ಸಾರಾಂಶ
ಕಲೆ ಗುರುತಿಸಿಕೊಟ್ಟ ಏಕೈಕ ಸಮಾಜವೆಂದರೆ ಅದುವೇ ವಿಶ್ವಕರ್ಮ ಸಮಾಜ ಎಂದು ನರಗುಂದ ಪತ್ರಿವನಮಠದ ಡಾ. ಸಿದ್ಧವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನರೇಗಲ್ಲ:ಕಲೆ ಗುರುತಿಸಿಕೊಟ್ಟ ಏಕೈಕ ಸಮಾಜವೆಂದರೆ ಅದುವೇ ವಿಶ್ವಕರ್ಮ ಸಮಾಜ ಎಂದು ನರಗುಂದ ಪತ್ರಿವನಮಠದ ಡಾ. ಸಿದ್ಧವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸ್ಥಳೀಯ ಹೊಸಪೇಟೆ ಓಣಿಯ ಕಾಳಿಕಾದೇವಿ ದೇವಸ್ಥಾನದ ಲಕ್ಷದೀಪೋತ್ಸವ ಕಾರ್ಯಕ್ರಮದ ನಿಮಿತ್ತ ಜರುಗಿದ ಕಾಳಿಕಾದೇವಿ ಸಮುದಾಯ ಭವನ, ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಕೃತಿಯಲ್ಲಿ ನೈಸರ್ಗಿಕವಾಗಿ ದೊರೆಯುವ ಮಣ್ಣು, ಮರದ ಕಟ್ಟಿಗೆ, ಕಲ್ಲು, ಬಂಗಾರ, ಬೆಳ್ಳಿ ಸೇರಿದಂತೆ ವಿವಿಧ ವಸ್ತುಗಳಿಗೆ ಜೀವ ತುಂಬುವ ಕಲೆಯನ್ನು ಕರಗತ ಮಾಡಿಕೊಂಡು ವಿಶ್ವಕರ್ಮ ಸಮಾಜ ಈಗ ಕುಶಲಕರ್ಮಿಗಳಾಗಿ ಸಮಾಜದಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಪ್ರಯೋಜನವಿಲ್ಲವೆಂದು ಮೂಲೆಗಿರಿಸುವ ಮರ, ಲೋಹ ಹಾಗೂ ಕಲ್ಲಿಗೆ ಸುಂದರ ಆಕೃತಿ ನೀಡಿ ಶಿಲೆಯನ್ನಾಗಿಸುವ ನೈಪುಣ್ಯ ವಿಶ್ವಕರ್ಮರಿಗೆ ಇದೆ. ಈ ಸಮಾಜದವರು ಎಲೆಮರೆಯ ಕಾಯಿಯಂತೆ ಇದ್ದು, ವಸ್ತುವಿಗೆ ರೂಪ ನೀಡುತ್ತಾರೆ. ಇಂತಹ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದಬೇಕಾಗಿದೆ. ಸಮಾಜದಲ್ಲಿ ತಾಂತ್ರಿಕವಾಗಿ ಆವಿಷ್ಕಾರಗಳು ನಡೆಯುತ್ತಿದ್ದರೂ ವಿಶ್ವಕರ್ಮ ಸಮಾಜದವರು ಶಿಲೆಗೆ ನೀಡುವಂತಹ ರೂಪಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.ಶಿರೋಳ ಯಚ್ಚರಸ್ವಾಮಿ ಮಠದ ಅಭಿನವ ಯಚ್ಚರ ಸ್ವಾಮೀಜಿ, ಶಾಡಲಗೇರಿ ಏಕದಂಡಗಿಮಠದ ತೀರ್ಥೇಂದ್ರ ಸ್ವಾಮೀಜಿ, ನವಲಗುಂದ ಅಜಾತನಾಗಲಿಂಗಸ್ವಾಮಿ ಮಠದ ವೀರೇಂದ್ರ ಸ್ವಾಮೀಜಿ, ಮುರನಾಳದ ನಾಗಲಿಂಗ ಸ್ವಾಮೀಜಿ, ಇಳಕಲ್ಲ ವಿಶ್ವನಾಥ ಸ್ವಾಮೀಜಿ, ಶಿರಹಟ್ಟಿ ತಹಸೀಲ್ದಾರ್ ಅನಿಲ ಬಡಿಗೇರ, ಲಕ್ಷ್ಮೇಶ್ವರ ತಹಸೀಲ್ದಾರ್ ವಾಸುದೇವ ಸ್ವಾಮಿ, ಮುಖಂಡ ಮುತ್ತಣ್ಣ ಕಡಗದ ಮುಂತಾದವರು ಮಾತನಾಡಿದರು.
ನಾರಾಯಣ ವಡ್ಡಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಪಂ ಸದಸ್ಯ ಮಲ್ಲಿಕಾರ್ಜುನಗೌಡ ಭೂಮನಗೌಡ್ರ, ಶ್ರೀಶೈಲಪ್ಪ ಬಂಡಿಹಾಳ, ಸುಮಿತ್ರಾ ಕಮಲಾಪುರ, ವಿಶಾಲಾಕ್ಷಿ ಹೊಸಮನಿ, ಮಂಜುಳಾ ಹುರಳಿ, ಜ್ಯೋತಿ ಪಾಯಪ್ಪಗೌಡ್ರ, ಗಣ್ಯ ವರ್ತಕ ಶರಣಪ್ಪ ಹಂಜಿ, ರವೀಂದ್ರನಾಥ ದೊಡ್ಡಮೇಟಿ ಇತರರಿದ್ದರು.