ಸಾರಾಂಶ
ಮೇಲು ಕೀಳೆಂಬ ಭಾವವನ್ನು ತೊರೆದು ಎಲ್ಲರೂ ಒಂದೇ ಎಂಬ ಐಕ್ಯ ಮಂತ್ರವನ್ನು ಜಗತ್ತಿಗೆ ವಚನಗಳ ಮೂಲಕ ಸಾರಿ ಹೇಳಿದ ಬಸವಣ್ಣನವರ ಸಾಮಾಜಿಕ ಕ್ರಾಂತಿಯನ್ನು ಪ್ರತಿಯೊಬ್ಬರೂ ಅರಿತು ನಡೆಯಬೇಕು. ಬಸವಣ್ಣ ಅವರ ಹೋರಾಟವನ್ನು ಅರಿತರೆ ಪ್ರತಿಯೊಬ್ಬರೂ ಸಾಮರಸ್ಯದಿಂದ ಬದುಕಲು ಸಾಧ್ಯ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
12ನೇ ಶತಮಾನದಲ್ಲಿ ಮೌಢ್ಯತೆ ವಿರುದ್ಧ ಹೋರಾಡಿದ ಶ್ರೇಷ್ಠ ಸಂತ ವಿಶ್ವಗುರು ಬಸವಣ್ಣನವರ ಆದರ್ಶ ಪ್ರತಿಯೊಬ್ಬರಿಗೂ ದಾರಿ ದೀಪವಾಗಿದೆ ಎಂದು ಪಟ್ಟಣ ಪುರಸಭೆ ಪ್ರಭಾರ ಅಧ್ಯಕ್ಷ ಎಂ.ಎಲ್.ದಿನೇಶ್ ಹೇಳಿದರು.ಪಟ್ಟಣದ ಶ್ರೀಜಗಜ್ಯೋತಿ ಬಸವೇಶ್ವರಸ್ವಾಮಿ ಸಂಘದಿಂದ ಶ್ರೀಕೂಡಲಸಂಗ ದೇವಾಲಯದ ಆವರಣದಲ್ಲಿ ನಡೆದ ಶ್ರೀಬಸವೇಶ್ವರರ ಜಯಂತಿ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಮೇಲು ಕೀಳೆಂಬ ಭಾವವನ್ನು ತೊರೆದು ಎಲ್ಲರೂ ಒಂದೇ ಎಂಬ ಐಕ್ಯ ಮಂತ್ರವನ್ನು ಜಗತ್ತಿಗೆ ವಚನಗಳ ಮೂಲಕ ಸಾರಿ ಹೇಳಿದ ಬಸವಣ್ಣನವರ ಸಾಮಾಜಿಕ ಕ್ರಾಂತಿಯನ್ನು ಪ್ರತಿಯೊಬ್ಬರೂ ಅರಿತು ನಡೆಯಬೇಕು. ಬಸವಣ್ಣ ಅವರ ಹೋರಾಟವನ್ನು ಅರಿತರೆ ಪ್ರತಿಯೊಬ್ಬರೂ ಸಾಮರಸ್ಯದಿಂದ ಬದುಕಲು ಸಾಧ್ಯ ಎಂದರು.ಬೇಬಿಬೆಟ್ಟದ ಶ್ರೀರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶ್ರೀಶಿವಬಸವ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿ, ಸತ್ಯ ಪ್ರತಿಪಾದನೆ ಮಾಡುವ ಮೂಲಕ ಜಗತ್ತಿಗೆ ಬೆಳಕಾದ ಬಸವಾದಿ ಶಿವಶರಣರು ಹಾಕಿಕೊಟ್ಟ ಮೌಲ್ಯಯುತವಾದ ಜೀವನ ಪಥವನ್ನು ಪ್ರತಿಯೊಬ್ಬರೂ ಅನುಸರಿಸಿದರೆ ಸಮಾಜದ ಉದ್ಧಾರ ಸಾಧ್ಯ ಎಂದರು.
ಬಸವಣ್ಣನವರು ರೈತರ ಕಾಯಕದಲ್ಲಿ ದೇವರನ್ನು ಕಂಡತವರು. ಕೃಷಿ ಕಾಯಕ ಮಾಡುವವರ ಪರವಾಗಿ ನಿಂತ ಮಹಾನ್ ಚೇತನ. ಬಸವಣ್ಣನವರ ಆದರ್ಶಗಳನ್ನು ಅನುಸರಿಸಿದರೆ ಸೌಹಾಧರ್ಯುತ ಬದುಕು ನಡೆಸಲು ಸಾಧ್ಯ ಎಂದರು.ಸಿದ್ದಲಿಂಗಯ್ಯ ಉಪನ್ಯಾಸ ನೀಡಿದರು. ನಂತರ ಬಸವಣ್ಣನವರ ಭಾವಚಿತ್ರವಿದ್ದ ರಥಕ್ಕೆ ಬೇಬಿಬೆಟ್ಟದ ಶ್ರೀ ಶಿವಬಸವ ಸ್ವಾಮೀಜಿ ಚಾಲನೆ ನೀಡಿದರು. ಬಳಿಕ ಪಟ್ಟಣದ ಪ್ರಮುಖ ರಾಜ ಬೀದಿಗಳಲ್ಲಿ ಬಸವಣ್ಣನವರ ಉತ್ಸವ ಸಾಗಿತು. ನಂದಿಕಂಬ, ವೀರಗಾಸೆ, ಪೂಜಾ ಕುಣಿತ, ಕೀಲು ಗೊಂಬೆ ಕುಣಿತ ಮೆರವಣಿಗೆಯಲ್ಲಿ ನೂರಾರು ಮಂದಿ ಬಸವಭಕ್ತರು ಪಾಲ್ಗೊಂಡಿದ್ದರು. ಈ ವೇಳೆ ಅನ್ನ ಸಂತರ್ಪಣೆ ನಡೆಯಿತು.
ಈ ವೇಳೆ ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ನಂದೀಶ್, ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್, ಪುರಸಭೆ ಸದಸ್ಯರಾದ ಎಸ್.ಎನ್.ದಯಾನಂದ್, ಪೂರ್ಣಿಮಾ, ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್. ಮಂಜುನಾಥ್ ಬೆಟ್ಟಹಳ್ಳಿ, ಬಸವೇಶ್ವರ ಸಂಘದ ಅಧ್ಯಕ್ಷ ಜಗದೀಶ್, ದೀಪು, ವಕೀಲ ಮರಿಸ್ವಾಮಿ, ಪತ್ರಕರ್ತ ಎಸ್. ಕುಮಾರ್, ನಂದೀಶ್, ನಿಂಗಪ್ಪ, ನಂಜುಂಡಸ್ವಾಮಿ ವಿಶ್ವನಾಥ್, ಪರಶಿವಮೂರ್ತಿ, ಸೋಮಶೇಖರ್, ಶೆಟ್ಟಹಳ್ಳಿ ಸುರೇಶ್ ಸೇರಿದಂತೆ ಇತರರು ಇದ್ದರು.