ಸಾರಾಂಶ
ಪುತ್ತೂರಿನ ಬಿಜೆಪಿ ಮುಖಂಡನ ಪುತ್ರನಿಂದಾಗಿ ಗರ್ಭ ಧರಿಸಿರುವುದಾಗಿ ದೂರು ನೀಡಿದ್ದು, ಮಗುವಿಗೆ ಜನ್ಮವಿತ್ತ ಸಂತ್ರಸ್ತೆ ವಿದ್ಯಾರ್ಥಿನಿಯ ಮನೆಗೆ ಬುಧವಾರ ಭೇಟಿ ನೀಡಿದ ವಿಶ್ವಕರ್ಮ ಸಭಾ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಕುಟುಂಬದೊಂದಿಗೆ ಮಾತುಕತೆ ನಡೆಸಿದರು.
ಕನ್ನಡಪ್ರಭ ವಾರ್ತೆ ಪುತ್ತೂರು
ಅಪ್ರಾಪ್ತ ವಯಸ್ಸಿನ ಇಬ್ಬರ ನಡುವೆ ತಿಳಿದೋ ತಿಳಿಯದೆಯೋ ಸಂಬಂಧವಾದ ಘಟನೆ ಇದಾಗಿದ್ದು, ಇದನ್ನು ಉತ್ತಮ ರೀತಿಯಲ್ಲಿ ಪರಿಹರಿಸಿಕೊಳ್ಳುವ ಪ್ರಯತ್ನಗಳಾಗಬೇಕು. ಇಲ್ಲಿ ಎರಡೂ ಕುಟುಂಬಗಳು ತಮ್ಮ ಪ್ರತಿಷ್ಠೆಯನ್ನು ಬಿಟ್ಟು, ಅವರಿಬ್ಬರನ್ನು ಒಂದು ಮಾಡುವ ಕೆಲಸ ಮಾಡಬೇಕು. ಸಂತ್ರಸ್ತೆಯ ಕುಟುಂಬದ ಜೊತೆಗೆ ವಿಶ್ವಕರ್ಮ ಸಮಾಜವಿದೆ ಎಂದು ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಭರವಸೆ ನೀಡಿದ್ದಾರೆ. ಪುತ್ತೂರಿನ ಬಿಜೆಪಿ ಮುಖಂಡನ ಪುತ್ರನಿಂದಾಗಿ ಗರ್ಭ ಧರಿಸಿರುವುದಾಗಿ ದೂರು ನೀಡಿದ್ದು, ಮಗುವಿಗೆ ಜನ್ಮವಿತ್ತ ಸಂತ್ರಸ್ತೆ ವಿದ್ಯಾರ್ಥಿನಿಯ ಮನೆಗೆ ಬುಧವಾರ ಭೇಟಿ ನೀಡಿ ಕುಟುಂಬದೊಂದಿಗೆ ಮಾತುಕತೆ ನಡೆಸಿದ ಅವರು ಬಳಿಕ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. ಈ ವಿಚಾರದಲ್ಲಿ ನ್ಯಾಯಾಂಗದ ತೀರ್ಮಾನವೇ ಅಂತಿಮವಾಗಲಿದೆ. ಇದೊಂದು ಬೇಡಿಕೆ ಈಡೇರಿಸಲು ನಡೆಸುವ ಹೋರಾಟವಲ್ಲ. ಮನಸ್ಸುಗಳನ್ನು ಒಂದಾಗಿಸುವ ಕೆಲಸವಾಗಿದೆ. ಹರೆಯದ ವಯಸ್ಸಿನಲ್ಲಿ ನಡೆದ ಈ ತಪ್ಪಿನಲ್ಲಿ ಇಬ್ಬರದೂ ಸಮಪಾಲಿದೆ. ಇದನ್ನು ಒಪ್ಪಿಕೊಂಡು ಅವರಿಬ್ಬರು ಗಂಡ ಹೆಂಡತಿಯಾಗಿ ಬಾಳಿ ಬದುಕಬೇಕು ಎಂದು ಅವರು ಅಭಿಪ್ರಾಯಪಟ್ಟರು.ಈ ವಿಚಾರದಲ್ಲಿ ಯುವಕನಿಗೆ ಜೈಲು ಶಿಕ್ಷೆಯಾದಲ್ಲಿ ಆತನ ಆಯುಷ್ಯ ಮತ್ತು ಭವಿಷ್ಯ ಹಾಳಾಗಿ ಹೋಗಲಿದೆ. ಇಲ್ಲಿ ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂಬ ತೀರ್ಮಾನ ಬೇಡ. ಹೆಣ್ಣು ಮಗುವಿಗೆ ಜೀವನ ಬೇಕು. ಆಕೆಗೆ ಗಂಡ ಬೇಕು. ಹುಟ್ಟಿದ ಗಂಡು ಮಗುವಿಗೆ ಅಪ್ಪ ಬೇಕು. ಇದನ್ನು ಜೋಡಿಸುವ ಕೆಲಸ ನಾವು ಮಾಡಬೇಕು. ಕೆಲವೊಮ್ಮೆ ಎಲ್ಲವನ್ನು ಮೀರಿ ಇಂತಹ ಸನ್ನಿವೇಶ ಎದುರಾಗುತ್ತದೆ. ಆಗ ಮಾನವಿಯತೆ ಮುಖ್ಯ. ಯಾವುದೆ ಕಾರಣಕ್ಕೂ ಆ ಹೆಣ್ಣು ಮಗುವಿಗೆ ಭವಿಷ್ಯದಲ್ಲಿ ಕಷ್ಟ ಅನ್ನುವುದಕ್ಕೆ ವಿಶ್ವಕರ್ಮ ಸಮಾಜ ಬಿಡುವುದಿಲ್ಲ ಎಂದರು.ಭೂಗತ ಜಗತ್ತಿನ ಯಾರು ಈ ಬಗ್ಗೆ ಯುವಕನ ಮನೆಯವರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಗೊತ್ತಿದ್ದಲ್ಲಿ ನಾನೇ ಅವರಲ್ಲಿ ತಿಳಿಸುತ್ತಿದ್ದೆ. ಈ ಪ್ರಕರಣವನ್ನು ಹಣದಿಂದಲೋ ಅಥವಾ ರೌಡಿಸಂ ನಿಂದಲೋ ಬಗೆ ಹರಿಸಲು ಸಾಧ್ಯವಿಲ್ಲ. ಇದಕ್ಕೆ ಕಾನೂನು ಮೂಲಕವೇ ಪರಿಹಾರ ಕಂಡುಕೊಳ್ಳಬೇಕು ಹೊರತು ಪರ್ಯಾಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಕೆ.ಪಿ. ನಂಜುಂಡಿ ತಿಳಿಸಿದರು. ಸುದ್ಧಿಗೋಷ್ಠಿಯಲ್ಲಿ ಮೈಸೂರು ವಿಶ್ವಕರ್ಮ ಜಿಲ್ಲಾ ಸಂಘದ ಅಧ್ಯಕ್ಷ ರಿಶಿ ಆಚಾರ್ಯ, ದ.ಕ ಮತ್ತು ಉಡುಪಿ ಜಿಲ್ಲಾ ಒಕ್ಕುಟದ ಅಧ್ಯಕ್ಷ ಮಧು ಆಚಾರ್ಯ, ಸಂತ್ರಸ್ತೆ ವಿದ್ಯಾರ್ಥಿನಿ ತಾಯಿ ನಮಿತಾ ಮತ್ತು ಸಂತ್ರಸ್ತೆ ವಿದ್ಯಾರ್ಥಿನಿ ಚಿಕ್ಕಪ್ಪ ನೇಮಿಚಂದ್ರ ಇದ್ದರು.