ಸಾರಾಂಶ
ವೆಂಕಪ್ಪ ಆಚಾರ್ ಅಭಿಪ್ರಾಯ । ಹಿರಿಯ ವಿಶ್ವಕರ್ಮ ಸಮಾಜದ ದಂಪತಿಗೆ ಸನ್ಮಾನ । ಪ್ರತಿಭಾ ಪುರಸ್ಕಾರಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಭಗವಾನ್ ವಿಶ್ವಕರ್ಮರು ಜಗತ್ತನ್ನೇ ಸೃಷ್ಟಿ ಮಾಡಿದ್ದರು ಎಂದು ಶೃಂಗೇರಿ ನಿವೃತ್ತ ಕನ್ನಡ ಪ್ರಾಧ್ಯಾಪಕ ವೆಂಕಪ್ಪ ಆಚಾರ್ ತಿಳಿಸಿದರು.ಸಿಂಸೆಯ ವಿಶ್ವ ಕರ್ಮ ಸಮುದಾಯ ಭವನದಲ್ಲಿ ಬುಧವಾರ ವಿಶ್ವ ಕರ್ಮ ಸಮಾಜ ಸೇವಾ ಸಂಘ ಹಾಗೂ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ವಿಶ್ವ ಕರ್ಮ ಜಯಂತಿ ಉದ್ಘಾಟಿಸಿ ಮಾತನಾಡಿ ವೇದ, ಉಪನಿಷತ್, ಸೂಕ್ತ, ಆಗಮ, ಪುರಾಣಗಳು ನಮ್ಮ ದೇಶದ ಆಧ್ಯಾತ್ಮಿಕ ಆಸ್ತಿಯಾಗಿವೆ. ಋಗ್ವೇದದಲ್ಲಿ ವಿಶ್ವಕರ್ಮರ ಬಗ್ಗೆ ಉಲ್ಲೇಖವಿದೆ. ಜಗತ್ತಿನ ಸೃಷ್ಟಿಯಲ್ಲಿ ವಿಶ್ವಕರ್ಮರ ಪಾತ್ರ ಪ್ರಮುಖವಾಗಿದೆ. ವಿಶ್ವಕರ್ಮರು ಮರ ಕೆಲಸ, ಚಿನ್ನದ ಕೆಲಸ, ಕಲ್ಲಿನ ಕೆತ್ತನೆ ಮಾಡುತ್ತಿದ್ದರು. ಪುರಾಣದಲ್ಲಿ ಬರುವ ಪುಷ್ಪಕ ವಿಮಾನ, ದೊಡ್ಡ,ದೊಡ್ಡ ನಗರಗಳನ್ನು ಸೃಷ್ಟಿ ಮಾಡಿದ್ದರು ಎಂದು ಹೇಳಿದರು.
ಸೃಷ್ಟಿ ನಿಯಮದಂತೆ ನಮ್ಮ ಸಮುದಾಯದವರು ಈ ವೃತ್ತಿ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಇತ್ತೀಚಿಗೆ ಬೇರೆ ಸಮುದಾಯವರು ಸಹ ವಿಶ್ವ ಕರ್ಮರು ಮಾಡುವ ಕೆಲಸವನ್ನು ನಮ್ಮ ಸಹಕಾರ ಪಡೆದು ಮುಂದುವರಿಸಿದ್ದಾರೆ. ಈಗ ಸರ್ಕಾರದಿಂದಲೇ ಜನವರಿ 1ರಂದು ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ ಹಾಗೂ ಸೆ.17ರಂದು ವಿಶ್ವಕರ್ಮ ಜಯಂತಿ ಆಚರಿಸಲಾಗುತ್ತಿದೆ. ಉತ್ತರ ಭಾರತದಲ್ಲಿ ವಿಶ್ವಕರ್ಮ ಜಯಂತಿಯನ್ನುಅದ್ಧೂರಿಯಾಗಿ ಆಚರಿಸಲಾಗುತ್ತಿದೆ ಎಂದರು.ವಿಶ್ವ ಸಮಾಜ ಸೇವಾ ಸಂಘದ ಶೃಂಗೇರಿ ಕ್ಷೇತ್ರ ಅದ್ಯಕ್ಷ ಕೃಷ್ಣಯ್ಯ ಆಚಾರ್ ಮಾತನಾಡಿ, 2016ರಲ್ಲಿ ಸಿದ್ದರಾಮಯ್ಯ ಸರ್ಕಾರ ವಿಶ್ವಕರ್ಮ ಜಯಂತಿ ಪ್ರಾರಂಭಿಸಿದೆ. ವಿಶ್ವ ಕರ್ಮ ಜಯಂತಿಯಲ್ಲಿ ನಮ್ಮ ಸಮಾಜದ ಎಲ್ಲರೂ ಪಾಲ್ಗೊಳ್ಳಬೇಕು.ಜೊತೆಗೆ ಅಧಿಕಾರಿಗಳು, ಎಲ್ಲಾ ಸಮುದಾಯದ ಮುಖಂಡರು ಪಾಲ್ಗೊಳ್ಳಬೇಕು ಎಂದರು.
ಸರ್ಕಾರವು ಜನಗಣತಿ ಪ್ರಾರಂಭಿಸಿದ್ದು 22 ರಿಂದ ಪ್ರಾರಂಭವಾಗಲಿದೆ. ಇದರಲ್ಲಿ ವಿಶ್ವ ಕರ್ಮ ಕ್ರಿಶ್ಚಿಯನ್ ಎಂದಿದೆ.ಇದೇ ರೀತಿ ರಾಜ್ಯದ 45 ಸಮುದಾಯಗಳಲ್ಲೂ ಕ್ರಿಶ್ಚಿಯನ್ ಹೆಸರು ನಮೂದಿಸಿ ಗೊಂದಲ ಹುಟ್ಟುಹಾಕಲಾಗಿದೆ.ಆದ್ದರಿಂದ ಜನಗಣತಿಗೆ ಬಂದಾಗ ವಿಶ್ವ ಕರ್ಮ ಜನಾಂಗದ ಪ್ರತಿ ಮನೆಯವರು ವಿಶ್ವಕರ್ಮ ಎಂದೇ ನಮೂದಿಸಬೇಕು.ರಾಜ್ಯದಲ್ಲಿ ವಿಶ್ವ ಕರ್ಮರು 40 ಲಕ್ಷ ಜನರು ಇದ್ದೇವೆ. ಆದರೆ, ಸರ್ಕಾರದ ವರದಿಯಲ್ಲಿ 18 ಲಕ್ಷ ಎಂದಿದೆ. ಆದ್ದರಿಂದ ಪ್ರತಿಯೊಬ್ಬರೂ ವಿಶ್ವಕರ್ಮ ಎಂದು ನಮೂದಿಸಿ ನಮ್ಮ ಶಕ್ತಿ ತೋರಿಸಬೇಕಾಗಿದೆ ಎಂದರು.ತಾಲೂಕು ವಿಶ್ವ ಕರ್ಮ ಸೇವಾ ಸಂಘದ ಅಧ್ಯಕ್ಷ ರಾಜೇಶ್ ಆಚಾರ್ಯ, ಸಂಘದ ಉಪಾಧ್ಯಕ್ಷೆ ನಳಿನಾಕ್ಷ ಆಚಾರ್ಯ, ಶಿರಸ್ತಾರ್ ವೇಣುಗೋಪಾಲ್, ಗಾಯಿತ್ರಿ ವಿಶ್ವ ಕರ್ಮ ಮಹಿಳಾ ಸಂಘದ ಅಧ್ಯಕ್ಷೆ ಜಯಶ್ರೀ ಆಚಾರ್, ಉಪಾಧ್ಯಕ್ಷೆ ಶಾಲಿನಿ ಆಚಾರ್ಯ, ಶೃಂಗೇರಿ ಜೇಸಿ ಸಂಸ್ಥೆ ಅಧ್ಯಕ್ಷ ಅಶೋಕ್ ಆಚಾರ್ಯ ಇದ್ದರು.
ಇದೇ ವೇಳೆ ವಿಶ್ವಕರ್ಮ ಸಮಾಜದ ಹಿರಿಯರಾದ ಭಾಸ್ಕರ ಆಚಾರ್ಯ ದಂಪತಿ ಹಾಗೂ ಶೃಂಗೇರಿ ಜೇಸಿ ಅಧ್ಯಕ್ಷ ಅಶೋಕ್ ಆಚಾರ್ಯರನ್ನು ಸನ್ಮಾನಿಸಲಾಯಿತು.ವಿವಿಧ ಆಟೋಟ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಯಿತು. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮಂಜುನಾಥ ಆಚಾರ್ಯ ಸ್ವಾಗತಿಸಿದರು. ಎಂ.ಎ.ವಾಸುದೇವ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ನಾಗಲಾಂಬಿಕ ದೇವಸ್ಥಾನದಲ್ಲಿ ವಿಶ್ವ ಕರ್ಮ ಯಜ್ಞ, ವಿಶೇಷ ಪೂಜೆ ನಡೆಯಿತು.
-ಫೋಟೋ:ನರಸಿಂಹರಾಜಪುರ ಸಿಂಸೆಯಲ್ಲಿ ವಿಶ್ವಕರ್ಮ ಜಯಂತಿಯಲ್ಲಿ ಸಮಾಜದ ಹಿರಿಯರಾದ ಭಾಸ್ಕರ ಆಚಾರ್ಯ ದಂಪತಿಯನ್ನು ಸನ್ಮಾನಿಸಲಾಯಿತು. ವೆಂಕಪ್ಪ ಆಚಾರ್ಯ, ಕೃಷ್ಣಯ್ಯ ಆಚಾರ್ಯ ಮತ್ತಿತರರು ಇದ್ದರು.