ಸಾರಾಂಶ
ಗದಗ: ದೇಶಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ. ಆರ್ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ನಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ವಿಶ್ವಕರ್ಮ ಜಯಂತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ದೇಶದ ಬೆನ್ನೆಲಬು ರೈತನಾದರೆ ರೈತನಿಗೆ ಹೊಲದಲ್ಲಿ ಉಳುಮೆ ಮಾಡಲು ಉಪಯೋಗಿಸುವ ಸಲಕರಣೆ ಪೂರೈಕೆ ಮಾಡುವವರು ವಿಶ್ವಕರ್ಮದವರಾಗಿದ್ದಾರೆ. ಭಾರತೀಯ ಸಂಸ್ಕೃತಿ ಬೆಳೆಸಿದವರು ವಿಶ್ವಕರ್ಮರು. ದೇಶದಲ್ಲಿ ವಿವಿಧ ಐತಿಹಾಸಿಕ ದೇವಾಲಯ ನಿರ್ಮಾಣ ಮಾಡಿದ ಹಿರಿಮೆ ವಿಶ್ವಕರ್ಮರಿಗೆ ಸಲ್ಲುತ್ತದೆ. ಶ್ರಮ ಹಾಗೂ ಕಾಯಕ ನಿಷ್ಠೆ ಇನ್ನೊಂದು ಹೆಸರೇ ವಿಶ್ವಕರ್ಮರು. ವಿಶ್ವಕರ್ಮನೆಂಬುವನು ಇಲ್ಲದಿದ್ದರೆ ಈ ಜಗತ್ತಿಗೆ ಅಸ್ತಿತ್ವವೇ ಇರುತ್ತಿರಲಿಲ್ಲ. ಸಕಲ ವಿದ್ಯೆಗಳು ವಿಶ್ವಕರ್ಮನಿಂದಲೇ ಬಂದಿವೆ. ವೇದೋಪನಿಷತ್‌ಗಳು ಸಹ ವಿಶ್ವ ಕರ್ಮನನ್ನು ಕೊಂಡಾಡಿವೆ ಎಂದರು.
ರಾಜ ವಿಷ್ಣುವರ್ಧನನು ಹೊಯ್ಸಳ ಸಾಮ್ರಾಜ್ಯದ ಪ್ರಸಿದ್ಧ ರಾಜನಾಗಿದ್ದ ಇವನ ರಾಣಿ ಶಾಂತಲೆಯು ಶಿಲ್ಪಕಲೆ ಹಾಗೂ ಸಂಸ್ಕೃತಿಯಲ್ಲಿ ಹೆಚ್ಚಿನ ಆಸಕ್ತಿಯುಳ್ಳವಳಾಗಿದ್ದಳು. ಬೇಲೂರಿನ ಚನ್ನಕೇಶವ ದೇವಾಲಯ, ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳ ನಿರ್ಮಾತೃ ವಿಶ್ವಕರ್ಮ ಸಮಾಜದ ಅಮರ ಶಿಲ್ಪಿ ಜಕಣಾಚಾರಿಯವರಾಗಿದ್ದಾರೆ. ಈಗಿನ ಮಕ್ಕಳಿಗೆ ವಿಶ್ವಕರ್ಮರ ಮಾರ್ಗದರ್ಶನ ತಿಳಿಸಬೇಕು ಹಾಗೂ ಸಾಹಿತ್ಯದ ಒಲವನ್ನು ಬೆಳೆಸಲು ಪ್ರೇರೇಪಿಸಬೇಕು. ಎಲ್ಲರೂ ಕಾಯಕ ತತ್ವ ಬೆಳೆಸಿಕೊಳ್ಳಬೇಕು ಎಂದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ ಮಾತನಾಡಿ, ರಾಜ್ಯ ಸರ್ಕಾರದಿಂದ ವಿಶ್ವಕರ್ಮ ಜಯಂತಿ ಆಚರಿಸುತ್ತಿರುವುದು ಸಂತೋಷ ವಿಷಯವಾಗಿದೆ. ಯಾವುದೇ ಸಾಧನೆಯಾಗಬೇಕಾದರೆ ಸಂಘಟನೆಯು ಬಹಳ ಮುಖ್ಯವಾಗಿರುತ್ತದೆ. ವಿಶ್ವಕರ್ಮ ಸಮಾಜದವರು ಒಗ್ಗಟ್ಟಾಗಿ ಮುಂದೆ ಬರಬೇಕು. ಸರ್ಕಾರದ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಹಿರಿಯ ಸಾಹಿತಿ ಡಿ.ವಿ. ಬಡಿಗೇರ ಉಪನ್ಯಾಸ ನೀಡಿ, ವಿಶ್ವಕರ್ಮರ ಪೂಜೆ ಈ ಮೊದಲು ವ್ಯಕ್ತಿಗರ ಹಾಗೂ ಮನೆಗಳಿಗೆ ಸೀಮಿತವಾಗಿತ್ತು. ಆದರೆ ಈಗ ರಾಜ್ಯ ಸರ್ಕಾರದ ಅದೇಶದನ್ವಯ ಜಯಂತಿ ಆಚರಣೆ ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಎಲ್ಲಿ ಶ್ರಮದ ಬೆವರ ಹನಿ ಇದೆ ಅಲ್ಲಿ ನಾನು ಇದ್ದೇನೆ ಎಂದು ವಿಶ್ವ ಕರ್ಮರು ಹೇಳುತ್ತಾರೆ. ವಿಶ್ವಕರ್ಮರು ಶ್ರಮ ಪ್ರಿಯರು, ಕಾಯಕ ಪ್ರಿಯರಾಗಿದ್ದಾರೆ. ವೇದ, ಪುರಾಣ, ಶೃತಿ, ಸ್ಮೃತಿಗಳಲ್ಲಿ ಸರ್ವಜ್ಞರ ವಚನಗಳಲ್ಲಿಯೂ ಸಹ ವಿಶ್ವ ಕರ್ಮರ ಪ್ರಾಮುಖ್ಯತೆ ಬಗ್ಗೆ ಉಲ್ಲೇಖಿಸಲಾಗಿದೆ. ವಿಶ್ವ ಕರ್ಮನಿಲ್ಲದ ಜಗತ್ತು ಶೂನ್ಯ. ಸಕಲ ವಿದ್ಯೆಗಳು ವಿಶ್ವಕರ್ಮನಿಂದಲೇ ಬಂದಿವೆ. ವಿಶ್ವ ಕರ್ಮನಿಲ್ಲದಿದ್ದರೆ ಜಗತ್ತಿನ ಅಸ್ತಿತ್ವ ಇರುತ್ತಿರಲಿಲ್ಲ ಎಂದು ಸಂತ ಕವಿ ವೇಮನರು ತಿಳಿಸಿದ್ದಾರೆ. ಸಕಲ ಚರಾಚರ ವಸ್ತುಗಳಲ್ಲ ವಿಶ್ವಕರ್ಮ ಇದ್ದಾನೆ. ವಿಶ್ವಕರ್ಮರು ಕಾಯಕ ಯೋಗಿಗಳು ಎಂದರು.ಈ ಸಂದರ್ಭದಲ್ಲಿ ಸಾಹಿತಿ ಗೋಪಾಲ ಬಡಿಗೇರ ರಚಿಸಿದ ಶ್ರೀವಿಶ್ವಕರ್ಮ ಸ್ತುತಿ ಮಾಲಾ ಪುಸ್ತಕ ಬಿಡುಗಡೆ ಮಾಡಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು.
ವಿಶ್ವಕರ್ಮ ಸಮಾಜ ಅಧ್ಯಕ್ಷ ದೇವೇಂದ್ರಪ್ಪ ಬಡಿಗೇರ, ವಿಶ್ವಕರ್ಮ ನೌಕರರ ಸಂಘದ ಅಧ್ಯಕ್ಷ ಆರ್.ಡಿ. ಕಡ್ಲಿಕೊಪ್ಪ, ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ.ಎಂ, ಕಾರ್ಮಿಕ ಇಲಾಖೆಯ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಶ್ರೀಧರ್ ಚಿನಗಡಿ, ಹರಿನಾಥಬಾಬು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವಿಶ್ವಕರ್ಮ ಸಮುದಾಯದ ಗಣ್ಯರು, ಹಿರಿಯರು ಇದ್ದರು.ಸುತಾರ ತಂಡದವರು ನಾಡಗೀತೆ ಪ್ರಸ್ತುತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಸ್ವಾಗತಿಸಿದರು. ವಿಶ್ವನಾಥ ಕಮ್ಮಾರ ನಿರೂಪಿಸಿದರು.