ಸಾರಾಂಶ
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ವೀರಶೈವ ಸಮಾಜ ಕಳೆದ ಹಲವಾರು ವರ್ಷಗಳಿಂದ ಸಮಾಜದ ಎಲ್ಲಾ ವರ್ಗಗಳ ಪ್ರೀತಿ, ವಿಶ್ವಾಸ ಗಳಿಸಿದೆ. ಮೌಢ್ಯಗಳಿಗೆ ಜ್ಞಾನದ ಸ್ಪರ್ಶ ನೀಡಿದವರೇ ಜಗಜ್ಯೋತಿ ಬಸವೇಶ್ವರರು. ಅಂತಹ ಮಹಾನ್ ಶಕ್ತಿ ಪಡೆದ ವೀರಶೈವ ಸಮಾಜಮುಖಿ ಕಾರ್ಯಚಟುವಟಿಕೆಗಳಿಗೆ ಸದಾ ಮುಂದು. ಇಂತಹ ಸಮಾಜದ ಏಳಿಗೆಗೆ ಸದಾ ಸಹಕರಿಸುವುದಾಗಿ ಶಾಸಕ ಟಿ.ರಘುಮೂರ್ತಿ ಭರವಸೆ ನೀಡಿದರು.ಭಾನುವಾರ ವೀರಶೈವ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಸಮಾವೇಶ ಹಾಗೂ ಘಟಕದ ಪದಾಧಿಕಾರಿಗಳ ಸೇವಾದೀಕ್ಷೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಇತ್ತೀಚೆಗೆ ನಡೆದ ವೀರಶೈವ ಸಮಾಜದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ 1 ಕೋಟಿ ರು. ಅನುದಾನ ನೀಡುವ ಭರವಸೆ ನೀಡಿದ್ದೆ. ಶೀಘ್ರದಲ್ಲೆ ಈ ಭರವಸೆ ಈಡೇರಲಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವೀರಶೈವ ಸಮಾಜದ ಬಂಧುಗಳು ತಮ್ಮ ಕಾರ್ಯಚಟುವಟಿಕೆಗಳ ಜತೆಗೆ ಬೇರೆ ಸಮುದಾದಯವರನ್ನು ಸಹ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಇವರನ್ನು ಜಾತಿಯತೆ ಇಲ್ಲ, ತಮ್ಮದೇಯಾದ ಚೌಕಟ್ಟಿನಲ್ಲಿ ಬದಕು ಕಟ್ಟಿಕೊಂಡಿದ್ದಾರೆ. ಇಂತಹ ಸಮಾಜ ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಥಾನಮಾನ ಗಳಿಸುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ, ನಿವೃತ್ತ ಐಪಿಎಸ್ ಅಧಿಕಾರಿ ಡಾ.ಶಂಕರ್ ಬಿದರಿ ಮಾತನಾಡಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೇವಲ ನಗರ ಪ್ರದೇಶಕ್ಕೆ ಸೀಮಿತವಾಗಿಲ್ಲ, ರಾಜ್ಯದ ಎಲ್ಲಾ ಜಿಲ್ಲಾ, ತಾಲೂಕು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಮಾಜದ ಸಂಘವನ್ನು ಸ್ಥಾಪನೆ ಮಾಡಲಾಗುತ್ತದೆ ಎಂದರು.
ವೀರಶೈವ ಲಿಂಗಾಯಿತ ಮಹಾಸಭಾ ಸಮಾಜದ ಅಭಿವೃದ್ಧಿಯ ಬಗ್ಗೆ ಹೆಚ್ಚು ವಿಶ್ವಾಸ ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಸಂಘದ ಚಟುವಟಿಕೆಯನ್ನು ಎಲ್ಲೆಡೆ ವಿಸ್ತರಿಸುವ ಕಾರ್ಯವನ್ನು ಮಾಡುತ್ತಾ ಬಂದಿದೆ. ಚಳ್ಳಕೆರೆಯಲ್ಲೂ ಅಧ್ಯಕ್ಷ ಡಿ.ಜೆ.ಕಿರಣ್‌ಶಂಕರ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ನಿರೀಕ್ಷೆಗೂ ಮೀರಿ ಹೆಚ್ಚಿನ ಸಂಖ್ಯೆಯ ಬಂಧುಗಳು ಆಗಮಿಸಿದ್ದೀರ, ರಾಜ್ಯದೆಲ್ಲೆಡೆ ಪ್ರವಾಸಕೈಗೊಂಡು ಲಿಂಗಾಯತ ಮಹಸಭಾವನ್ನು ಸಂಘಟಿಸಲಾಗುವುದು ಎಂದರು. ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ರಾಜ್ಯದ ಪ್ರಬಲ ಜಾತಿ ಸಂಘಟನೆಯಲ್ಲಿ ವೀರಶೈವ ಸಮಾಜವೂ ಒಂದಾಗಿದೆ. ಜನಸಂಖ್ಯೆ ದೃಷ್ಠಿಯಿಂದ ಈ ಸಮಾಜಕ್ಕೆ ಇನ್ನೂ ಹೆಚ್ಚಿನ ಸ್ಥಾನಮಾನದ ಅವಶ್ಯಕತೆ ಇದೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಸಮಾಜದ ಅನೇಕ ಹಿರಿಯರು ಶ್ರಮಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸಂಘಟನೆಯ ಕಾರ್ಯಚಟುವಟಿಕೆ ನಡೆಯುವಂತಾಗಲಿ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾಸಭಾದ ತಾಲೂಕು ಅಧ್ಯಕ್ಷ ಡಿ.ಜೆ.ಕಿರಣಶಂಕರ ಮಾತನಾಡಿ, ಇಲ್ಲಿನ ವೀರಶೈವ ಲಿಂಗಾಯತ ಸಮಾಜದ ಹಿರಿಯರ ಮಾರ್ಗದರ್ಶನದಲ್ಲಿ ವೀರಶೈವ ಲಿಂಗಾಯಿತ ಮಹಾಸಭಾ ಸಂಘಟನೆಯನ್ನು ಸಂಘಟಿಸಲಾಗುತ್ತಿದೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಾಲೂಕು ಸಮಾವೇಶಕ್ಕೆ ನಿರೀಕ್ಷೆಗೂ ಮೀರಿ ಸಮಾಜದ ಬಂಧುಗಳು ಆಗಮಿಸಿದ್ದಾರೆ. ಮುಂದಿನ ದಿನಗಳಲ್ಲಿ ಲಿಂಗಾಯತ ಮಹಾಸಭಾ ಶಕ್ತಿಶಾಲಿಯಾಗಿ ಹೊರಹೊಮ್ಮಲಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ತುಮಕೂರು ಹಿರೇಮಠದ ತಪೋವನದ ಡಾ.ಶಿವಾನಂದ ಶಿವಾಚಾರ್ಯ ಮಹಾಸ್ವಾಮಿ ಮಾತನಾಡಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನೂರಾರು ವರ್ಷಗಳ ಇತಿಹಾಸ ಹೊಂದಿದೆ. 1904 ರಲ್ಲೇ ಅಸ್ಥಿತ್ವಕ್ಕೆ ಬಂದಿದೆ. ಈ ಹಿಂದೆ ನಮ್ಮ ಮಠಾಧೀಶರು, ಸ್ವಾಮಿಗಳು, ಸಮಾಜದ ಹಿರಿಯರು ಸೇರಿ ಲಿಂಗಾಯತ ಸಮುದಾಯವನ್ನು ಒಗ್ಗೂಡಿಸಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ವೀರಶೈವ ಮತ್ತು ಲಿಂಗಾಯಿತ ಎಂಬ ಎರಡು ಪಂಗಡಗಳು ತಮ್ಮದೇಯಾದ ಕಾರ್ಯಚಟುವಟಿಕೆಯನ್ನು ಹೊಂದಿವೆ. ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಸಂಘಟನೆಗಳು. ತಪ್ಪು ಸಂದೇಶ ಎಂದಿಗೂ ಸಮುದಾಯದ ಮೇಲೆ ಹೇರುವಂತಾಗಬಾರು. ಈ ಬಗ್ಗೆ ಜಾಗೃತಿ ಅಗತ್ಯ. ಬಸವಣ್ಣನವರು ಅನ್ಯಜಾತಿಯನ್ನು ಗೌರವಿಸುತ್ತಿದ್ದರು. ಆದರೆ, ಇಂದು ನಮ್ಮ ಸಮುದಾಯದವರೇ ಅನ್ಯಜಾತಿಯತ್ತ ಹೆಜ್ಜೆ ಇಡುತ್ತಿರುವುದು ಕಂಡುಬಂದಿದೆ ಇದು ಅಪಾಯವೆಂದರು.ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ರಾಜ್ಯಾಧ್ಯಕ್ಷ ವಿಜಯ ಪಾಟೀಲ್, ರಾಷ್ಟ್ರೀಯ ಸದಸ್ಯ ಎ.ಎಂ.ಅಮೃತೇಶ್ವರ ಸ್ವಾಮಿ, ನಗರಸಭೆ ಅಧ್ಯಕ್ಷೆ ಶಿಲ್ಪಮುರುಳಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಜುಳಾ ನಾಗರಾಜು, ನಗರಸಭಾ ಸದಸ್ಯರಾದ ಸಿ.ಎಂ.ವಿಶುಕುಮಾರ್, ಸುಜಾತ, ಆರ್.ಮಂಜುಳಾ, ಸಾವಿತ್ರಮ್ಮ, ಟಿ.ಆರ್.ಕಿರಣ್‌ಶಂಕರ್, ಎಸ್.ಜಯಪ್ರಕಾಶ್, ವಿ.ಮಂಜುನಾಥ, ಟಿ.ಪ್ರಭುದೇವ್, ಗುರುಸಿದ್ದಮೂರ್ತಿ, ಆರ್.ಜಗದೀಶ್, ಡಿ.ಎಂ.ತಿಪ್ಪೇಸ್ವಾಮಿ, ಎ.ವಿಜಯೇಂದ್ರ, ಎಸ್.ರುದ್ರಮುನಿಯಪ್ಪ, ರಾಜಶೇಖರಪ್ಪ, ಎಚ್.ಗಂಗಣ್ಣ, ಎಚ್.ವಿ.ಪ್ರಸನ್ನಕುಮಾರ್, ಬಿ.ಎಸ್.ಶಿವಪುತ್ರಪ್ಪ, ಬಿ.ಎಂ.ಭಾಗ್ಯಮ್ಮ, ಎಸ್.ವಿ.ಮುರುಗೇಶ್, ಮಲ್ಲಿಕಾರ್ಜುನ್, ಸಿ.ವಿ.ರಮೇಶ್, ಎನ್.ರವಿಕುಮಾರ್, ಪ್ರಮೀಳಾಜಗದೀಶ್ ಮುಂತಾದವರು ಪಾಲ್ಗೊಂಡಿದ್ದರು.