ಮಹಿಳಾ ಸಮಾನತೆ ಶ್ರಮಿಸಿದ ವಿಶ್ವಗುರು ಬಸವಣ್ಣ: ಪ್ರಿಯಾಂಕಾ

| Published : May 11 2024, 12:30 AM IST

ಸಾರಾಂಶ

ಬಸವ ಜಯಂತಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿ, ಮಹಿಳಾ ಸಮಾನತೆ ಸಾರಿದ ಬಸವಣ್ಣನವರು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಅಸಮಾನತೆಯಿಂದ ತೊಳಲಾಡುತ್ತಿದ್ದ ಸಮಾಜದಲ್ಲಿ 12ನೇ ಶತಮಾನದಲ್ಲೇ ಸಮಾನತೆ ಸಾರಿದ ಕೀರ್ತಿ ಜಗಜ್ಯೋತಿ ಬಸವೇಶ್ವರರಿಗೆ ಸಲ್ಲುತ್ತದೆ. ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಒದಗಿಸುವ ಮೂಲಕ, ಮಹಿಳಾ ಸಮಾನತೆಗಾಗಿ ಪ್ರತಿಪಾದಿಸಿದ ಜಗತ್ತಿನ ಮೊದಲ ವ್ಯಕ್ತಿ ಎನಿಸಿದ್ದಾರೆ ಎಂದು ಕಾಂಗ್ರೆಸ್‌ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

ಇಲ್ಲಿನ ಮಹಾಂತೇಶ ನಗರದ ಬಸವಮಂಟಪದಲ್ಲಿ ಶುಕ್ರವಾರ ರಾಷ್ಟ್ರೀಯ ಬಸವ ದಳದಿಂದ ಆಯೋಜಿಸಲಾದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರು ಜಾತಿ, ಮತ ಭೇದ ತೊಡೆದು ಹಾಕಿ ಎಲ್ಲ ಜನಾಂಗವನ್ನು ಒಂದುಗೂಡಿಸುವಲ್ಲಿ ಮಹಾನ್ ಪಾತ್ರ ವಹಿಸಿದ ಧೀಮಂತ ಪುರುಷ. ಮಾನವ ಕುಲಕ್ಕೆ ಅವರು ಮಾನವತಾ ಸಂದೇಶ ನೀಡಿದ್ದಾರೆ. ದಲಿತರಿಗೆ ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ನೀಡಲು ಪ್ರೇರಣೆಯಾದರು. ಮಹಿಳೆಯರಿಗೆ ಸ್ವಾತಂತ್ರ್ಯ ಮತ್ತು ಸಮಾನತೆ ನೀಡಿ ಅವರ ಏಳಿಗೆಗೆ ಶ್ರಮಿಸಿದ ವಿಶ್ವ ಗುರು ಬಸವಣ್ಣ ಎಂದು ಬಣ್ಣಿಸಿದ ಅವರು, ಜಗಜ್ಯೋತಿ ಬಸವಣ್ಣನವರು ನೀಡಿದ ಪ್ರತಿಯೊಂದು ಆಚಾರ, ವಿಚಾರ, ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದುವರಿಸಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಲಿಂಗಾಯತ ಮುಖಂಡ ಶಂಕರ ಗುಡಸ ಮಾತನಾಡಿ, ವಿಶ್ವಗುರು, ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದೇವೆ. ಮೂಢನಂಬಿಕೆ, ಕಂದಾಚಾರದ ವಿರುದ್ಧ ಹುಟ್ಟಿರುವುದೇ ಲಿಂಗಾಯತ ಧರ್ಮ. ಕಾಯಕದ ಮಹತ್ವ, ದಾಸೋಹ, ಇಷ್ಟಲಿಂಗ, ವಚನಸಾಹಿತ್ಯ, ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಜಗತ್ತಿಗೆ ಕೊಟ್ಟ ಬಸವಣ್ಣ ಇಡೀ ಮನುಕುಲದ ಒಳಿತಿಗಾಗಿ ಶ್ರಮಿಸಿದವರು. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆಯಬೇಕಿದೆ ಎಂದರು.

ಇದೇ ವೇಳೆ ಬಾಲ ಬಸವಣ್ಣನವರ ಮೂರ್ತಿಯನ್ನು ಶರಣೆಯರು ತೊಟ್ಟಿಲಲ್ಲಿ ತೂಗಿ ವಚನಗಳನ್ನು ಹಾಡಿ ಸಂಭ್ರಮಿಸಿದರು. ಬಳಿಕ ಸಾರ್ವಜನಿಕರಿಗೆ ಸುಮಾರು ಐದು ಸಾವಿರ ಲೀಟರ್ ಶರಬತ್ ವಿತರಿಸಲಾಯಿತು. ಬಸ್, ಕಾರು, ಬೈಕ್‌ಗಳಲ್ಲಿ ತೆರಳುತ್ತಿದ್ದ ಜನರಿಗೆ ರಾಷ್ಟ್ರೀಯ ಬಸವದಳದ ಕಾರ್ಯಕರ್ತರು ಅತ್ಯಂತ ಉತ್ಸಾಹದಿಂದ ಶರಬತ್ ಹಂಚಿ ಸಂಭ್ರಮಿಸಿದರು. ನೆರೆದಿದ್ದ ಶರಣ, ಶರಣೆಯರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಈ ವೇಳೆ ನಗರ ಸೇವಕ ರಾಜಶೇಖರ ಡೋಣಿ, ರಾಷ್ಟ್ರೀಯ ಬಸವದಳದ ಮುಖಂಡರಾದ ಅಶೋಕ ಬೆಂಡಿಗೇರಿ, ಆರ್‌.ಕೆ.ಪಾಟೀಲ, ಆನಂದ ಗುಡಸ, ಮಹಾಂತೇಶ ಗುಡಸ, ಬಸವರಾಜ ಶೇಗಾವಿ ಸೇರಿ ಮತ್ತಿತರರು ಇದ್ದರು.

-----------

ಶ್ರೇಷ್ಠ ವಚನಗಳ ಮೂಲಕ ಮಾನವ ಕುಲಕ್ಕೆ ದಾರಿ ತೋರಿದ ಕಾಯಕಯೋಗಿ, ಜಗಜ್ಯೋತಿ ಬಸವೇಶ್ವರರ ಜಯಂತಿಯ ಭಕ್ತಿಪೂರ್ವಕ ನಮನಗಳು.

-ಪ್ರಿಯಾಂಕಾ ಜಾರಕಿಹೊಳಿ, ಕಾಂಗ್ರೆಸ್‌ ಯುವ ನಾಯಕಿ.