ವಿಶ್ವಕರ್ಮರು ಸೃಷ್ಟಿಯ ಮೊದಲ ಶಿಲ್ಪಿ. ಅವರು ವಿಶ್ವದ ಸಮಸ್ತ ನಿರ್ಮಾಣ ಕಾರ್ಯಕ್ಕೆ ಮೂಲ ಪುರುಷರು. ಅವರ ಕುಶಲಕಲೆ, ಸೃಜನಶೀಲತೆ ಇಂದಿನ ಸಮಾಜಕ್ಕೆ ದಾರಿದೀಪವಾಗಿದೆ.
ಕನ್ನಡಪ್ರಭ ವಾರ್ತೆ ಮುಂಡರಗಿ
ವಿಶ್ವಕರ್ಮರು ಸೃಷ್ಟಿಯ ಮೊದಲ ಶಿಲ್ಪಿ. ಅವರು ವಿಶ್ವದ ಸಮಸ್ತ ನಿರ್ಮಾಣ ಕಾರ್ಯಕ್ಕೆ ಮೂಲ ಪುರುಷರು. ಅವರ ಕುಶಲಕಲೆ, ಸೃಜನಶೀಲತೆ ಇಂದಿನ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಕಾಳಹಸ್ತೇಂದ್ರ ಸ್ವಾಮೀಜಿ ಹೇಳಿದರು.ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲೂಕು ಘಟಕ ಹಾಗೂ ಶ್ರೀ ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಕಮಿಟಿಯಿಂದ ಆಯೋಜಿಸಿದ್ದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ವಿಶ್ವಕರ್ಮರು ಇತರ ಸಮಾಜದೊಟ್ಟಿಗೆ ಸಹಬಾಳ್ವೆಯಿಂದ ಜೀವಿಸಿ ಅವರ ಮನಸ್ಸು ಗೆದ್ದು ಪ್ರಾಮಾಣಿಕವಾಗಿ ಕಾಯಕ ನಿಷ್ಠೆಯಲ್ಲಿ ತೊಡಗಬೇಕು. ಸಮಾಜದಲ್ಲಿರುವವರೆಲ್ಲರೂ ಸಂಘಟಿತರಾಗಿ ರಾಜಕೀಯ, ಧಾರ್ಮಿಕ, ಶೈಕ್ಷಣಿಕವಾಗಿ ಬಲಿಷ್ಠರಾಗಬೇಕು ಎಂದು ಕರೆ ನೀಡಿದರು.ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಇಡೀ ವಿಶ್ವ ನಿರ್ಮಾಣವಾಗುವಲ್ಲಿ ವಿಶ್ವಕರ್ಮರ ಪಾತ್ರ ದೊಡ್ಡದು. ಅವರನ್ನು ಬರೀ ಒಂದೇ ಸಮುದಾಯಕ್ಕೆ ಸಿಮೀತಗೊಳಿಸಬಾರದು. ವಿಶ್ವಕರ್ಮರು ಎಲ್ಲ ಸಮಾಜಕ್ಕೂ ಸೀಮಿತವಾದವರು. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ತಮ್ಮ ಮೂಲ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಲು ಮಕ್ಕಳಿಗೆ ಪ್ರೇರಣೆ ನೀಡಬೇಕು ಎಂದರು.
ಶ್ರೀ ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ರವೀಂದ್ರ ಉಪ್ಪಿನಬೆಟಗೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವರವಿಯ ಶ್ರೀ ಮೌನೇಶ್ವರ ಸ್ವಾಮೀಜಿ, ಕಾತರಕಿ-ಗುಡ್ಲಾನೂರು ಶ್ರೀ ವಿರೂಪಾಕ್ಷ ಸ್ವಾಮೀಜಿ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಮೌನೇಶ ಬಡಿಗೇರ ಮಾತನಾಡಿದರು. ಗಾಂಧಾರಿ ವಿದ್ಯೆಯಲ್ಲಿ ಇಂಡಿಯಾ ಬುಕ್‌ಆಫ್ ರೆಕಾರ್ಡ್ ಪುರಸ್ಕೃತ ವಿದ್ಯಾರ್ಥಿ ಜಾನವಿ ಬಡಿಗೇರ ಸೇರಿದಂತೆ ಅನೇಕರಿಗೆ ಸನ್ಮಾನಿಸಲಾಯಿತು.ಮಹಾದೇವಪ್ಪ ಪತ್ತಾರ, ಪಾಂಡುರಂಗ ಪತ್ತಾರ, ನಾರಾಯಣಪ್ಪ ಸೂಡಿ, ರಾಮಚಂದ್ರಪ್ಪ ಬಡಿಗೇರ ಉಪಸ್ಥಿತರಿದ್ದರು. ಜಯಶ್ರೀ ಅಳವಂಡಿ ಪ್ರಾರ್ಥಿಸಿದರು. ರಾಜೇಶ ಅಥಣಿ ಸ್ವಾಗತಿಸಿದರು. ಎನ್.ಎಂ. ಬಡಿಗೇರ ನಿರೂಪಿಸಿದರು. ರಾಘವೇಂದ್ರ ಕಮ್ಮಾರ ವಂದಿಸಿದರು.