ಸಾರಾಂಶ
ಸಮ್ಮೇಳನದಲ್ಲಿ ವಿವಿದ ರಾಜ್ಯಗಳ ವಿಶ್ವಕರ್ಮ ಸಮಾಜ ಬಾಂಧವರು ಭಾಗವಹಿಸುವರು.
ಕಾರ್ಕಳ: ಜನ್ಮಭೂಮಿ ಫೌಂಡೇಶನ್ ವತಿಯಿಂದ ದೆಹಲಿಯಲ್ಲಿ ಸೆ.28ರಂದು ವಿಶ್ವಕರ್ಮ ಸಮ್ಮೇಳನವನ್ನು ರಾಷ್ಟ್ರಮಟ್ಟದಲ್ಲಿ ಆಯೋಜನೆ ಮಾಡಲಾಗುವುದು ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ಪತ್ರಕರ್ತ ಮಾರುತಿ ಬಡಿಗೇರ್ ತಿಳಿಸಿದ್ದಾರೆ.
ಸಮ್ಮೇಳನದಲ್ಲಿ ದೆಹಲಿ, ಪಂಜಾಬ್, ಹರಿಯಾಣ, ಉತ್ತರಕಾಂಡ, ಉತ್ತರಪ್ರದೇಶ, ರಾಜಸ್ಥಾನ್, ಜಮ್ಮು, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರಗಳಿಂದ ವಿಶ್ವಕರ್ಮ ಸಮಾಜದ ಮುಖಂಡರು, ಯುವಕರು, ಮಹಿಳೆಯರು ಭಾಗವಹಿಸಲಿದ್ದಾರೆ. ಸಮ್ಮೇಳನದ ಉದ್ಘಾಟನೆ ಸಮಾರಂಭಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ ಹಾಗೂ ಸಂಸದ ಶ್ರೀನಿವಾಸ್ ಪೂಜಾರಿ ಕೋಟ ಅವರನ್ನು ಆಹ್ವಾನಿಸಲಾಗಿದೆ.ವಿಶ್ವಕರ್ಮ ಸಮಾಜದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮನೋವೈಜ್ಞರಾದ ಡಾ. ಸಿ.ಆರ್. ಚಂದ್ರಶೇಖರ್, ಡಾ.ಕೆ.ಸಿ. ರಾಜಣ್ಣ ಹಾಗೂ ಅಯೋಧ್ಯೆಯ ಶ್ರೀರಾಮನ ವಿಗ್ರಹವನ್ನು ಮಾಡಿರುವ ಮೈಸೂರಿನ ಶಿಲ್ಪಿ ಅರುಣ್ ಯೋಗರಾಜ್ ಅವರಿಗೆ ವಿಶೇಷ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ.ಸ್ವಾಮೀಜಿಗಳು, ಸಾಹಿತಿಗಳು, ಕಲಾವಿದರು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಾರೆ. ವಿಶ್ವಕರ್ಮ ಸಮಾಜದಲ್ಲಿ ಸಮಾಜ ಸೇವೆ ಮಾಡಿರುವ ಸಾಧಕರಿಗೆ ರಾಷ್ಟ್ರೀಯ ವಿಶ್ವಕರ್ಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಮಾರುತಿ ಬಡಿಗೇರ್ ತಿಳಿಸಿದ್ದಾರೆ.