ವಿಶ್ವಕರ್ಮ ಸಮುದಾಯ ಭವನ: ಶಾಸಕನಿಂದ ಕಾಮಗಾರಿ ಪೂರ್ಣ ಭರವಸೆ

| Published : Sep 20 2024, 01:34 AM IST

ಸಾರಾಂಶ

ಪಟ್ಟಣದ ಗೊಟ್ರುವಳ್ಳಿ ರಸ್ತೆಯಲ್ಲಿರುವ ವಿಶ್ವಕರ್ಮ ಸಮುದಾಯ ಭವನದ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಮತ್ತೆ ಮರುಚಾಲನೆ ನೀಡಲು ನನ್ನ ವೈಯಕ್ತಿಕ ಸಹಾಯದ ಜತೆಗೆ ಸರ್ಕಾರದಿಂದ ಅನುದಾನ ಕೊಡಿಸುವುದಾಗಿ ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ಬೇಲೂರು: ಪಟ್ಟಣದ ಗೊಟ್ರುವಳ್ಳಿ ರಸ್ತೆಯಲ್ಲಿರುವ ವಿಶ್ವಕರ್ಮ ಸಮುದಾಯ ಭವನದ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಮತ್ತೆ ಮರುಚಾಲನೆ ನೀಡಲು ನನ್ನ ವೈಯಕ್ತಿಕ ಸಹಾಯದ ಜತೆಗೆ ಸರ್ಕಾರದಿಂದ ಅನುದಾನ ಕೊಡಿಸುವುದಾಗಿ ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ವಿಶ್ವಕರ್ಮನ 5 ಮುಖಗಳು ಪಂಚಭೂತಗಳನ್ನು ಸೂಚಿಸುತ್ತವೆ. ಆ ಮುಖದಿಂದ ಸೃಷ್ಟಿಯಾದವರು ಪಂಚ ಋಷಿಗಳು. ಆ ಪರಂಪರೆಯಿಂದ ರಕ್ತಗತವಾಗಿ ಬಂದವರು ವಿಶ್ವಕರ್ಮ ಸಮುದಾಯದವರು. ಸಮುದಾಯದ ಪರಂಪರೆಯ ಬಗ್ಗೆ ತಿಳಿದಾಗ ಮಾತ್ರ ಆಚರಣೆಗೆ ಮಹತ್ವ ದೊರಕುತ್ತದೆ ಎಂದು ಹೇಳಿದರು.

ಈಗಾಗಲೇ ಅವರು ವಿಶ್ವಕರ್ಮ ಸಮುದಾಯದ ಭವನ ನಿರ್ಮಿಸಿದ್ದು ಅದು ಪೂರ್ಣಗೊಂಡಿಲ್ಲ. ಈ ಕಾರಣದಿಂದ ನಾನು ನನ್ನ ವೈಯಕ್ತಿಕವಾಗಿ ಮತ್ತು ಸರ್ಕಾರದಿಂದ ಅನುದಾನವನ್ನು ನೀಡುವದಾಗಿ ತಿಳಿಸಿದ ಅವರು, ಈ ಜನಾಂಗದಲ್ಲಿ ಬರುವ ಎಲ್ಲಾ ಮುಖಂಡರು ತಮ್ಮ ನಡುವೆ ಇರುವ ವೈಮನಸ್ಸು ಬಿಟ್ಟು ಒಂದಾಗಿ ಸಮುದಾಯ ಭವನದ ಉದ್ಘಾಟನೆ ನಡೆಸಬೇಕು ಎಂದರು.

ವಿಶ್ವಕರ್ಮ ಸಮುದಾಯದ ಹೊರತಾಗಿ ಬೇರೆ ಯಾವ ಸಮುದಾಯ ಬದುಕಲು ಸಾಧ್ಯವಿಲ್ಲ. ಪ್ರತಿಯೊಂದು ಸಮುದಾಯದ ವೃತ್ತಿಗೆ ಬೇಕಾದ ಪರಿಕರಗಳ ನಿರ್ಮಾಣದಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಇದೆ. ವಿಶ್ವಕರ್ಮ ಸಮಯದಾಯದ ಹೆಗ್ಗಳಿಕೆಯನ್ನು ಹೇಳದೆ ಎಲ್ಲಾ ಸಮುದಾಯದ ಹೆಗ್ಗಳಿಕಯೊಂದಿಗೆ ನಾವು ಹೇಗೆ ಬೆರೆತಿದ್ದೇವೆ ಎಂಬುದನ್ನು ಹೇಳಿದಾಗ ಮಾತ್ರ ವಿಶ್ವಕರ್ಮ ಜಯಂತಿ ಆಚರಣೆಯ ಉದ್ದೇಶ ಸಾರ್ಥಕವಾಗುವುದು. ತಮ್ಮ ಕಸುಬು ನಂಬಿಕೊಂಡು ಜೀವನ ನಡೆಸುವ ಬಹಳಷ್ಟು ಕುಟುಂಬಗಳು ಸಂಕಷ್ಟದಲ್ಲಿವೆ. ಈ ಕಾರಣದಿಂದಲೇ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಕರ್ಮ ಜನಾಂಗದ ಸಮಗ್ರ ಅಭಿವೃದ್ಧಿಗಾಗಿ ವಿಶ್ವಕರ್ಮ ಯೋಜನೆಯನ್ನು ತರುವ ಮೂಲಕವಾಗಿ ಅವರಿಗೆ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.

ತಾಲೂಕು ವಿಶ್ವಕರ್ಮ ‌ಜನಾಂಗದ ಅಧ್ಯಕ್ಷ ಪುರುಷೋತ್ತಮಚಾರ್ ಮಾತನಾಡಿ, ನಮ್ಮ ಸಮಾಜದಿಂದ ೮ ನೇ ವರ್ಷದ ಆಚರಣೆ ಮಾಡುತ್ತಿದ್ದು, ಪುರಾತನ ಹಿಂದೂ ಸಂಸ್ಕೃತಿಯಲ್ಲಿ ವೇದ ಕಾಲ ಎಂಬುವುದು ಅತ್ಯಂತ ಪ್ರಾಚೀನವಾದದ್ದು. ಈ ಪ್ರಾಚೀನ ವೇದ ಶಾಸ್ತ್ರದಲ್ಲಿ ಉಲ್ಲೇಖಿಸಿದಂತೆ ಈ ಜಗತ್ತನ್ನು ಸೃಷ್ಟಿಸಲ್ಪಟ್ಟವರು ವಿಶ್ವಕರ್ಮ ಪರಬ್ರಹ್ಮನಿಂದ ಎಂದು ಉಲ್ಲೇಖಿಸಿದೆ. ಅದರಂತೆ ಅನಾದಿ ಎಂದರೆ ಹುಟ್ಟು ಇಲ್ಲದವವನು ಅನಂತ ಎಂದರೆ ಕೊನೆ ಇಲ್ಲದವನು. ಅಂದರೆ ಹುಟ್ಟು ಮತ್ತು ಸಾವು ಇಲ್ಲದವನು. ವಿಶ್ವಕರ್ಮ ಪರಬ್ರಹ್ಮನಿಂದ ಈ ಜಗತ್ತು ಸೃಷ್ಟಿಸಲ್ಪಟ್ಟಿದೆ. ಈ ವಿಶ್ವಕರ್ಮ ಪರಬ್ರಹ್ಮನು ಈ ಜಗತ್ತಿನ ಆಗುಹೋಗುಗಳನ್ನು ನಿಭಾಯಿಸಲು ಬ್ರಹ್ಮ, ವಿಷ್ಣು, ಮಹೇಶ್ವರ ತ್ರಿಮೂರ್ತಿಗಳನ್ನು ಮತ್ತು ಜಗನ್ಮಾಥೆಯಾದ ಶಕ್ತಿ ದೇವತೆಯನ್ನು ಸೃಷ್ಟಿಸಲಾಗಿದೆ ಎಂದರು.

ಮನು, ಮಯ, ತ್ವಸ್ತ, ಶಿಲ್ಪಿ, ವಿಶ್ವಜ್ಞ ಎನ್ನುವ 5 ಋಷಿಗಳನ್ನು ಈ ವಿಶ್ವಕರ್ಮ ಪರಬ್ರಹ್ಮ ಸೃಷ್ಟಿಸಿದನು. ಮನು ಎಂಬ ಋಷಿಯ ವಂಶಜರು ಕಬ್ಬಿಣದ ಕೆಲಸ. ಮಯ ಎಂಬ ಋಷಿಯ ವಂಶಜರು ಮರದ ಕೆಲಸ, ತ್ವಸ್ತ ಎಂಬ ಋಷಿಯ ವಂಶಸ್ಥರು ಕಂಚಿನ ಕೆಲಸ, ಶಿಲ್ಪಿ ಎಂಬ ಋಷಿಯ ವಮನಶಜರು, ಶಿಲಾ‌ ಶಿಲ್ಪವನ್ನು ರಚಿಸುವ ಕೆಲಸ, ವಿಶ್ವಜ಼್ಞ ಎಂಬುವರು ಆಭರಣ ತಯಾರಿಸುವ ಕೆಲಸ ಮಾಡುತ್ತಿದ್ದು ಈ ಪಂಚ ಋಷಿಯ ವಂಶದವರೇ ವಿಶ್ವಕರ್ಮ ವಂಶದವರು ಎಂದು ತಿಳಿಸಿದರು.

ತಹಸೀಲ್ದಾರ್ ಎಂ.ಮಮತ, ಕಸಾಪ ಮಾಜಿ ಅಧ್ಯಕ್ಷ ಬಿ.ಎಲ್.ರಾಜೇಗೌಡ, ಮಾಜಿ ಕಸಾಪ ಅಧ್ಯಕ್ಷ ಮ.ಶಿವಮೂರ್ತಿ, ಸಂಚಾಲಕ ವಿಶ್ವನಾಥ ಅಚಾರ್, ಮಾಲೂರು ವೆಂಕಟೇಶ್, ಉಪಾಧ್ಯಕ್ಷ ನಾರಾಯಣಚಾರ್, ಉಮೇಶ್ ಹಾಜರಿದ್ದರು.