಂಡುಕೊಂಡು ಸಾಮರಸ್ಯದಿಂದ ಬದುಕಲು ಸಾಧ್ಯವಾಗುತ್ತದೆ ಎಂದರು.ದಿವ್ಯ ಸಾನಿಧ್ಯ ವಹಿಸಿದ್ದ ಕುದೇರು ಮಠದ ಇಮ್ಮಡಿ ಗುರುಲಿಂಗ ಸ್ವಾಮೀಜಿ ಮಾತನಾಡಿ, ಸತ್ಯ ಪ್ರತಿಪಾದನೆ ಮಾಡುವ ಮೂಲಕ ಜಗತ್ತಿಗೆ ಬೆಳಕಾದ ಬಸವಾದಿ ಶಿವಶರಣರು ಹಾಕಿಕೊಟ್ಟ ಮೌಲ್ಯಯುತ ಜೀವನ ಪಥವನ್ನು ಪ್ರತಿಯೊಬ್ಬರೂ ಅನುಸರಿಸಿದರೆ ಸಮಾಜದ ಉದ್ಧಾರ ಸಾಧ್ಯ ಎಂದರು.
ಬಸವಣ್ಣನವರ ಭಾವಚಿತ್ರವಿದ್ದ ರಥೋತ್ಸವಕ್ಕೆ ಗುರುಮಲ್ಲೇಶ ಪಟ್ಟದ ಮಠದ ಗುರುಸ್ವಾಮೀಜಿ ಚಾಲನೆ ನೀಡಿದರು. ಪಟ್ಟಣದ ಪ್ರಮುಖ ರಾಜ ಬೀದಿಗಳಲ್ಲಿ ನಡೆದ ಬಸವಣ್ಣನವರ ಉತ್ಸವ ಹಾಗೂ ನಂದಿಕಂಬ, ವೀರಗಾಸೆ, ಪೂಜಾ ಕುಣಿತ, ಕೀಲು ಗೊಂಬೆ ಕುಣಿತ ಮೆರವಣಿಗೆಯಲ್ಲಿ ನೂರಾರು ಮಂದಿ ಬಸವ ಭಕ್ತರು ಪಾಲ್ಗೊಂಡಿದ್ದರು. ಬಳಿಕ ಅನ್ನ ಸಂತರ್ಪಣೆ ನಡೆಯಿತು.ಈ ವೇಳೆ ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ನಾಗರಾಜು, ಬಸವೇಶ್ವರ ಸಂಘದ ಅಧ್ಯಕ್ಷ ಜಗದೀಶ್, ದೀಪು, ಉಪಾಧ್ಯಕ್ಷ ಮಲ್ಲುಸ್ವಾಮಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್, ಶಿವಶಂಕರ್, ಪರಶಿವ ಮೂರ್ತಿ, ಶಿವಕುಮಾರ್, ಜಯಸ್ವಾಮಿ, ನಂಜುಂಡಸ್ವಾಮಿ, ಮಹದೇವಪ್ಪ, ನಂದೀಶ್, ನಿಂಗಪ್ಪ , ನಂಜುಂಡಸ್ವಾಮಿ ವಿಶ್ವನಾಥ್ , ಸೋಮಶೇಖರ್ , ಶೆಟ್ಟಹಳ್ಳಿ ಸುರೇಶ್ ಸೇರಿದಂತೆ ಇತರರು ಇದ್ದರು.